3 ತಿಂಗಳ ಬಸುರಿ ಮತ್ತೆ ಗರ್ಭಿಣಿ!

By Kannadaprabha NewsFirst Published Apr 10, 2021, 8:10 AM IST
Highlights

3 ತಿಂಗಳ ಬಸುರಿ ಮತ್ತೆ ಗರ್ಭಿಣಿ| ಬ್ರಿಟನ್‌ನಲ್ಲೊಂದು ಅಪರೂಪದ ಪ್ರಕರಣ| ಇದು ‘ಸೂಪರ್‌ಫೆಟೇಷನ್‌’: ವೈದ್ಯರು

ಲಂಡನ್(ಏ.10): : ಒಮ್ಮೆ ಗರ್ಭ ಧರಿಸಿದವರು ಮತ್ತೊಮ್ಮೆ ಗರ್ಭಿಣಿಯಾಗುವುದು ಹೆರಿಗೆ ಬಳಿಕವೇ ಎಂಬುದು ನಂಬಿಕೆ. ಆದರೆ ಬ್ರಿಟನ್‌ನಲ್ಲಿ ಅಪರೂಪದ ವಿದ್ಯಮಾನವೊಂದು ನಡೆದಿದೆ. ಮೂರು ತಿಂಗಳ ಗರ್ಭಿಣಿಯನ್ನು ವೈದ್ಯರು ಸ್ಕಾ್ಯನ್‌ಗೆ ಒಳಪಡಿಸಿದಾಗ ಆಕೆಯ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದೆ. ಎರಡು ಭ್ರೂಣಗಳಿಗೂ ಮೂರು ವಾರಗಳ ಅಂತರವಿರುವುದು ವೈದ್ಯಕೀಯ ಲೋಕವನ್ನೇ ಚಕಿತಗೊಳಿಸಿದೆ.

ನಂಬಲು ಕಷ್ಟವಾದರೂ ಇದು ನಿಜ. ವಿಶೇಷ ಎಂದರೆ, ಮೂರು ವಾರಗಳ ಅಂತರದಲ್ಲಿ ಎರಡು ಬಾರಿ ಗರ್ಭ ಧರಿಸಿರುವ ಮಹಿಳೆ ಎರಡೂ ಮಕ್ಕಳಿಗೆ ಒಮ್ಮೆಲೆ ಜನ್ಮ ನೀಡಿದ್ದಾಳೆ. ತಾಯಿ- ಮಕ್ಕಳು ಆರೋಗ್ಯವಾಗಿವೆ. ಗರ್ಭಿಣಿಯಾಗಿರುವಾಗಲೇ ಮತ್ತೊಂದು ಮಗುವಿಗೆ ಗರ್ಭ ಧರಿಸುವುದಕ್ಕೆ ಸೂಪರ್‌ಫೆಟೇಷನ್‌ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ಎರಡು ಬಾರಿ ಅಂಡಾಶಯದಿಂದ ಅಂಡಾಣು ಬಿಡುಗಡೆಯಾದಾಗ ಈ ರೀತಿಯ ವಿದ್ಯಮಾನ ಘಟಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಗಿದ್ದೇನು?:

ರೆಬೆಕ್ಕಾ ರಾಬರ್ಟ್ಸ್‌ ಹಾಗೂ ರಿಸ್‌ ವೀವರ್‌ ದಂಪತಿಗೆ ಹಲವು ವರ್ಷಗಳ ಕಾಲ ಸಂತಾನ ಭಾಗ್ಯವಿರಲಿಲ್ಲ. ಗರ್ಭಧಾರಣೆ ಔಷಧವನ್ನು ವೈದ್ಯರು ನೀಡಿದ ಬಳಿಕ ರೆಬೆಕ್ಕಾ ಗರ್ಭವತಿಯಾಗಿದ್ದಳು. ಆ ಸುದ್ದಿ ತಿಳಿದು ದಂಪತಿ ಸಂತಸಗೊಂಡಿದ್ದರು. ಮೂರನೇ ತಿಂಗಳಿನಲ್ಲಿ ಮತ್ತೊಮ್ಮೆ ಸ್ಕಾ್ಯನ್‌ ಮಾಡಿದಾಗ ಅಚ್ಚರಿ ಕಾದಿತ್ತು. ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಬೆಳವಣಿಗೆಯಾಗಿರುವುದು ಕಂಡುಬಂದಿತ್ತು. ಒಂದು ಮಗುವಾದರೆ ಸಾಕು ಎನ್ನುತ್ತಿದ್ದ ಈ ದಂಪತಿಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತೊಡಗಿತ್ತು. ಎರಡೂ ಮಕ್ಕಳ ಅಂತರ ಮೂರು ವಾರಗಳಷ್ಟಿತ್ತು. ಏನಾಗುತ್ತಿದೆ ಎಂದು ವೈದ್ಯರಿಗೂ ಮೊದಮೊದಲು ಅರ್ಥವಾಗಲಿಲ್ಲ. ಕೊನೆಗೆ ಅದು ಸೂಪರ್‌ಫೆಟೇಷನ್‌ ಎಂಬುದು ತಿಳಿಯಿತು.

ಕೊನೆಕೊನೆಗೆ ಎರಡನೆ ಮಗು ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರು ಹೇಳತೊಡಗಿದರು. ರೆಬೆಕ್ಕಾ ಗಾಬರಿಗೊಂಡಿದ್ದರು. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಗಂಡು ಹಾಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವನ್ನು 95 ದಿನಗಳ ಕಾಲ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಇಡಲಾಗಿತ್ತು ಎಂದು ರೆಬೆಕ್ಕಾ ತಿಳಿಸಿದ್ದಾರೆ.

click me!