* ಆಗಸದಿಂದ ಏಕಾಏಕಿ ಬಿದ್ದವು ಅತ್ತ ಪಕ್ಷಿಗಳು
* ಆಸ್ಪತ್ರೆ ತುರ್ತು ಪ್ರದೇಶದ ಮರದಲ್ಲಿದ್ದ ಹಕ್ಕಿಗಳು
* ಹಕ್ಕಿಗಳ ನಿಗೂಢ ಸಾವಿಗೆ ಕಾರಣ ಇದೇನಾ?
ಮ್ಯಾಡ್ರಿಡ್(ಡಿ.05): ಸ್ಪೇನ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಲ್ಲೊಂದು ಕಡೆ, ಸುಮಾರು 200 ಸತ್ತ ಪಕ್ಷಿಗಳು ಆಕಾಶದಿಂದ ಏಕಾಏಕಿ ಬಿದ್ದಿವೆ. ಸದ್ಯ ಈ ನಿಗೂಢತೆ ಹಿಂದಿನ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ನವೆಂಬರ್ 26 ರಂದು, ವಾಯುವ್ಯ ಸ್ಪೇನ್‌ನಲ್ಲಿ ಬೆಳಿಗ್ಗೆ 9 ಗಂಟೆಗೆ, ಸ್ಥಳೀಯರು ಸುಮಾರು 200 ಸತ್ತ ಪಕ್ಷಿಗಳನ್ನು ನೆಲದ ರಸ್ತೆ ಮೇಲಲೆ ನೋಡಿದ್ದಾರೆ. ಜುವಾನ್ ಕಾರ್ಡೋನಾ ಆಸ್ಪತ್ರೆಯ ಹೊರಗೆ ಕಾರುಗಳು ಮತ್ತು ಜನರ ಮೇಲೆ ಸತ್ತ ಹಕ್ಕಿ ಬಿದ್ದಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಈ ಸಂದರ್ಭದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಇದ್ದಕ್ಕಿದ್ದಂತೆ ಸತ್ತ ಪಕ್ಷಿಗಳು ಕಾರುಗಳ ಮೇಲೆ ಬೀಳಲು ಪ್ರಾರಂಭಿಸಿದವು
ಆಸ್ಪತ್ರೆಯ ತುರ್ತು ಪ್ರದೇಶದಲ್ಲಿದ್ದ ಮರಗಳಿಂದ ಹೊರಬಂದು ಸ್ವಲ್ಪ ದೂರ ಹಾರಿ ಪಾದಚಾರಿ ಮಾರ್ಗದಲ್ಲಿ ಬಿದ್ದಿವೆ ಎಂದು ಸ್ಥಳೀಯ ನಿವಾಸಿಗಳ ಸಂಘದ ಅಧ್ಯಕ್ಷ ಮಾಪಿ ರೋಡ್ರಿಗಸ್ ತಿಳಿಸಿದ್ದಾರೆ. ಸ್ವಲ್ಪ ಸಮಯದಲ್ಲೇ ಪಕ್ಷಿಗಳ ಸಂಖ್ಯೆ ಸುಮಾರು 200 ತಲುಪಿತು. ಆ ಬಳಿಕ ಅವುಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಹೀಗಿರುವಾಗ ಈ ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಬಿದ್ದಿರುವ ಎರಡು ಪಕ್ಷಿಗಳನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದ್ದು, ಅದರ ಹಿಂದಿನ ಕಾರಣವನ್ನು ಪತ್ತೆ ಹಚ್ಚಬಹುದು. ಫೆರೋಲ್ ಸಿಟಿ ಕೌನ್ಸಿಲ್ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಈ ವರ್ಷದ ಆರಂಭದಲ್ಲಿ ಸಮೀಪದ ತಾರಗೋನಾದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ, ವಿಷಕಾರಿ ರಾಸಾಯನಿಕಗಳಿಂದ ನೂರಾರು ಪಕ್ಷಿಗಳು ಆಕಾಶದಿಂದ ನೆಲಕ್ಕೆ ಬಿದ್ದು ಸತ್ತಿವೆ. ಈ ರಾಸಾಯನಿಕವನ್ನು ಹತ್ತಿರದ ಕಾರ್ಖಾನೆಯಿಂದ ಬಿಡುಗಡೆ ಮಾಡಲಾಗಿತ್ತೆನ್ನಲಾಗಿದೆ.
ಪಕ್ಷಿಗಳಿಗೆ ವಿದ್ಯುತ್ ಸ್ಪರ್ಶ?
ನೆಲದ ಮೇಲೆ ಬೀಳುವ ಹಕ್ಕಿಗಳ ವಿಶೇಷತೆ ಎಂದರೆ ಅವು ಹಿಂಡು ಹಿಂಡಾಗಿ ಹಾರುತ್ತವೆ. ಹೀಗಿರುವಾಗ ಫೆರೋಲ್ ಪರಿಸರದಲ್ಲಿ ಈ ರೀತಿಯ ಘಟನೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಪತ್ತೆಯಾಗುತ್ತಿತ್ತು ಆದರೆ ಇಲ್ಲಿಯವರೆಗೂ ಪಕ್ಷಿಗಳ ಸಾವು ನಿಗೂಢವಾಗಿಯೇ ಉಳಿದಿದೆ. ಸ್ಥಳೀಯ ಮಾಧ್ಯಮಗಳಲ್ಲಿ ವದಂತಿಯ ಪ್ರಕಾರ, ಅವು ಹತ್ತಿರದ ವಿದ್ಯುತ್ ತಂತಿಯ ಮೇಲಿದ್ದವು. ಹೀಗಿರುವಾಗ ವಿದ್ಯುತ್ ತಗುಲಿ ಸಾವನ್ನಪ್ಪಿವೆ ಎನ್ನಲಾಗಿದೆ. ಆದಾಗ್ಯೂ ಇದು ದೃಢಪಟ್ಟಿಲ್ಲ. ಕಾರ್ಖಾನೆಯಿಂದ ರಾಸಾಯನಿಕ ಬಿಡುಗಡೆಯಾಗುವ ಸಾಧ್ಯತೆಯನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಪ್ರದೇಶವನ್ನು ತನಿಖೆ ಮಾಡಲಾಗಿದೆ. ಸಮೀಪದಲ್ಲಿ ವಿಶ್ವವಿದ್ಯಾನಿಲಯ, ಸೂಪರ್ಮಾರ್ಕೆಟ್ ಮತ್ತು ಮೆಟ್ರೋಪಾಲಿಟನ್ ಪ್ರದೇಶವಿದೆ ಆದರೂ ಇದರಿಂದ ಅಪಾಯಕಾರಿ ರಾಸಾಯನಿಕಗಳು ಬಿಡುಗಡೆಯಾಗುವ ಸಾಧ್ಯತೆ ಬಹಳ ಕಡಿಮೆ ಎನ್ನಲಾಗಿದೆ.