
ವಿಶ್ವದ ಇಬ್ಬರು ಬಲಿಷ್ಠ ನಾಯಕರ ನಡುವಿನ ಅಹಂಕಾರ, ಪ್ರತಿಷ್ಠೆಯಗೆ ಇಡೀ ಭೂಮಿಯನ್ನೇ ಸ್ಮಶಾನವಾಗಿಸುವತ್ತ ಹೆಜ್ಜೆ ಹಾಕುತ್ತಿದೆ. ರಷ್ಯಾ ಮತ್ತು ಅಮೆರಿಕ ನಡುವೆ ಸೃಷ್ಟಿಯಾಗಿರುವ ಕಿಡಿ, ಪರಮಾಣು ಯುದ್ಧವಾಗಿ ಸ್ಫೋಟಗೊಂಡರೆ ಏನಾಗಬಹುದು ಎಂಬ ಕಲ್ಪನೆಯೇ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸುತ್ತದೆ. ವಿಜ್ಞಾನಿಗಳ ಪ್ರಕಾರ, ಯುದ್ಧ ಆರಂಭವಾದ ಕೆಲವೇ ಗಂಟೆಗಳಲ್ಲಿ ಸಂಭವಿಸುವ ಸಾವು-ನೋವುಗಳ ಸಂಖ್ಯೆ ಇಡೀ ಇತಿಹಾಸವನ್ನೇ ಅಳಿಸಿಹಾಕಬಲ್ಲದು.
ಈ ಉದ್ವಿಗ್ನತೆಗೆ ಇತ್ತೀಚಿನ ಕಾರಣ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ನಡೆದ ಹೈ-ಡ್ರಾಮಾ. ಜನವರಿ 7, 2026ರ ಬುಧವಾರದಂದು, ಅಮೆರಿಕದ ನೌಕಾಪಡೆ ರಷ್ಯಾದ ಧ್ವಜ ಹೊತ್ತ 'ಬೆಲ್ಲಾ-1' ಎಂಬ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದೆ. ವೆನೆಜುವೆಲಾ ಮೇಲಿನ ಅಮೆರಿಕದ ದಿಗ್ಬಂಧನವನ್ನು ಮೀರಿ ಸಾಗುತ್ತಿದ್ದ ಈ ಹಡಗನ್ನು ತಡೆದ ಕ್ರಮಕ್ಕೆ ಪುಟಿನ್ ಕೆಂಡಾಮಂಡಲವಾಗಿದ್ದಾರೆ. ಇದನ್ನು ಅಪ್ಪಟ 'ಕಡಲ್ಗಳ್ಳತನ' ಎಂದು ಕರೆದಿರುವ ರಷ್ಯಾ, ಪ್ರತೀಕಾರದ ಎಚ್ಚರಿಕೆ ನೀಡಿದೆ. ಟ್ರಂಪ್ ಆಡಳಿತದ ಬಿಗಿ ನಿಲುವು ಮತ್ತು ರಷ್ಯಾದ ಹಠಮಾರಿ ಧೋರಣೆ ಜಗತ್ತನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದೆ.
