
ವಾಷಿಂಗ್ಟನ್: ಇರಾನ್-ಅಮೆರಿಕ ನಡುವೆ ಸಂಧಾನದ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳುತ್ತಿರುವ ನಡುವೆಯೇ, ಶ್ವೇತಭವನ ಕೆಲವು ವಿಚಿತ್ರ ವಿಡಿಯೋಗಳನ್ನು ಪೋಸ್ಟ್ ಮಾಡಿ ಚರ್ಚೆಗೆ ನಾಂದಿ ಹಾಡಿದೆ. ಈ ಮಧ್ಯೆ ‘ಶನಿವಾರ ರೋಮಾಂಚಕಾರಿ ಘೋಷಣೆಯಾಗಲಿದೆ’ ಎಂಬ ವಿಡಿಯೋವೊಂದು ಭಾರೀ ಕುತೂಹಲ ಕೆರಳಿಸಿದೆ.
ಶ್ವೇತಭವನ ಕೆಲವು ನಿಗೂಢ ವಿಡಿಯೋಗಳನ್ನು ಶುಕ್ರವಾರ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಒಂದು ವೀಡಿಯೊ ‘ಚುಪ್’ ಎನ್ನುವ ಎಮೋಜಿಯನ್ನು ಹೊಂದಿದೆ. ಅದನ್ನು ಹಿಮ್ಮುಖವಾಗಿ ಪ್ಲೇ ಮಾಡಿದಾಗ, ‘ನಾಳೆ ರೋಮಾಂಚಕಾರಿ ಘೋಷಣೆ’ ಎನ್ನುವ ಧ್ವನಿ ಕೇಳಿಬರುತ್ತದೆ.
ಮಧ್ಯಪ್ರಾಚ್ಯ ಯುದ್ಧ ದಿನಕ್ಕೊಂದು ತಿರುವು ಪಡೆಯುತ್ತಿರುವ ಮಧ್ಯೆ ಈ ವಿಡಿಯೋ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು. ಸೋಷಿಯಲ್ ಮೀಡಿಯಾದಲ್ಲಿ ನಾನಾ ಚರ್ಚೆ ಶುರುವಾಗಿದೆ. ಏಕೆಂದರೆ ಇತ್ತೀಚೆಗೆ ಟ್ರಂಪ್ ದಿಢೀರನೆ 5 ದಿನದ ಏಕಪಕ್ಷೀಯ ಕದನವಿರಾಮ ಸಾರಿದ್ದರು. ಬಳಿಕ ಶುಕ್ರವಾರ ಇನ್ನೂ 10 ದಿನ ಕದನವಿರಾಮ ವಿಸ್ತರಿಸುವ ಘೋಷಣೆ ಮಾಡಿದ್ದಾರೆ. ಇನ್ನು ಮೊನ್ನೆಯಷ್ಟೇ ಇಸ್ರೇಲ್‌ನ ಕೆಲವು ನಾಯಕರು ಟ್ರಂಪ್ ಶನಿವಾರ ಏಕಪಕ್ಷೀಯವಾಗಿ ಯುದ್ಧ ನಿಲ್ಲಿಸುವ ಘೋಷಣೆ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಅದರ ನಡುವೆ ಈ ಘೋಷಣೆ ಬಂದಿದೆ.
ದುಬೈ: ಇರಾನ್ ವಿರುದ್ಧ ಯುದ್ಧಕ್ಕೆ 5 ದಿನಗಳ ವಿರಾಮ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದನ್ನು ಇನ್ನೂ 10 ದಿನಗಳ ಕಾಲ, ಅರ್ಥಾತ್ ಏ.6ರವರೆಗೆ ವಿಸ್ತರಿಸಿದ್ದಾರೆ. ಟ್ರುತ್ ಸೋಶಿಯಲ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ‘ಇರಾನ್ ಸರ್ಕಾರದ ಕೋರಿಕೆಯ ಮೇರೆಗೆ, ನಾನು ಇರಾನ್‌ನ ಶಕ್ತಿ ಸ್ಥಾವರಗಳ ನಾಶವನ್ನು 10 ದಿನಗಳವರೆಗೆ ವಿರಾಮಗೊಳಿಸುತ್ತಿದ್ದೇನೆ. ಇದು ಏ.6ರ ರಾತ್ರಿ 8 ಗಂಟೆಯವರೆಗೆ ಮುಂದುವರಿಯುತ್ತದೆ. ನಮ್ಮ ನಡುವೆ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ’ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