ಚೀನಾದ ಮೇಲೆ ಯುದ್ಧಕ್ಕೆ ಹೊರಟಿದ್ದ ಅಮೆರಿಕ; 3ನೇ ಮಹಾಯುದ್ಧಕ್ಕೆ ಎಐ ಕಾರಣವಾಗ್ತಿತ್ತು!

Sathish Kumar KH   | Kannada Prabha
Published : Sep 20, 2026, 12:33 PM IST
America China war by AI false message

ಸಾರಾಂಶ

ಕೃತಕ ಬುದ್ಧಿಮತ್ತೆ (ಎಐ) ನೀಡಿದ ತಪ್ಪು ಮಾಹಿತಿಯಿಂದಾಗಿ ಅಮೆರಿಕ ಮತ್ತು ಚೀನಾ ನಡುವೆ ಭೀಕರ ಯುದ್ಧ ನಡೆಯುವಂತಹ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಚೀನಾದ ಹಡಗಿನಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂಬ ಎಐ ಸುಳ್ಳು ವರದಿಯನ್ನು ನಂಬಿ ಅಮೆರಿಕ ತನ್ನ ಸೇನೆಯನ್ನು ಸಜ್ಜುಗೊಳಿಸಿತ್ತು. ಬಳಿಕ ಇದು ಸುಳ್ಳು ಮಾಹಿತಿ ಎಂದು ತಿಳಿದುಬಂದಿದೆ.

ವಾಷಿಂಗ್ಟನ್‌: ಎಐ ನೀಡಿದ ತಪ್ಪು ಹಾಗೂ ಸುಳ್ಳು ಗುಪ್ತಚರ ವರದಿಯೊಂದರಿಂದಾಗಿ ಅಮೆರಿಕ ಮತ್ತು ಚೀನಾ ಸೇನೆಗಳ ನಡುವೆ ಸಶಸ್ತ್ರ ಸಂಘರ್ಷ ಹಾಗೂ ದೊಡ್ಡ ಮಟ್ಟದ ಯುದ್ಧವೇ ಸಂಭವಿಸುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂಬ ಆಘಾತಕಾರಿ ವಿಷಯ ತಡವಾಗಿ ಬಹಿರಂಗವಾಗಿದೆ.

ಈ ವರ್ಷದ ಆರಂಭದಲ್ಲಿ, ಅಮೆರಿಕದ ಗುಪ್ತಚರ ವಿಶ್ಲೇಷಕರು ಹವಾಯಿಯಲ್ಲಿರುವ ಅಮೆರಿಕದ ಸ್ಪೆಷಲ್ ಆಪರೇಷನ್ಸ್ ಕಮಾಂಡ್ ಪೆಸಿಫಿಕ್ ನೀಡಿದ್ದ ಹಡಗುಗಳ ಸಾಗಣೆ ವಿವರದ ದತ್ತಾಂಶವನ್ನು ಎಐ ಚಾಟ್‌ಬಾಟ್‌ಗೆ ನೀಡಿ ವಿಶ್ಲೇಷಣೆ ಕೇಳಿದ್ದರು. ಆಗ ಎಐ, ಪಶ್ಚಿಮ ಏಷ್ಯಾದಲ್ಲಿ ಚಲಿಸುತ್ತಿದ್ದ ಚೀನಾದ ಸರಕು ಸಾಗಣೆ ಹಡಗೊಂದರಲ್ಲಿ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಬಳಸುವ ಸೂಕ್ಷ್ಮ ಬಿಡಿಭಾಗಗಳಿವೆ ಎಂದು ಸುಳ್ಳು ಮಾಹಿತಿ ನೀಡಿತ್ತು. ನಂತರ ವಿಶ್ಲೇಷಕರು, ಅದೇ ಎಐ ಸಹಾಯದಿಂದ ಈ ತೀರ್ಮಾನವನ್ನು ಅಧಿಕೃತ ಗುಪ್ತಚರ ವರದಿಯ ರೂಪಕ್ಕೆ ಬದಲಾಯಿಸಿ, ಮೇಲಧಿಕಾರಿಗಳಿಗೆ ರವಾನಿಸಿದ್ದರು.

ಯುದ್ಧಕ್ಕೆ ಸಜ್ಜಾಗಿದ್ದ ಅಮೆರಿಕ:

ಎಐ ನೀಡಿದ ಈ ತಪ್ಪಾದ ವರದಿಯನ್ನು ಆಧರಿಸಿ ಅಮೆರಿಕದ ಮಿಲಿಟರಿ ತಕ್ಷಣವೇ ಕಾರ್ಯಪ್ರವೃತ್ತವಾಗಿತ್ತು. ಚೀನಾದ ಆ ಹಡಗನ್ನು ವಶಕ್ಕೆ ಪಡೆಯಲು ಅಮೆರಿಕದ ಶಸ್ತ್ರಸಜ್ಜಿತ ಯೋಧರನ್ನು ಕಳುಹಿಸಲು ಯೋಜನೆ ರೂಪಿಸಲಾಗಿತ್ತು. ಯುದ್ಧ ವಿಮಾನಗಳು ಅದಾಗಲೇ ಆಕಾಶದಲ್ಲಿ ಕಾರ್ಯಾಚರಣೆಗೆ ಇಳಿದಿದ್ದವು. ಆ ಬಳಿಕ ಇದು ಸುಳ್ಳು ಮಾಹಿತಿ ಎಂದು ತಿಳಿದುಬಂತು. ಒಂದು ವೇಳೆ ಚೀನಾದ ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದ್ದರೆ, ಅದು ವಿಶ್ವದ 2 ಬೃಹತ್ ರಾಷ್ಟ್ರಗಳ ನಡುವೆ ನೇರ ಯುದ್ಧಕ್ಕೆ ಹಾದಿಮಾಡಿಕೊಡುತ್ತಿತ್ತು.

