
ಹಾಲಿವುಡ್ ನಟ ವಿಲಿಯಂ ಶ್ಯಾಟ್ನರ್ ಅವರ ಕಿಡ್ನಿಯಿಂದ ತೆಗೆದ ಕಲ್ಲೊಂದು ಬರೋಬ್ಬರಿ 75,000 ಡಾಲರ್ಗೆ ಹರಾಜಾಗಿದೆ. 2006ರಲ್ಲಿ ಈ ಘಟನೆ ನಡೆದಿತ್ತು. (ಆಗಿನ ಭಾರತೀಯ ರುಪಾಯಿಗೆ ವಿನಿಮಯ ದರದ ಪ್ರಕಾರ ಇದು ಸುಮಾರು 30-35 ಲಕ್ಷ ರೂಪಾಯಿಗೂ ಹೆಚ್ಚು). ಇದನ್ನು ಕೇಳೋಕೆ ವಿಚಿತ್ರ ಅನ್ನಿಸಿದರೂ, ಈ ಸೇಲ್ ಹಿಂದೊಂದು ದೊಡ್ಡ ಮಾನವೀಯತೆಯ ಕಥೆಯಿದೆ. ಹರಾಜಿನಿಂದ ಬಂದ ಹಣ ಹಾಗೂ ಸಹನಟರ ದೇಣಿಗೆ ಸೇರಿಸಿ ಒಟ್ಟು 1 ಲಕ್ಷ ಡಾಲರ್ ಸಂಗ್ರಹಿಸಿದ ಶ್ಯಾಟ್ನರ್, ಅಮೆರಿಕದ ಲೂಸಿಯಾನದಲ್ಲಿ ಐದು ಜನರ ಕುಟುಂಬವೊಂದಕ್ಕೆ ಮನೆ ಕಟ್ಟಿಸಿಕೊಟ್ಟಿದ್ದಾರೆ.
'ಸ್ಟಾರ್ ಟ್ರೆಕ್' ಸರಣಿಯ ಕ್ಯಾಪ್ಟನ್ ಜೇಮ್ಸ್ ಟಿ. ಕಿರ್ಕ್ ಪಾತ್ರದ ಮೂಲಕ ಜಗತ್ತಿನಾದ್ಯಂತ ಫೇಮಸ್ ಆಗಿರುವ ಶ್ಯಾಟ್ನರ್, ಇತ್ತೀಚೆಗೆ 'Dropping Names with Brent and Jonny' ಎಂಬ ಯೂಟ್ಯೂಬ್ ಶೋನಲ್ಲಿ ಭಾಗವಹಿಸಿದ್ದರು. ಈ ವೇಳೆ 2006ರ ಘಟನೆಯನ್ನು ಅವರು ರಿವೀಲ್ ಮಾಡಿದ್ದಾರೆ. ಆ ಟೈಮ್ನಲ್ಲಿ ಅವರು 'ಬಾಸ್ಟನ್ ಲೀಗಲ್' ಎಂಬ ಟಿವಿ ಸೀರೀಸ್ನಲ್ಲಿ ನಟಿಸುತ್ತಿದ್ದರು. ಘಟನೆ ನಡೆದು ಹತ್ತು ವರ್ಷಗಳ ಬಳಿಕ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಕಿಡ್ನಿ ಸ್ಟೋನ್ ಆಪರೇಷನ್ ಆದ ಒಂದು ವಾರದ ಬಳಿಕ ಕೆನಡಾದ ಗ್ಯಾಂಬ್ಲಿಂಗ್ ಕಂಪನಿಯೊಂದು ಶ್ಯಾಟ್ನರ್ ಅವರನ್ನು ಸಂಪರ್ಕಿಸಿತ್ತು. ಜಾಹೀರಾತು ನೀಡಲು ಕಾನೂನು ತೊಡಕುಗಳಿದ್ದ ಕಾರಣ, ಏನಾದರೂ ವಿಭಿನ್ನವಾಗಿ ಮಾಡಿ ಜನರ ಗಮನ ಸೆಳೆಯುವುದು ಆ ಕಂಪನಿಯ ಪ್ಲಾನ್ ಆಗಿತ್ತು ಎಂದು ಶ್ಯಾಟ್ನರ್ ಶೋನಲ್ಲಿ ವಿವರಿಸಿದ್ದಾರೆ. ಇದಕ್ಕಾಗಿ ಅವರು ಶ್ಯಾಟ್ನರ್ ಅವರ ಕಿಡ್ನಿ ಸ್ಟೋನ್ ಖರೀದಿಸಲು ಆಸಕ್ತಿ ತೋರಿದ್ದರು. ಅಷ್ಟೊತ್ತಿಗಾಗಲೇ ಆ ಕಲ್ಲನ್ನು ಬಿಸಾಡಿರಬಹುದು ಎಂದುಕೊಂಡಿದ್ದ ಶ್ಯಾಟ್ನರ್, ತಮ್ಮ ವೈದ್ಯರನ್ನು ಭೇಟಿಯಾದರು. ವೈದ್ಯರಿಂದ ಆ ಕಲ್ಲನ್ನು ವಾಪಸ್ ಪಡೆದು ಕಂಪನಿಗೆ ಕೊಟ್ಟರು. ಕೊನೆಗೆ ಶ್ಯಾಟ್ನರ್ ಕಿಡ್ನಿಯಿಂದ ತೆಗೆದ ಆ ಕಲ್ಲು 75,000 ಡಾಲರ್ಗೆ ಹರಾಜಾಯಿತು.
