Volodymyr Zelenskyy ಭಾರತ ಸೇರಿ 47 ದೇಶಗಳ ಪ್ರಜೆಗಳನ್ನು ಯುದ್ಧಕ್ಕೆ ದಾಳವಾಗಿ ಬಳಸುತ್ತಿದೆ ರಷ್ಯಾ!

Published : Sep 25, 2026, 11:11 AM IST
Volodymyr Zelenskyy

ಸಾರಾಂಶ

ರಷ್ಯಾ ತನ್ನ ಯುದ್ಧದಲ್ಲಿ ಭಾರತ ಸೇರಿದಂತೆ 47 ದೇಶಗಳ ಪ್ರಜೆಗಳನ್ನು ವಂಚನೆಯಿಂದ ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ವಿಶ್ವಸಂಸ್ಥೆಯಲ್ಲಿ ಆರೋಪಿಸಿದ್ದಾರೆ. ಈ ಅಮಾಯಕರನ್ನು ರಕ್ಷಿಸಲು ಮತ್ತು ರಷ್ಯಾದ ಆರ್ಥಿಕತೆಗೆ ದಿಗ್ಬಂಧನ ವಿಧಿಸಲು ಅವರು ಜಾಗತಿಕ ನಾಯಕರಿಗೆ ತುರ್ತು ಮನವಿ ಮಾಡಿದ್ದಾರೆ.

ನ್ಯೂಯಾರ್ಕ್: ತನ್ನ ದೇಶದ ವಿರುದ್ಧ ಯುದ್ಧದಲ್ಲಿ ರಷ್ಯಾ ದೇಶವು ಭಾರತ ಸೇರಿದಂತೆ ಒಟ್ಟು 47 ದೇಶಗಳ ಪ್ರಜೆಗಳನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಆರೋಪ ಮಾಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಉನ್ನತ ಮಟ್ಟದ ಮಹಾಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿಧ ದೇಶಗಳ ಜನರನ್ನು ಮೋಸ ಮತ್ತು ವಂಚನೆಯ ಮೂಲಕ ರಷ್ಯಾಕ್ಕೆ ಕರೆತರಲಾಗುತ್ತಿದ್ದು, ಅವರಲ್ಲಿ ಹಲವರು ಯುದ್ಧಭೂಮಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ‘ಪುಟಿನ್ ನಿಮ್ಮ ದೇಶದ ಜನರನ್ನು ಈ ಯುದ್ಧಕ್ಕೆ ಎಳೆಯಲು ಬಿಡಬೇಡಿ. ರಷ್ಯಾದ ಆರ್ಥಿಕ ಮೂಲಗಳನ್ನು ಮತ್ತು ವ್ಯಾಪಾರವನ್ನು ನಿರ್ಬಂಧಿಸಿ’ ಎಂದು 47 ದೇಶಗಳ ಪ್ರತಿನಿಧಿಗಳಿಗೆ ಮನವಿ ಮಾಡಿದರು.

ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳ ಪ್ರಜೆಗಳನ್ನು ರಷ್ಯಾದ ಸಮರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದ ಝೆಲೆನ್ಸ್ಕಿ, ನಾವು ತಡೆಹಿಡಿದಿರುವ ಯುದ್ಧ ಕೈದಿಗಳಲ್ಲಿ ಉತ್ತರ ಕೊರಿಯಾದವರಲ್ಲದೆ ಹಲವು ದೇಶಗಳ ಜನರಿದ್ದಾರೆ. ಘಾನಾ, ನೇಪಾಳ, ತಜಿಕಿಸ್ತಾನ್, ಭಾರತ, ಯೆಮೆನ್, ಕೀನ್ಯಾ, ಜಿಂಬಾಬ್ವೆ, ಕ್ಯೂಬಾ, ಬೆಲಾರಸ್, ಸುಡಾನ್ ಹಾಗೂ ದಕ್ಷಿಣ ಆಫ್ರಿಕಾದಂತಹ 47 ದೇಶಗಳ ನಾಗರಿಕರು ವಂಚನೆ ಮತ್ತು ಹುನ್ನಾರಗಳಿಗೆ ಒಳಗಾಗಿ ರಷ್ಯಾ ಸೇರಿದ್ದಾರೆ. ಅವರು ರಷ್ಯನ್ನರಲ್ಲ, ನಿಮ್ಮ ದೇಶಗಳ ಪ್ರಜೆಗಳು. ರಷ್ಯಾ ತನ್ನ ಸಾವು-ನೋವಿನ ಮುಖವಾಡವನ್ನು ಮುಚ್ಚಿಕೊಳ್ಳಲು ಮತ್ತು ತನ್ನ ಹುಚ್ಚುತನಕ್ಕೆ ನಿಮ್ಮ ಜನರ ಜೀವಗಳನ್ನು ಬಲಿಕೊಡಲು ಅವಕಾಶ ನೀಡಬೇಡಿ ಎಂದು ವಿಶ್ವದ ನಾಯಕರಿಗೆ ನೇರ ಮನವಿ ಮಾಡಿದರು.

