ವಿಶ್ವಸಂಸ್ಥೆಯಲ್ಲಿ ಮೋದಿ ಇತಿಹಾಸ ಸೃಷ್ಟಿ: UNSC ಸಭೆ ನಡೆಸಿದ ಮೊದಲ ಪಿಎಂ!

By Suvarna News  |  First Published Aug 10, 2021, 7:13 AM IST

* ಭದ್ರತಾ ಮಂಡಳಿ ಸಭೆ ನಡೆಸಿದ ಮೊದಲ ಪ್ರಧಾನಿ

* ವಿಶ್ವಸಂಸ್ಥೆಯಲ್ಲಿ ನರೇಂದ್ರ ಮೋದಿ ಇತಿಹಾಸ ಸೃಷ್ಟಿ-

* ಸಮುದ್ರ ಭದ್ರತೆಗೆ ಮೋದಿ ‘ಪಂಚ ತತ್ವ’

* ಉಗ್ರರ ಬೆದರಿಕೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ

* ಸಮುದ್ರ ವ್ಯಾಪಾರದ ಅಡೆತಡೆ ನಿವಾರಿಸಲು ಸಲಹೆ


ವಿಶ್ವಸಂಸ್ಥೆ(ಆ.10): ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ, ಮುಕ್ತ ಚರ್ಚೆಯಲ್ಲಿ ಮಾತನಾಡಿದ ಅಪರೂಪದ ಘಟನೆ ನಡೆದಿದೆ. ಈ ಸಭೆಯಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಮುದ್ರ ವ್ಯಾಪಾರಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದು, ಕಡಲ ವಿವಾದಗಳ ಶಾಂತಿಯುತ ಇತ್ಯರ್ಥ ಸೇರಿದಂತೆ ‘ಐದು ತತ್ವ’ಗಳನ್ನು ಪ್ರತಿಪಾದಿಸಿದ್ದಾರೆ. ಈ ತತ್ವಗಳ ಆಧಾರದ ಮೇಲೆ ಸಮುದ್ರ ಭದ್ರತೆ ಸಹಕಾರಕ್ಕೆ ಮಾರ್ಗಸೂಚಿಯನ್ನು ಸಿದ್ಧಪಡಿಸಬಹುದಾಗಿದೆ ಎಂದು ಹೇಳಿದ್ದಾರೆ. ಉಗ್ರರಿಂದ ಎದುರಾಗುವ ಬೆದರಿಕೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದ್ದಾರೆ.

ಈ ವರ್ಷದ ಜನವರಿ 1ರಿಂದ 2 ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ತಾತ್ಕಾಲಿಕ ಸದಸ್ಯ ಸ್ಥಾನ’ ಭಾರತಕ್ಕೆ ದೊರೆತಿದೆ. ಭದ್ರತಾ ಮಂಡಳಿ ರಚನೆಯಾದ ನಂತರ 7ನೇ ಬಾರಿ ಭಾರತಕ್ಕೆ ಈ ಸ್ಥಾನ ಲಭಿಸಿದೆ. ಭಾರತದ ಪ್ರಧಾನಿಯೊಬ್ಬರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿ ಸಭೆಯನ್ನು ನಡೆಸಿದ್ದು, ದೇಶದ ಇತಿಹಾಸದಲ್ಲೇ ಮೊದಲು. ಈ ಸಭೆಯು ಕಡಲ ಅಪರಾಧ ಮತ್ತು ಅಭದ್ರತೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಹಾಗೂ ಸಮುದ್ರ ವಲಯದಲ್ಲಿ ಸಮನ್ವಯವನ್ನು ಬಲಪಡಿಸುವ ಮಾರ್ಗಗಳ ಮೇಲೆ ಮುಕ್ತ ಚರ್ಚೆ ಮೇಲೆ ಕೇಂದ್ರೀಕೃತವಾಗಿದೆ.

