
ಕೀವ್(ಫೆ.15): ಉಕ್ರೇನ್ ಮೇಲೆ ರಷ್ಯಾದ ಯುದ್ಧ ಘೋಷಿಸುವ ಭೀತಿ ಎದುರಾಗಿದೆ. ಫೆಬ್ರವರಿ 16 ರಂದು ರಷ್ಯಾ ಪಡೆಗಳು ತನ್ನ ದೇಶದ ಮೇಲೆ ದಾಳಿ ಮಾಡಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಝೆಲೆನ್ಸ್ಕಿ ಅವರು ಬುಧವಾರ ರಷ್ಯಾ ಆಕ್ರಮಣ ಮಾಡಬಹುದು ಎಂದು ಅಂದಾಜಿಸಿದ್ದಾರೆ. ಹೀಗಿದ್ದರೂ ಈ ದಿನವನ್ನು ನಾವು ಉಕ್ರೇನಿಯನ್ ರಾಷ್ಟ್ರೀಯ ಏಕತೆಯ ದಿನವನ್ನು ಘೋಷಿಸುವುದಾಗಿ ಎಂದೂ ಹೇಳಿದ್ದಾರೆ.
ಆದಾಗ್ಯೂ, ಫೆಬ್ರವರಿ 16 ರಂದು ರಷ್ಯಾ ಯುದ್ಧ ಘೋಷಿಸಬಹುದು ಎಂದು ಯಾರು ಹೇಳಿದರು ಎಂಬ ಮಾಹಿತಿ ಝೆಲೆನ್ಸ್ಕಿ ಬಿಚ್ಚಿಡಲಿಲ್ಲ. ಅದೇ ಸಮಯದಲ್ಲಿ, ರಷ್ಯಾದ ಸೈನ್ಯವು ದಾಳಿ ಮಾಡಲು ಸಿದ್ಧವಾಗಿದೆ ಎಂದು ವಾಷಿಂಗ್ಟನ್ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಉಕ್ರೇನ್ ಮೇಲೆ ಯಾವುದೇ ಸಮಯದಲ್ಲಾದರೂ ದಾಳಿ ನಡೆಯಬಹುದು. ಇನ್ನು ವೊಲೊಡಿಮಿರ್ ಝೆಲೆನ್ಸ್ಕಿ ದೆಶವನ್ನುದ್ದೇಶಿಸಿ ಮಾಡಿದ ಭಾಷಣದ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ, "ಫೆಬ್ರವರಿ 16 ದಾಳಿಯ ದಿನ ಎಂದು ಅವರು ನಮಗೆ ಹೇಳುತ್ತಾರೆ. ನಾವು ಅದನ್ನು ಏಕತೆಯ ದಿನವನ್ನಾಗಿ ಮಾಡುತ್ತೇವೆ. ಅವರು ಮತ್ತೆ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಲು ದಿನಾಂಕವನ್ನು ತಿಳಿಸಿ ನಮ್ಮನ್ನು ಬೆದರಿಸಲು ಯತ್ನಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಉಕ್ರೇನ್ ಮೇಲೆ ಯಾವ ಸಮಯದಲ್ಲಾದರೂ ದಾಳಿ ಮಾಡಬಹುದು
ರಷ್ಯಾ ಈಗ ಯಾವ ಸಮಯದಲ್ಲಾದರೂ ಉಕ್ರೇನ್ ಮೇಲೆ ಆಕ್ರಮಣ ಮಾಡಬಹುದು ಎಂದು ವಾಷಿಂಗ್ಟನ್ ಹೇಳಿದೆ. ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಸೋಮವಾರ ಸಂದರ್ಶನವೊಂದರಲ್ಲಿ, ಪುಟಿನ್ ಪ್ರತಿದಿನ ಉಕ್ರೇನಿಯನ್ ಗಡಿಯಲ್ಲಿ ಹೆಚ್ಚಿನ ಮಿಲಿಟರಿ ಬಲ ಮತ್ತು ಸಾಮರ್ಥ್ಯವನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ಹೇಳಿದರು. ರಷ್ಯಾದ ಸೈನ್ಯವು ನಿರಂತರವಾಗಿ ಬಲಗೊಳ್ಳುತ್ತಿದೆ ಮತ್ತು ಹೆಚ್ಚು ತಯಾರಾಗುತ್ತಿದೆ. ಅವರು ಮಿಲಿಟರಿ ಬಲವನ್ನು ಬಳಸಲು ಬಯಸಿದರೆ, ಸಾಕಷ್ಟು ಸಾಮರ್ಥ್ಯ ಮತ್ತು ಆಯ್ಕೆಗಳನ್ನು ಹೊಂದಿದ್ದಾರೆಂದು ನಾವು ನಂಬುತ್ತೇವೆ ಎಂದಿದ್ದಾರೆ.
ಮತ್ತೊಂದೆಡೆ, ಭದ್ರತಾ ಬಿಕ್ಕಟ್ಟನ್ನು ಶಮನಗೊಳಿಸಲು ಪ್ರಯತ್ನಿಸಲು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಮಾತನಾಡಲು ಸಿದ್ಧ ಎಂದು ರಷ್ಯಾ ಸೋಮವಾರ ಸೂಚಿಸಿದೆ. ಉಕ್ರೇನ್ ಗಡಿಯ ಬಳಿ ರಷ್ಯಾ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ ಎಂಬುವುದು ಉಲ್ಲೇಖನೀಯ. ಉಕ್ರೇನ್ ಮೇಲೆ ದಾಳಿ ಮಾಡಲು ಯೋಜಿಸುತ್ತಿದೆ ಎಂಬ ಪಾಶ್ಚಿಮಾತ್ಯ ಆರೋಪವನ್ನು ಅದು ನಿರಾಕರಿಸಿದೆ. ನ್ಯಾಟೋ ಮೈತ್ರಿಕೂಟಕ್ಕೆ ಸೇರದಂತೆ ಉಕ್ರೇನ್‌ಗೆ ಖಾತರಿ ನೀಡಬೇಕೆಂದು ರಷ್ಯಾ ಯುಎಸ್‌ನಿಂದ ಒತ್ತಾಯಿಸಿದೆ, ಆದರೆ ಯುಎಸ್ ಹಾಗೆ ಮಾಡಲು ನಿರಾಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