William Shatner has opened up about the bizarre story of how a kidney stone that he passed went on the auction block in 2006 👀 https://t.co/yxx9my2BpL 🔗 https://t.co/AfWULe0EZZ
— Daily Mail (@DailyMail) October 13, 2026
ವರದಿಗಳ ಪ್ರಕಾರ, ಕಂಪನಿಯು ಶ್ಯಾಟ್ನರ್ ಅವರಿಂದ 25,000 ಡಾಲರ್ಗೆ ಕಿಡ್ನಿ ಸ್ಟೋನ್ ಖರೀದಿಸಿ, ಬಳಿಕ ಅದನ್ನು 75,000 ಡಾಲರ್ಗೆ ಹರಾಜು ಹಾಕಿತ್ತು. ಒಂದು ಕಿಡ್ನಿ ಸ್ಟೋನ್ ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗಿದ್ದು ಆಗ ದೊಡ್ಡ ಸುದ್ದಿಯಾಗಿತ್ತು. ಗ್ಯಾಂಬ್ಲಿಂಗ್ ಕಂಪನಿಯ ಹೆಸರು ನ್ಯೂಸ್ ಚಾನೆಲ್ಗಳಲ್ಲಿ ರಾರಾಜಿಸಿತ್ತು. ಆದರೆ ಶ್ಯಾಟ್ನರ್ ಪ್ಲಾನ್ ಬೇರೆಯೇ ಇತ್ತು. ಆ ಹಣವನ್ನು ವಸತಿಹೀನರಿಗೆ ಮನೆ ಕಟ್ಟಿಕೊಡಲು ಬಳಸಲು ಅವರು ನಿರ್ಧರಿಸಿದರು. ಶ್ಯಾಟ್ನರ್ ಅವರ ಈ ಆಸೆ ತಿಳಿದ 'ಬಾಸ್ಟನ್ ಲೀಗಲ್' ನಟರು ಕೂಡ 25,000 ಡಾಲರ್ ದೇಣಿಗೆ ನೀಡಿದರು. ಹೀಗೆ ಜಮೆಯಾದ ಒಟ್ಟು ಒಂದು ಲಕ್ಷ ಡಾಲರ್ ಹಣವನ್ನು ಶ್ಯಾಟ್ನರ್ 'ಹ್ಯಾಬಿಟಾಟ್ ಫಾರ್ ಹ್ಯುಮಾನಿಟಿ' (Habitat for Humanity) ಎಂಬ ಚಾರಿಟಿಗೆ ನೀಡಿದರು. ಇದು ವಸತಿಹೀನರು ಹಾಗೂ ಬಡವರಿಗೆ ಮನೆ ಕಟ್ಟಿಸಿಕೊಡುವ ಸಂಸ್ಥೆಯಾಗಿದೆ. ಈ ಹಣವನ್ನು ಬಳಸಿ ಲೂಸಿಯಾನದಲ್ಲಿ ಐದು ಮನೆಗಳನ್ನು ನಿರ್ಮಿಸಿ ವಸತಿಹೀನರಿಗೆ ನೀಡಲಾಗಿದೆ ಎಂದು ಶ್ಯಾಟ್ನರ್ ಶೋನಲ್ಲಿ ಹೇಳಿದ್ದಾರೆ.
'ಬಾಸ್ಟನ್ ಲೀಗಲ್' ಸೀರೀಸ್ 2004 ರಿಂದ 2008ರವರೆಗೆ ಪ್ರಸಾರವಾಗಿತ್ತು. ಜೇಮ್ಸ್ ಸ್ಪೇಡರ್, ಲೇಕ್ ಬೆಲ್, ಜೂಲಿ ಬೋವೆನ್ ಮುಂತಾದವರು ಇದರಲ್ಲಿ ನಟಿಸಿದ್ದರು. 95 ವರ್ಷದ ಶ್ಯಾಟ್ನರ್ ಅವರ ಹೊಸ ಪುಸ್ತಕ 'William Shatner… And You' ಆಗಸ್ಟ್ 31ರಂದು ಬಿಡುಗಡೆಯಾಗಿದೆ. ಅಭಿಮಾನಿಗಳೊಂದಿಗಿನ ಒಡನಾಟ ಹಾಗೂ ಅವರ ಅನುಭವಗಳು ಈ ಪುಸ್ತಕದ ಪ್ರಮುಖ ವಿಷಯಗಳಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