Tap to resize

Latest Videos

ವಿಡಿಯೋ ಕಾನ್ಫರೆನ್ಸ್‌ ಮೂಲಕ ‘ಸಮುದ್ರ ಭದ್ರತೆ ಬಲವರ್ಧನೆ- ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಒಂದು ದೃಷ್ಟಾಂತ’ ಎಂಬ ವಿಷಯದ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋದಿ, ಸಮುದ್ರ ಮಾರ್ಗವನ್ನು ಭಯೋತ್ಪಾದನೆ ಮತ್ತ ಕಡಲ್ಗಳ್ಳತನಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಗರಗಳು ವಿಶ್ವದ ಸಾಮಾನ್ಯ ಪರಂಪರೆ ಆಗಿವೆ ಮತ್ತು ಸಮುದ್ರ ಮಾರ್ಗಗಳು ಅಂತಾರಾಷ್ಟ್ರೀಯ ವ್ಯಾಪಾರದ ಜೀವನಾಡಿಯಾಗಿವೆ ಎಂಬುದನ್ನು ಒತ್ತಿ ಹೇಳಿದರು.

ಸಮುದ್ರ ಭದ್ರತೆಗೆ ಪಂಚ ತತ್ವ:

ದೇಶಗಳು ಪರಸ್ಪರ ಹಂಚಿಕೊಂಡಿರುವ ಕಡಲ ಪರಂಪರೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಕಾನೂನುಬದ್ಧ ಸಮುದ್ರ ವ್ಯಾಪಾರಕ್ಕಾಗಿ ಅಡೆತಡೆಗಳನ್ನು ತೊಡೆದುಹಾಕಬೇಕು. ಜಾಗತಿಕ ಸಮೃದ್ಧಿಯು ಸಮುದ್ರ ವ್ಯಾಪಾರದ ಸಕ್ರಿಯ ಹರಿವನ್ನು ಅವಲಂಬಿಸಿದೆ. ಕಡಲ ವ್ಯಾಪಾರದಲ್ಲಿ ಯಾವುದೇ ಅಡೆತಡೆಯು ಜಾಗತಿಕ ಆರ್ಥಿಕತೆಗೆ ಧಕ್ಕೆ ತರುತ್ತದೆ ಎಂದು ಮೋದಿ ತಮ್ಮ ಮೊದಲ ತತ್ವವನ್ನು ವಿವರಿಸಿದರು.

ಎರಡನೇಯದಾಗಿ, ಸಮುದ್ರ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಿಕೊಳ್ಳಬೇಕು ಮತ್ತು ಅದು ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಇರಬೇಕು. ಪರಸ್ಪರ ನಂಬಿಕೆ ಮತ್ತು ವಿಶ್ವಾಸಕ್ಕೆ ಇದು ಮುಖ್ಯ. ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಇದೊಂದೇ ಮಾರ್ಗ ಎಂದು ಅವರು ಹೇಳಿದರು.

ಜವಾಬ್ದಾರಿಯುತವಾಗಿ ಕಡಲ ಸಂಪರ್ಕವನ್ನು ಸಾಧಿಸಬೇಕು ಎಂಬುದು ಅವರು ಪ್ರತಿಪಾದಿಸಿದ ಮೂರನೇ ತತ್ವ.

