ಕೊರೋನಾ ಲಸಿಕೆ ಸಂಶೋಧನೆ ಹ್ಯಾಕ್‌ಗೆ ಚೀನಾ ಯತ್ನ!

By Suvarna NewsFirst Published Jul 23, 2020, 12:17 PM IST
Highlights

ಕೊರೋನಾ ಲಸಿಕೆ ಸಂಶೋಧನೆ ಹ್ಯಾಕ್‌ಗೆ ಚೀನಾ ಯತ್ನ| ಅಮೆರಿಕದ ಗಂಭೀರ ಆರೋಪ| ಇಬ್ಬರು ಚೀನಾ ಮೂಲದ ವಿದ್ಯಾರ್ಥಿಗಳ ಮೇಲೆ ಕೇಸ್‌

ವಾಷಿಂಗ್ಟನ್(ಜು.23)‌: ಕೊರೋನಾ ವೈರಸ್‌ ತಡೆಗೆ ಲಸಿಕೆ ಸಂಶೋಧನೆಯನ್ನು ಅಮೆರಿಕ ತೀವ್ರಗೊಳಿಸಿರುವ ನಡುವೆಯೇ, ಸಂಶೋಧನೆಯ ಮಾಹಿತಿಯನ್ನು ಚೀನಾದ ಹ್ಯಾಕರ್‌ಗಳು ಕದಿಯುತ್ತಿರುವ ಆರೋಪ ಕೇಳಿಬಂದಿದೆ. ‘ಚೀನಾ ಸರ್ಕಾರದ ಹ್ಯಾಕರ್‌ಗಳು ಕೊರೋನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಜೈವಿಕ ಕಂಪನಿಗಳ ಮಾಹಿತಿ ಕಳವು ಮಾಡಲು ಯತ್ನಿಸುತ್ತಿದ್ದಾರೆ. ಈಗಾಗಲೇ ನೂರಾರು ದಶಲಕ್ಷ ಡಾಲರ್‌ಗಳಷ್ಟುಬೌದ್ಧಿಕ ಆಸ್ತಿಯನ್ನು ಹ್ಯಾಕರ್‌ಗಳು ವಿಶ್ವದೆಲ್ಲೆಡೆ ದೋಚಿದ್ದಾರೆ’ ಎಂದು ಅಮೆರಿಕ ಸರ್ಕಾರ ಆರೋಪಿಸಿದೆ.

ಇದೇ ವೇಳೆ, ಚೀನಾ ಸರ್ಕಾರವು, ಒಂದು ಸಂಘಟಿತ ಕ್ರಿಮಿನಲ್‌ ತಂಡದ ಥರ ಕಾರ್ಯನಿರ್ವಹಿಸುತ್ತಿದೆ ಎಮದು ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ಆರೋಪಿಸಿದೆ.

ಈ ನಡುವೆ, ಚೀನಾ ಮೂಲದ ಇಬ್ಬರು ಎಂಜಿನಿಯರಿಂಗ್‌ ಪದವೀಧರರ ಮೇಲೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಲಿ ಕ್ಸಿಯಾಒಯು ಹಾಗೂ ಡಾಂಗ್‌ ಜಿಯಾಝಿ ಎಂಬುವವರು ಕೊರೋನಾ ಸಂಶೋಧನೆಯಲ್ಲಿ ತೊಡಗಿರುವ ಜೈವಿಕ ತಂತ್ರಜ್ಞಾನ ಕಂಪನಿಗಳ ದತ್ತಾಂಶಗಳನ್ನು ಹ್ಯಾಕ್‌ ಮಾಡಿದ್ದಾರೆ ಎಂದು ದೂರಲಾಗಿದೆ. ಇವರು ತಮ್ಮ ಸ್ವಾರ್ಥಕ್ಕಷ್ಟೇ ಅಲ್ಲ, ಈ ದತ್ತಾಂಶದಿಂದ ಚೀನಾ ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಅರಿತೇ ಈ ಕೃತ್ಯ ಎಸಗಿದ್ದಾರೆ. ಸುಮಾರು 10 ದೇಶಗಳಿಂದ ಇವರು ಮಾಹಿತಿ ಕದ್ದಿದ್ದಾರೆ ಎಂದು ಅಮೆರಿಕ ಕಾನೂನು ಸಚಿವಾಲಯ ಆರೋಪಿಸಿದೆ.

ಇತ್ತೀಚೆಗಷ್ಟೇ ರಷ್ಯಾ ಕೂಡಾ ಸಂಶೋಧನಾ ಮಾಹಿತಿ ಕದಿಯಲು ಯತ್ನಿಸುತ್ತಿದೆ ಎಂದು ಅಮೆರಿಕ, ಬ್ರಿಟನ್‌, ಆರೋಪಿಸಿದ್ದವು.

click me!