
ನವದೆಹಲಿ(ಮಾ.16): ಇತ್ತೀಚೆಗೆ ಬ್ರಿಟನ್ನಿನ ಪ್ರಸಿದ್ಧ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಮೊದಲ ಭಾರತೀಯ ಮೂಲದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಉಡುಪಿ ಮೂಲದ ರಶ್ಮಿ ಸಾಮಂತ್ ಜನಾಂಗೀಯ ನಿಂದನೆಗೆ ಗುರಿಯಾಗಿ ರಾಜೀನಾಮೆ ನೀಡಬೇಕಾಗಿ ಬಂದ ಪ್ರಕರಣ ಸೋಮವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ವಿದೇಶಾಂಗ ಸಚಿವ ಎಸ್.ಜೈಶಂಕರ್ ಈ ಕುರಿತು ಪ್ರತಿಕ್ರಿಯಿಸಿ, ಅಗತ್ಯಬಿದ್ದಾಗ ಪ್ರಕರಣವನ್ನು ಬ್ರಿಟನ್ ಮುಂದೆ ಪ್ರಸ್ತಾಪಿಸಲಾಗುವುದು. ಮಹಾತ್ಮ ಗಾಂಧೀಜಿಯವರ ಭಾರತ ಜನಾಂಗೀಯ ನಿಂದನೆಯನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸಂಸದ ಅಶ್ವಿನಿ ವೈಷ್ಣವ್ ಈ ಪ್ರಕರಣವನ್ನು ಪ್ರಸ್ತಾಪಿಸಿ, ಉಡುಪಿಯ ಪ್ರತಿಭಾವಂತ ಹುಡುಗಿ ರಶ್ಮಿ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘಕ್ಕೆ ಮೊದಲ ಭಾರತೀಯ ಮಹಿಳೆಯಾಗಿ ಆಯ್ಕೆಯಾಗಿದ್ದಳು. ಆದರೆ, ಆಕೆಯನ್ನು ಆ ದೇಶ ನಡೆಸಿಕೊಂಡಿದ್ದು ಹೇಗೆ? ಅವಳ ಮೇಲೆ ಸೈಬರ್ ದಬ್ಬಾಳಿಕೆ ನಡೆಸಲಾಯಿತು. ಅವಳ ಹಿಂದು ಪೋಷಕರನ್ನೂ ಧಾರ್ಮಿಕವಾಗಿ ನಿಂದಿಸಲಾಯಿತು. ಅದರಿಂದಾಗಿ ಕೇವಲ 5 ದಿನಕ್ಕೆ ಆಕೆ ರಾಜೀನಾಮೆ ನೀಡಬೇಕಾಗಿ ಬಂದಿತು ಎಂದು ಕಿಡಿ ಕಾರಿದರು.
ವಿವಾದಿತ ಹೇಳಿಕೆ: ಕನ್ನಡತಿ ರಾಜೀನಾಮೆ
ಅದಕ್ಕೆ ಪ್ರತಿಕ್ರಿಯಿಸಿದ ಜೈಶಂಕರ್, ಬ್ರಿಟನ್ ಜೊತೆ ಭಾರತಕ್ಕೆ ಗಾಢ ಸಂಬಂಧವಿದೆ. ಹೀಗಾಗಿ ಅಗತ್ಯಬಿದ್ದಾಗ ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ಪ್ರಸ್ತಾಪಿಸಲಾಗುವುದು. ಬ್ರಿಟನ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ. ಅಲ್ಲಿ ನಡೆಯುವ ಜನಾಂಗೀಯ ನಿಂದನೆಯನ್ನು ನಾವು ಕಡೆಗಣಿಸುವಂತಿಲ್ಲ ಎಂದು ಹೇಳಿದರು.
ಉಡುಪಿಯ ರಶ್ಮಿ, ಇತ್ತೀಚೆಗೆ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಈ ಹುದ್ದೆಗೆ ಏರಿದ ಮೊದಲ ಭಾರತೀಯ ಮಹಿಳೆ ಎನ್ನಿಸಿಕೊಂಡಿದ್ದರು. ಆದರೆ ಇವರು ಈ ಹುದ್ದೆಗೆ ಏರುವ ಮುನ್ನ ಜನಾಂಗೀಯ ನಿಂದನೆಗಳ ಟ್ವೀಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದ್ದವು. ಈ ಕಾರಣಕ್ಕೆ ಕೆಲವೇ ದಿನದಲ್ಲಿ ಅವರು ರಾಜೀನಾಮೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