
ಓಮಾನ್(ಜ.11): ಪ್ರಜಾಪ್ರಭುತ್ವವಾದಿ ಹಾಗೂ ಉದಾರವಾದಿ ಎಂದೇ ಖ್ಯಾತರಾಗಿದ್ದ ಓಮಾನ್ ದೊರೆ ಖಬೂಸ್ ಬಿನ್ ಸೈದ್ ನಿಧನರಾಗಿದ್ದಾರೆ.
79 ವರ್ಷದ ಖಬೂಸ್ ಬಿನ್ ಸೈದ್ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ವೈದ್ಯರ ಸತತ ಪ್ರಯತ್ನಗಳ ಬಳಿಕವೂ ತಮ್ಮ ಕೊನೆಯುಸಿರೆಳೆದಿದ್ದರೆ ಎಂದು ಓಮಾನ್ ಸರ್ಕಾರಿ ಮೂಲಗಳು ತಿಳಿಸಿವೆ.
1970ರಲ್ಲಿ ತಮ್ಮ ತಂದೆಯ ವಿರುದ್ಧ ಸೇನಾ ಕ್ರಾಂತಿ ನಡೆಸಿ ಅಧಿಕಾರಕ್ಕೆ ಬಂದ ಖಬೂಸ್ ಬಿನ್ ಸೈದ್, ಅರಬ್ ರಾಷ್ಟ್ರಗಳಲ್ಲೇ ಅತ್ಯಂತ ದೀರ್ಘ ಕಾಲ ಆಡಳಿತ ನಡೆಸಿದ ದೊರೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಬ್ರಿಟನ್ ಸಹಾಯದೊಂದಿಗೆ ಅಧಿಕಾರದ ಗದ್ದುಗೆ ಏರಿದ ಸುಲ್ತಾನ್ ಖಬೂಸ್, ಸತತ 50 ವರ್ಷಗಳ ಕಾಲ ಓಮಾನ್ ಮೇಲೆ ಹಿಡಿತ ಸಾಧಿಸಿದ್ದು ಇದೀಗ ಇತಿಹಾಸದ ಭಾಗ.
ಪ್ರಜಾಪ್ರಭುತ್ವವಾದಿ ಹಾಗೂ ಉದಾರವಾದಿ ಮುಸ್ಲಿಂ ಸುಲ್ತಾನ ಎಂದೇ ಖ್ಯಾತರಾಗಿದ್ದ ಖಬೂಸ್, ಓಮಾನ್‌ಗಳಲ್ಲಿ ಅನೇಕ ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ಕಾರಣೀಭೂತರು.
ಭಾರತದೊಂದಿಗೆ ಅನೋನ್ಯ ಸಂಬಂಧ ಹೊಂದಿದ್ದ ದೊರೆ ಖಬೂಸ್, ಹಲವು ಬಾರಿ ಭಾರತಕ್ಕೆ ಭೇಟಿ ನೀಡಿ ದ್ವಿಪಕ್ಷೀಯ ಭಾಂಧವ್ಯ ವೃದ್ಧಿಗೆ ಒತ್ತು ನೀಡಿದ್ದರು.
ಪ್ರಧಾನಿ ಮೋದಿ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಖಬೂಸ್ ಬಿನ್, ಎರಡೂ ರಾಷ್ಟ್ರಗಳ ನಡುವಿನ ಸುಮಧುರ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದರು.
ಅದರಂತೆ ಓಮಾನ್ ದೊರೆ ಖಬೂಸ್ ಬಿನ್ ಸೈದ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ವಿಶ್ವದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಉತ್ತರಾಧಿಕಾರಿ ನೇಮಕ:
ಓಮಾನ್ ಸಂವಿಧಾನದ ಪ್ರಕಾರ ಸುಲ್ತಾನನ ಗಂಡು ಮಕ್ಕಳು ಅಥವಾ ರಾಜಮನೆತನದ ವ್ಯಕ್ತಿಯೇ ಸುಲ್ತಾನ ಪಟ್ಟಕ್ಕೆ ಅರ್ಹ. ಅಥವಾ ದೊರೆ ನೇಮಿಸುವ ಉತ್ತರಾಧಿಕಾರಿಯೇ ಸುಲ್ತಾನನಾಗಿ ನೇಮಕಗೊಳ್ಳುತ್ತಾನೆ.
ದೊರೆ ಖಬೂಸ್ ಅವರಿಗೆ ಗಂಡು ಮಕ್ಕಳಿಲ್ಲದಿರುವುದರಿಂದ ದೊರೆಯ ಸಂಬಂಧಿ ಹಾಗೂ ಓಮಾನ್ ಸಂಸ್ಕೃತಿ ಸಚಿವ ಹೈತಾಮ್ ಬಿನ್ ತಾರಿಖ್ ಅಲ್ ಸೈದ್ ಅವರನ್ನು ಓಮಾನ್‌ನ ನೂತನ ದೊರೆಯಾಗಿ ಆಯ್ಕೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