ನಾರಾಯಣಪೂರ ಜಲಾಶಯದಿಂದ ತಗ್ಗಿದ ಹೊರಹರಿವು | ಕೊಳ್ಳೂರು ಸೇತುವೆ ಮೇಲೆ ಹರಿಯುತ್ತಿರುವ ನೀರು | ಬೆಳೆಗಳು ನೀರುಪಾಲು|
ಶಹಾಪುರ/ಸುರಪುರ[ಅ.25]: ಕಳೆದೆರಡು ದಿನಗಳಿಂದ ಮೂಡಿದ್ದ ನೆರೆ ಹಾವಳಿಯ ಆತಂಕ ಗುರುವಾರ ಕೊಂಚ ತಗ್ಗಿದೆಯಾದರೂ, ತೀವ್ರತೆಯಿಂದ ಜಿಲ್ಲೆಯಲ್ಲಿ ಮತ್ತೊಮ್ಮೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ರೈತರ ದುಗುಡ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ರಾಜ್ಯದ ಉತ್ತರ ಭಾಗದಲ್ಲಿ 704 ಸುರಿದ ಭಾರಿ ಮಳೆಯಿಂದಾಗಿ ಜಲಾಶಯಗಳ ಮೂಲಕ ನದಿಗೆ ಹರಿದು ಬಂದ ನೀರು ಪ್ರವಾಹದಮುನ್ಸೂಚನೆ ನೀಡಿ, ಜಿಲ್ಲೆಯ ಜನರ ಆತಂಕ ಮತ್ತೇ ಹೆಚ್ಚಿಸಿತ್ತು.
ಬುಧವಾರ ಸಂಜೆ 3.71 ಲಕ್ಷ ಕ್ಯುಸೆಕ್ ನೀರನ್ನು ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹೊರಬಿಟ್ಟ ಪರಿಣಾಮ, ಕೊಳ್ಳೂರು (ಎಂ) ಸೇತುವೆ ಮೇಲೆ ನೀರು ನುಗ್ಗಿ, ರಾಜ್ಯ ಹೆದ್ದಾರಿ-15 ರಮೇಲಿನ ಸಂಚಾರ ಕಳೆದೆರಡು ದಿನಗಳಿಂದ ಸ್ಥಗಿತಗೊಂಡಿದೆ. ಕೊಳ್ಳೂರು ಸುತ್ತಮುತ್ತ ಹೊಲಗದ್ದೆಗಳಲ್ಲಿ ನೀರು ನುಗ್ಗಿ, ಬೆಳೆಗಳು ಹಾಳಾಗಿವೆ. ಗುರುವಾರ ಹೊರಹರಿವಿನ ಪ್ರಮಾಣ ತಗ್ಗಿದೆ. ಗುರುವಾರ ಸಂಜೆ ಹೊರಹರಿವು 172704 ಕ್ಯೂಸೆಕ್ ನೀರನ್ನು ಕೃಷ್ಣಾನದಿಗೆ ಬಿಡಲಾಗಿದೆ.
undefined
ಬುಧವಾರದ ಪ್ರಮಾಣ ಹೋಲಿಸಿದರೆ, ಕಡಮೆಯಾಗಿದೆ. ನೀಲಕಂಠ ರಾಯನಗಡ್ಡೆ ಜನರ ಮಾತ್ರ ಎಂದಿನಂತೆ ಅತಂತ್ರದಲ್ಲಿದ್ದಾರೆ. ನದಿ ಪಾತ್ರದ, ಸುರಪುರ ಹಾಗೂ ಶಹಾಪುರ ತಾಲೂಕುಗಳ ಗ್ರಾಮಗಳಲ್ಲಿನ ಜನರ ಮತ್ತೇ ಆಘಾತ ಅನುಭವಿಸಿದ್ದಾರೆ. ಸುರಪುರ ತಾಲೂಕಿನ ನದಿತಟದ ಗ್ರಾಮಗಳಾದ ಲಿಂಗದಳ್ಳಿ, ಬಂಡೊಳ್ಳಿ, ತಿಂಥಿಣಿ, ದೇವಪುರ, ಶೆಳ್ಳಗಿ, ಮುಷ್ಠಳ್ಳಿ, ಚೌಡೇಶ್ವರಿಹಾಳ, ಸೂಗೂರು ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ 750 ಹೆಕ್ಟೇರ್‌ಗಿಂತಲೂ ಹೆಚ್ಚೂ ಬೆಳೆ ಹಾನಿ ಸಂಭವಿಸಿದೆ. ಆದರೆ, ಸೂಕ್ತ ಮಾಹಿತಿ ಕೊರತೆಯಿಂದಾಗಿ ದೇವಪುರ, ಬಂಡೊಳ್ಳಿ, ಲಿಂಗದಳ್ಳಿ, ತಿಂಥಿಣಿ ಗ್ರಾಮಸ್ಥರು ಅಧಿಕಾರಿಗಳ ಬಗ್ಗೆ ಆಕ್ರೋಶ ಗೊಂಡಿದ್ದಾರೆ.