ಒಂದು ವೇಳೆ ರಷ್ಯಾ ತನ್ನ ಮೇಲಿನ 'ಅಪಮಾನ'ಕ್ಕೆ ಪ್ರತಿಯಾಗಿ ಪರಮಾಣು ಗುಂಡಿ ಒತ್ತಿದರೆ ಏನಾಗಬಹುದು? icanw.org ವರದಿಯ ಪ್ರಕಾರ, ಯುದ್ಧ ಆರಂಭವಾದ ಮೊದಲ ಕೆಲವು ಗಂಟೆಗಳಲ್ಲಿ ಸರಿಸುಮಾರು 3,41,00,000 (34.1 ಮಿಲಿಯನ್) ಜನರು ಸ್ಥಳದಲ್ಲೇ ಭಸ್ಮವಾಗುತ್ತಾರೆ! ಅಷ್ಟೇ ಅಲ್ಲದೆ, 5.7 ಕೋಟಿಗೂ ಹೆಚ್ಚು ಜನರು ವಿಕಿರಣದ ಶಾಖಕ್ಕೆ ತುತ್ತಾಗಿ ತೀವ್ರವಾಗಿ ಗಾಯಗೊಳ್ಳುತ್ತಾರೆ. ಇದು ಕೇವಲ ಆರಂಭವಷ್ಟೇ; ಈ ಯುದ್ಧದ ನಂತರ ಬದುಕುಳಿಯುವವರು ಸತ್ತವರಿಗಿಂತ ಹೆಚ್ಚು ನರಕಯಾತನೆ ಅನುಭವಿಸಲಿದ್ದಾರೆ.
ಪರಮಾಣು ಚಳಿಗಾಲ: ಸೂರ್ಯನನ್ನೇ ಮರೆಮಾಚುವ ಹೊಗೆ
ಪರಮಾಣು ಸ್ಫೋಟದ ನಂತರ ಭೂಮಿಯ ವಾತಾವರಣವು ಕಪ್ಪು ಹೊಗೆ ಮತ್ತು ಧೂಳಿನಿಂದ ಆವೃತವಾಗುತ್ತದೆ. ಇದರಿಂದ ಭೂಮಿಯ ಉಷ್ಣತೆ ಹಠಾತ್ತಾಗಿ ಕುಸಿದು 'ಪರಮಾಣು ಚಳಿಗಾಲ' (Nuclear Winter) ಆರಂಭವಾಗುತ್ತದೆ. ವಿಕಿರಣದ ಪ್ರಭಾವದಿಂದ ಮುಂದಿನ ಪೀಳಿಗೆಯೂ ವಿಕಲಾಂಗವಾಗಿ ಜನಿಸುವ ಅಪಾಯವಿದೆ. ಕೇವಲ ಅಮೆರಿಕ-ರಷ್ಯಾ ಮಾತ್ರವಲ್ಲ, ಭಾರತ ಮತ್ತು ಪಾಕಿಸ್ತಾನದ ನಡುವೆ ಸೀಮಿತ ಯುದ್ಧ ನಡೆದರೂ ಅದರ ಪರಿಣಾಮವಾಗಿ ಜಗತ್ತಿನಾದ್ಯಂತ 130 ಕೋಟಿ ಜನರಿಗೆ ಆಹಾರವಿಲ್ಲದೆ ಹಸಿವಿನಿಂದ ಸಾಯುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಂಶೋಧನೆಗಳು ಎಚ್ಚರಿಸಿವೆ.
ಶಕ್ತಿ ಪ್ರದರ್ಶನ: ಯಾರ ಬಳಿ ಎಷ್ಟು ಬಾಂಬ್‌ಗಳಿವೆ?
ಸದ್ಯದ ಲೆಕ್ಕಾಚಾರದ ಪ್ರಕಾರ, ಜಗತ್ತನ್ನು ಹತ್ತಾರು ಬಾರಿ ನಾಶಪಡಿಸಲು ಬೇಕಾದಷ್ಟು ಆಯುಧಗಳು ಈ ಎರಡು ರಾಷ್ಟ್ರಗಳ ಬಳಿ ಇವೆ. ರಷ್ಯಾ ತನ್ನ ಬತ್ತಳಿಕೆಯಲ್ಲಿ 5,449 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಅಮೆರಿಕ 5,277 ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾಗಿದೆ. ಈ ಅಗಾಧ ಶಕ್ತಿಯು ವಿವೇಚನೆ ಕಳೆದುಕೊಂಡು ಸ್ಫೋಟಗೊಂಡರೆ, ಭೂಮಿಯ ಮೇಲೆ ಮನುಷ್ಯನ ಗುರುತೇ ಇರುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