ಭಾರತೀಯರ ಸಾವಿನ ಕುರಿತು ವಿದೇಶಾಂಗ ಕಾರ್ಯದರ್ಶಿ ನೀಡಿದ ಮಾಹಿತಿ

ಝೆಲೆನ್ಸ್ಕಿ ಅವರ ಈ ಹೇಳಿಕೆಗೆ ಬಲ ತುಂಬುವಂತೆ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಈ ತಿಂಗಳ ಆರಂಭದಲ್ಲಿ ನೀಡಿರುವ ಅಧಿಕೃತ ಮಾಹಿತಿ ಗಮನಾರ್ಹವಾಗಿದೆ. ರಷ್ಯಾದ ಸಶಸ್ತ್ರ ಪಡೆಗಳಿಗೆ ಭಾರತೀಯ ಪ್ರಜೆಗಳನ್ನು ನೇಮಕ ಮಾಡಿಕೊಂಡಿರುವ ವಿಚಾರವನ್ನು ಭಾರತ ಸರ್ಕಾರವು ರಷ್ಯಾದೊಂದಿಗೆ ಅತ್ಯುನ್ನತ ಮಟ್ಟದಲ್ಲಿ ಚರ್ಚೆ ನಡೆಸಿದೆ.

ಕೊನೆಯ ಅಧಿಕೃತ ಲೆಕ್ಕಾಚಾರದ ಪ್ರಕಾರ, ರಷ್ಯಾದ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದ 227 ಭಾರತೀಯ ಪ್ರಜೆಗಳ ಮಾಹಿತಿ ನಮ್ಮ ಬಳಿಯಿತ್ತು. ಅದರಲ್ಲಿ 139 ಭಾರತೀಯರನ್ನು ಸೈನ್ಯದಿಂದ ಯಶಸ್ವಿಯಾಗಿ ಬಿಡುಗಡೆಗೊಳಿಸಲಾಗಿದೆ. ಆದರೆ, ಅತ್ಯಂತ ದುರದೃಷ್ಟವಶಾತ್ ಯುದ್ಧದಲ್ಲಿ ಭಾಗಿಯಾಗಿ ಇದುವರೆಗೆ 51 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಕ್ರಮ್ ಮಿಶ್ರಿ ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ನಿರ್ಬಂಧ ಮತ್ತು ರಷ್ಯಾದ ಆದಾಯಕ್ಕೆ ತಡೆ

ತಮ್ಮ ಭಾಷಣದಲ್ಲಿ ರಷ್ಯಾದ ಆರ್ಥಿಕ ಮೂಲಗಳನ್ನು ಸ್ಥಗಿತಗೊಳಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ ಝೆಲೆನ್ಸ್ಕಿ, ರಷ್ಯಾದೊಂದಿಗೆ ವ್ಯಾಪಾರ ಮಾಡುವ ಮೂಲಕ ಯಾರೆಲ್ಲ ಹಣವನ್ನು ಪೂರೈಸುತ್ತಾರೋ, ಅವರು ರಷ್ಯಾಗೆ ಯುದ್ಧವನ್ನು ಮುಂದುವರಿಸಲು ಹೆಚ್ಚಿನ ಸಮಯ ನೀಡುತ್ತಿದ್ದಾರೆ. ರಷ್ಯಾದಲ್ಲಿ ಹಣವಿದ್ದಾಗಲೆಲ್ಲ ಅದು ರಾಜತಾಂತ್ರಿಕ ಸಂಧಾನಗಳಿಗೆ ಸ್ಪಂದಿಸುವುದಿಲ್ಲ. ವಿಶ್ವಸಂಸ್ಥೆಯಲ್ಲಿ ವೀಟೋ ಅಧಿಕಾರದ ದುರುಪಯೋಗವು ಜಾಗತಿಕ ಶಾಂತಿಗೆ ಧಕ್ಕೆ ತರುತ್ತಿದೆ. ರಷ್ಯಾದ ಶೀಮಂತ ಉದ್ಯಮಿಗಳು ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸುವುದು ಪುಟಿನ್ ಅವರಿಗೆ ಯುದ್ಧ ಮುಂದುವರಿಸಲು ಆಮ್ಲಜನಕ ನೀಡಿದಂತೆ ಎಂದರು.

ಪ್ರಸ್ತುತ ರಷ್ಯಾದ ಬಜೆಟ್ ಕೊರತೆಯು ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮಟ್ಟದಲ್ಲಿದ್ದು, ಹಲವು ರಷ್ಯನ್ ಪ್ರಾಂತ್ಯಗಳು ದಿವಾಳಿಯಾಗಿವೆ. ಆದ್ದರಿಂದ ಮಾಸ್ಕೋದ ಆರ್ಥಿಕ ಆದಾಯದ ಮೇಲೆ ಕಠಿಣ ಜಾಗತಿಕ ನಿರ್ಬಂಧಗಳನ್ನು ಹೇರುವುದೊಂದೇ ಈ ಭೀಕರ ಯುದ್ಧವನ್ನು ಅಂತ್ಯಗೊಳಿಸಲು ಇರುವ ಏಕೈಕ ಮಾರ್ಗ ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾಕಿಸ್ತಾನದಲ್ಲಿ ಶೋಚನೀಯ ಸ್ಥಿತಿ: ಆಸ್ಪತ್ರೆಗೆ ಹೋಗಿ ಮರಳಿ ಬರುವ ಪುಟ್ಟ ಮಕ್ಕಳಲ್ಲಿ ಏಡ್ಸ್‌ ಪತ್ತೆ!
ಪುರುಷ ವೇಷ ತೊಟ್ಟು ತಾಲಿಬಾನಿಗಳಿಗೇ ಚಮಕ್​ ಕೊಟ್ಟ ಧೀರೆ: ಏಷ್ಯನ್​ ಕ್ರೀಡಾಕೂಟದಲ್ಲಿ ಬೆಳ್ಳಿಯ ತಾರೆ