ಭಯೋತ್ಪಾದಕರಿಂದ ಸೃಷ್ಟಿಯಾದ ಸಮುದ್ರ ಬೆದರಿಕೆಯನ್ನು ಮತ್ತು ಪ್ರಾಕೃತಿಕ ವಿಕೋಪಗಳನ್ನು ಜಾಗತಿಕ ಸಮುದಾಯವು ಒಟ್ಟಾಗಿ ಎದುರಿಸಬೇಕು ಎಂಬುದು ಮೋದಿ ಅವರು ಪ್ರತಿಪಾದಿಸಿದ 4ನೇ ತತ್ವ. ಈ ವಿಷಯದ ಮೇಲೆ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸಲು ಭಾರತ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಕಡಲ ಪರಿಸರ ಮತ್ತು ಕಡಲ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಜವಾಬ್ದಾರಿಯುತ ಕಡಲ ಸಂಪರ್ಕವನ್ನು ಸಾಧಿಸಬೇಕು ಎಂಬುದು ಪ್ರಧಾನಿ ಮೋದಿ ಪ್ರತಿಪಾದಿಸಿದ 5ನೇಯ ಮತ್ತು ಕೊನೆಯ ತತ್ವವಾಗಿದೆ.

ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಹಲವು ರಾಷ್ಟ್ರಗಳ ಮುಖಂಡರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಸರ್ಕಾರ ಮತ್ತು ವಿಶ್ವ ಸಂಸ್ಥೆಯ ವ್ಯವಸ್ಥೆ ಮತ್ತು ಪ್ರಮುಖ ಪ್ರಾದೇಶಿಕ ಸಂಸ್ಥೆಗಳ ಮುಖಂಡರು ಭಾಗಿಯಾಗಿದ್ದರು.

10ನೇ ಬಾರಿ ಭಾರತದ ಅಧಿಕಾರಾವಧಿ

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇದು ಭಾರತದ 10ನೇ ಅಧಿಕಾರಾವಧಿ ಆಗಿದೆ. ಇದುವರೆಗೆ 9 ಬಾರಿ ಭದ್ರತಾ ಮಂಡಳಿಯ ಅಧಿವೇಶನದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದೆ. 1950 ಜೂನ್‌, 1967 ಸೆಪ್ಟೆಂಬರ್‌, 1972 ಡಿಸೆಂಬರ್‌, 1977 ಅಕ್ಟೋಬರ್‌, 1985 ಫೆಬ್ರವರಿ, 1991 ಅಕ್ಟೋಬರ್‌, 1992 ಡಿಸೆಂಬರ್‌, 2011 ಆಗಸ್ಟ್‌ ಮತ್ತು 2012 ನವೆಂಬರ್‌ನಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧಿವೇಶನದ ಅಧ್ಯಕ್ಷ ಹುದ್ದೆ ಅಲಂಕರಿಸಿತ್ತು. ಆದರೆ ಭಾರತದ ಅಧ್ಯಕ್ಷತೆಯಲ್ಲಿ ಸಭೆಯೊಂದು ನಡೆದಿದ್ದು ಇದೇ ಮೊದಲು.

5 ತತ್ವಗಳು

1. ಮುಕ್ತ ಮತ್ತು ಕಾನೂನುಬದ್ಧ ಸಮುದ್ರ ವ್ಯಾಪಾರಕ್ಕಾಗಿ ಅಡೆತಡೆ ನಿವಾರಣೆ

2. ಅಂತಾರಾಷ್ಟ್ರೀಯ ಕಾನೂನಿನಡಿ ಮೇಲೆ ಕಡಲ ವಿವಾದ ಶಾಂತಿಯುತ ಇತ್ಯರ್ಥ

3. ಜವಾಬ್ದಾರಿಯುತ ಕಡಲ ಸಂಪರ್ಕವನ್ನು ಪ್ರೋತ್ಸಾಹಿಸಲು ಕ್ರಮ ರೂಪಿಸುವುದು

4. ಉಗ್ರರು ಮತ್ತು ನೈಸರ್ಗಿಕ ಸಮುದ್ರ ಬೆದರಿಕೆಯನ್ನು ಒಟ್ಟಾಗಿ ಎದುರಿಸುವುದು

5. ಕಡಲ ಪರಿಸರ ಮತ್ತು ಕಡಲ ಸಂಪನ್ಮೂಲವನ್ನು ಸಂರಕ್ಷಿಸಲು ಒತ್ತು ನೀಡುವುದು

click me!