‘ಈ ಆಂತರಿಕ ಉಪಕರಣಗಳು ಕೇವಲ ವಾಣಿಜ್ಯ ಬಳಕೆಯ ಎಐ ಮಾದರಿಗಳ ತದ್ರೂಪುಗಳಾಗಿವೆ. ಇವು ತಾಂತ್ರಿಕವಾಗಿ ಪರಿಪೂರ್ಣವಾಗಿಲ್ಲ’ ಎಂದು ಅಮೆರಿಕದ ಮಾಜಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಈ ಗಂಭೀರ ಲೋಪದ ಕುರಿತು ಅಮೆರಿಕದ ಪೆಂಟಗನ್ ಆಗಲಿ ಅಥವಾ ಸ್ಪೆಷಲ್ ಆಪರೇಷನ್ಸ್ ಕಮಾಂಡ್ ಆಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಟ್ರಂಪ್‌ ಸರ್ಕಾರದಲ್ಲಿ ಎಐಗೆ ಆದ್ಯತೆ: 

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತ ಅಧಿಕಾರಕ್ಕೆ ಬಂದ ನಂತರ, ದೇಶದ ಗುಪ್ತಚರ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯುದ್ಧಭೂಮಿಯಲ್ಲಿ ಯಾವ ಪಡೆಗಳನ್ನು ಎಲ್ಲಿಗೆ ನಿಯೋಜಿಸಬೇಕು ಮತ್ತು ಯಾವ ದಾಳಿಗಳನ್ನು ಎಲ್ಲಿ ನಡೆಸಬೇಕು ಎಂಬಂತಹ ಗಂಭೀರ ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳಲು ಎಐ ಸಹಕಾರಿಯಾಗಲಿದೆ ಎಂಬುದು ಅಮೆರಿಕ ಸರ್ಕಾರದ ವಾದವಾಗಿದೆ.

ರಕ್ಷಣಾ ಇಲಾಖೆಯಲ್ಲಿ ಎಐ ಬಳಕೆಯನ್ನು ಮತ್ತಷ್ಟು ವೇಗಗೊಳಿಸುವ ಉದ್ದೇಶದಿಂದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ‘ಎಐ ವೇಗವರ್ಧನೆ ತಂತ್ರಜ್ಞಾನ ಯೋಜನೆ’ ಯನ್ನು ಜಾರಿಗೆ ತಂದಿದ್ದಾರೆ. ಈ ನೂತನ ಯೋಜನೆಯಡಿ, ಅಮೆರಿಕದ ಸುಮಾರು 30 ಲಕ್ಷ ಮಿಲಿಟರಿ ಸಿಬ್ಬಂದಿಗೆ ಎಐ ತಂತ್ರಜ್ಞಾನವನ್ನು ನೇರವಾಗಿ ತಲುಪಿಸಲು ನಿರ್ಧರಿಸಲಾಗಿದೆ. ಇಲಾಖೆಯ ಎಲ್ಲಾ ಹಂತಗಳಲ್ಲೂ ಅತ್ಯಾಧುನಿಕ ಎಐ ಮಾದರಿಗಳನ್ನು ಮುಕ್ತವಾಗಿ ಬಳಸಲು ಅವಕಾಶ ಮಾಡಿಕೊಡುವ ಮೂಲಕ ಮಿಲಿಟರಿ ಕಾರ್ಯಾಚರಣೆಗಳನ್ನು ಆಧುನಿಕಗೊಳಿಸುವುದು ಸರ್ಕಾರದ ಗುರಿಯಾಗಿದೆ.

ಗಂಭೀರ ಆತಂಕ: 

ಆದರೆ, ಈ ಎಐ ತಂತ್ರಜ್ಞಾನದ ವ್ಯಾಪಕ ಬಳಕೆಯ ಬಗ್ಗೆ ಗುಪ್ತಚರ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಸರ್ಕಾರದ ವಿಭಿನ್ನ ವಿಭಾಗಗಳು ಬೇರೆ ಬೇರೆ ಎಐ ಉಪಕರಣಗಳನ್ನು ಸೂಕ್ತ ಭದ್ರತಾ ಮಾನದಂಡಗಳಿಲ್ಲದೆ ಬಳಸುತ್ತಿವೆ. ಎಐ ನೀಡುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಇಡೀ ದೇಶಕ್ಕೆ ಅನ್ವಯವಾಗುವ ಯಾವುದೇ ಏಕರೂಪದ ನಿಯಮಗಳಾಗಲಿ ಅಥವಾ ಮಾನದಂಡಗಳಾಗಲಿ ಅಮೆರಿಕದಲ್ಲಿ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸುಡಾನ್‌ನಲ್ಲಿ ಬಂಗಾರ ಹೆಕ್ಕುತ್ತಿದ್ದವರ ಜೀವಂತ ಸಮಾಧಿ, 80ಕ್ಕೂ ಹೆಚ್ಚು ಸಾವು! ಆಫ್ರಿಕಾದಲ್ಲೇಕೆ ಈ ಪರಿಯ ದುರಂತ?
Houthi Attacks: ಹೌತಿಗಳ ಜತೆ ಅಮೆರಿಕ ಒಳ ಒಪ್ಪಂದ, ಕೈ ಕೊಟ್ಟ ಪಾಕಿಸ್ತಾನ; ಎಲ್ಲ ಇದ್ದು ಏಕಾಂಗಿಯಾದ ಸೌದಿ!