ಬಾಲಕನ ಶವ ಪತ್ತೆ:
ಶಹಾಪುರ ತಾಲೂಕಿನದೋರನಹಳ್ಳಿ ಬಳಿ ಬುಧವಾರ ಸಂಜೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ 7 ವರ್ಷದ ಬಾಲಕ ಮಹೇಶ್‌ನ ಶವ ಗುರುವಾರ ನಸುಕಿನ ಜಾವ ಕಾಲುಬವೆಯಲ್ಲಿ ಪತ್ತೆಯಾಗಿದೆ. ನೀರು ಕುಡಿಯಲು ಕಾಲುವೆಗಿಳಿದಿದ್ದಾಗ, ಹೆಚ್ಚಿನ ನೀರಿನ ಆಳ ತಿಳಿಯದೆ ಜಾರಿಬಿದ್ದಿದ್ದಾನೆ. ಜಲಾಶಯದಿಂದ ನೀರು ಹೊರಬಿಟ್ಟಿದ್ದರಿಂದ ಕಾಲುವೆಯಲ್ಲಿ ನೀರಿನ ಪ್ರಮಾಣವೂ ಹೆಚ್ಚಿದೆ.
ಸುರಪುರ ವರದಿ:
ಜಲಾಶಯದಲ್ಲಿ ನೀರು ಹೊರಬಿಟ್ಟ ಪರಿಣಾಮ, ನದಿಯ ಹಿನ್ನೀರು ಜಮೀನುಗಳಲ್ಲಿ ಸಂಗ್ರಹವಾಗುತ್ತಿದೆ. ನದಿ ತಟದಲ್ಲಿರುವ ಗ್ರಾಮಗಳ ಜನರಿಗೆ ಈ ಬಗ್ಗೆ ತಾಲೂಕಾಡಳಿತ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿರುವ ಜನರು, ಕೆರಳುವಂತೆ ಮಾಡಿದೆ.
ಅಧಿಕಾರಿಗಳೇ ಬಂದಿಲ್ಲವೆಂದು ಆರೋಪ:
ನದಿಪಾತ್ರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ನದಿಯೂ ತುಂಬಿ ಹರಿಯುತ್ತಿದೆ. ಮಕ್ಕಳು, ಮಹಿಳೆಯರು ಬಟ್ಟೆ ತೊಳೆಯಲು ನದಿಯೆಡೆಸಾಗುತ್ತಾರೆ. ಮೀನು ಹಿಡಿಯಲು ಮೀನುಗಾರರು, ಹವ್ಯಾಸಿ ಮೀನುಗಾರರು ಹೋಗುತ್ತಾರೆ. ಡಂಗೂರು ಹಾಕಿಸಿದ್ದೇವೆ ಎಂದು ತಹಸೀಲ್ದಾರ್ ಹೇಳುತ್ತಾರೆ. ಗ್ರಾಮಸ್ಥರನ್ನು ಕೇಳಿದರೆ ಅಧಿಕಾರಿಗಳೇ ಬಂದಿಲ್ಲ. ಇನ್ನೆಲ್ಲಿ ಡಂಗೂರು ಎನ್ನುವ ಮಾತುಗಳನ್ನಾಡುತ್ತಾರೆ. ಇದೆಲ್ಲವನ್ನು ನೋಡಿದರೆ ಸಾರ್ವಜನಿಕರ ರಕ್ಷಣೆಯಲ್ಲಿ ತಾಲೂಕಾಡಳಿತ ನಿರ್ಲಕ್ಷ್ಯ ವಹಿಸಿರುವ ಆರೋಪವಿದ್ದು, ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಿದೆ.
ಗ್ರಾಮಸ್ಥರ ಆಕ್ರೋಶ:
ನದಿಗೆ ನೀರು ಹರಿಸುವ ಮುನ್ನ ಯಾವುದೇ ಎಚ್ಚರಿಕೆಗಳನ್ನು ನೀಡಿಲ್ಲ. ತತ್‌ಕ್ಷಣವೇ ನದಿಯಲ್ಲಿ ನೀರು ಹರಿದಿರುವುದು ರೈತರನ್ನುಆತಂಕಕ್ಕೆ ದೂಡಿದೆ. ಇಷ್ಟು ಪ್ರಮಾಣದಲ್ಲಿ ನದಿಗೆ ನೀರು ಹರಿಯುತ್ತಿದ್ದು, ಹೊಲಗಳಿಗೆ ನುಗ್ಗಿ ಬೆಳೆ ನಾಶವಾಗುತ್ತಿದೆ. ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕಿದ್ದ ತಾಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ ಎಂದು ನದಿ ಪಾತ್ರಗಳ ಗ್ರಾಮದ ಸಂತ್ರಸ್ತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ಅವಧಿಯ ಬೆಳೆಗಳ ನಾಶದಿಂದ ನದಿತಟದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಮೊದಲಿನ ಕಂತಿನ ಹಣ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸರ್ಕಾರದ ಆಡಳಿತದ ವೈಖರಿ ಗಮನಿಸಿದರೆ ರೈತರನ್ನು ರಕ್ಷಿಸುವ ಮನೋಭಾವ ಕಾಣಿಸುತ್ತಿಲ್ಲ.
ಇನ್ನೂ ತಲುಪಿಲ್ಲ ಪರಿಹಾರ:
ಕಳೆದೆರಡು ತಿಂಗಳ ಹಿಂದೆ ಸಂಭವಿಸಿದ ಪ್ರವಾಹದಿಂದ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆ ನಷ್ಟ ಉಂಟಾಗಿತ್ತು. ತಾಲೂಕು ಆಡಳಿತದ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ,ಕೃಷಿ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ವರದಿಸಲ್ಲಿಸಿದರೂ ಈವರೆಗೂ ಬೆಳೆ ನಷ್ಟ ಪರಿಹಾರ ಬಂದಿಲ್ಲ. ನದಿತಟದ ಗ್ರಾಮಗಳಾದ ಲಿಂಗದಳ್ಳಿ, ಬಂಡೊಳ್ಳಿ, ತಿಂಥಿಣಿ, ದೇವಪುರ, ಶೆಳ್ಳಗಿ, ಮುಷ್ಠಳ್ಳಿ,ಚೌಡೇಶ್ವರಿಹಾಳ, ಸೂಗೂರು ಸೇರಿದಂತೆ ಮತ್ತಿತರಗ್ರಾಮಗಳಲ್ಲಿ 750 ಹೆಕ್ಟೇರ್‌ಗಿಂತಲೂ ಹೆಚ್ಚೂ ಬೆಳೆಹಾನಿ ಸಂಭವಿಸಿದೆ. ಆದರೆ, ದೇವಪುರ, ಬಂಡೊಳ್ಳಿ, ಲಿಂಗದಳ್ಳಿ,ತಿಂಥಿಣಿ ಗ್ರಾಮಗಳಿಗೆ ಅಕಾರಿಗಳು ಭೇಟಿ ನೀಡಿಲ್ಲ. ತಾಲೂಕಾಡಳಿತ ಇದೆಯೇ ಇಲ್ಲವೋ ಎಂಬಅನುಮಾನ ಕಾಡುತ್ತಿದೆ ಎಂದು ರೈತರು ಹಾಗೂವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ರಸ್ತೆ ಸಂಚಾರ ಬಂದ್:
ಹೆಮನೂರು-ಕರ್ನಾಳ್‌ಸಂಚಾರ ಬಂದ್ ಆಗಿದೆ. ಇದರಿಂದ ರೈತರು ಕಾಲುಹಾದಿಯಲ್ಲಿ ನಡೆಯಬೇಕಿದೆ. ಆಲ್ದಾಳ ಮತ್ತು ಹಾವಿನಾಳ ರಸ್ತೆಯ ಹತ್ತಿರ ನೀರು ಬಂದಿದ್ದು, ಸಂಚಾರ ಬಂದ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಷ್ಠಳ್ಳಿ ಗ್ರಾಮದ ನದಿತಟದಲ್ಲಿದ್ದ ವಿದ್ಯುತ್‌ಪರಿವರ್ತಕಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಕಾಣದಾದ ಅಧಿಕಾರಿಗಳು:
ಕಳೆದೆರಡು ದಿನಗಳಿಂದಕೃಷ್ಣೆ ತುಂಬಿ ಹರಿಯುತ್ತಿದ್ದರೂ ತಾಲೂಕು ಆಡಳಿತಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ನದಿಪಾತ್ರದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದುಸಂತ್ರಸ್ತರು ದೂರುತ್ತಿದ್ದಾರೆ.
ಮುಷ್ಠಳ್ಳಿ ಗ್ರಾಮದಲ್ಲಿ ಅಪಾರ ಜಮೀನುಗಳು ನೀರಿನಲ್ಲಿ ಮುಳಗಿ ಹೋಗಿವೆ. ಕಳೆದ ಬಾರಿ ಪ್ರವಾಹದಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಬಾರಿ ಇತ್ತ ಅಧಿಕಾರಿಗಳು ತೆಲೆಹಾಕಿ ಮಲಗಿಲ್ಲ. ಡಂಗೂರು ಹಾಕಿಸಿಲ್ಲ.ಮಕ್ಕಳು, ಮಹಿಳೆಯರು ನದಿಕಡೆಗೆ ಹೋಗುತ್ತಾರೆ. ಇದನ್ನು ತಡೆಯಲು ತಾಲೂಕಾಡಳಿತ ಪೊಲೀಸರನ್ನು ನಿಯೋಜಿಸಬೇಕಿದೆ ಎಂದು ಮುಷ್ಠಳ್ಳಿ ಗ್ರಾಮದ ರೈತ ಶರಣಗೌಡ ಮೇಟಿ ಅವರು ಹೇಳಿದ್ದಾರೆ.
ನದಿ ತಟದ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆಈಗಾಗಲೇ ತಾಲೂಕಾಡಳಿತ ಗಮನಕ್ಕೆ ತರಲಾಗಿದೆ. ಪ್ರವಾಹ ಇಳಿಯುವ ತನಕ ಎಷ್ಟು ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂಬುದು ತಿಳಿಯ ಸಾಧ್ಯವಾಗುವುದಿಲ್ಲ. ನೆರೆ ಇಳಿಮುಖವಾದ ನಂತರ ಸರ್ವೇ ಮಾಡಿ ವರದಿ ನೀಡಲಾಗುವುದು ಎಂದು ಸುರಪುರದ ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ ಅವರು ತಿಳಿಸಿದ್ದಾರೆ.
ಜಲಾಶಯಕ್ಕೆ ಒಳಹರಿಯುವ ಪ್ರಮಾಣ 3.50 ಲಕ್ಷ ಕ್ಯುಸೆಕ್‌ಗಿಂತಲೂ ಅಧಿಕವಾಗಿದೆ. 21 ಗೇಟ್‌ಗಳಲ್ಲಿ 19 ಗೇಟ್‌ಗಳಿಂದ ನೀರು ಹೊರಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿದ್ದು, ಅಲ್ಲಿಂದ ನೀರು ಬರಲು ಮೂರ್ನಾಲ್ಕು ದಿನ ಆಗಬಹುದು. ನದಿ ಹರಿಯುವ ಪ್ರಮಾಣದಲ್ಲಿ ಹೆಚ್ಚು ಆಗಬಹುದು, ಕಡಿಮೆಯಾಗಲೂಬಹುದು. ಸದ್ಯ ನೀರು ಹರಿಯುವ ಪ್ರಮಾಣ ಇದೇ ರೀತಿ ನಾಲ್ಕೈದು ದಿನ ಮುಂದುವರಿಯಬಹುದು. ಜನರು ನದಿ ಕಡೆಗೆ ಬರದಂತೆ ಎಚ್ಚರವಹಿಸಬೇಕು ಎಂದು ನಾರಾಯಣಪುರ ಜಲಾಶಯ ಎಂಜಿನಿಯರ್ ಶಂಕರ ನಾಯ್ಕೊಡಿ ಅವರು ಹೇಳಿದ್ದಾರೆ.