
ವಾಷಿಂಗ್ಟನ್: ಅಮೆರಿಕದಲ್ಲಿ ಅ.1ರಿಂದ ಆರಂಭವಾಗಿರುವ ಶಟ್‌ಡೌನ್( ಸರ್ಕಾರಿ ಕಾರ್ಯ ಸ್ಥಗಿತ) 37ನೇ ದಿನಕ್ಕೆ ಕಾಲಿಟ್ಟಿದ್ದು, ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಏರ್ಪೋರ್ಟ್ ಸೇರಿ ಹಲವು ಪ್ರಮುಖ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಿದ್ದು, ಲಕ್ಷಾಂತರ ಮಂದಿ ಸರ್ಕಾರಿ ಮತ್ತು ಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇದರ ಒಟ್ಟಾರೆ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆ ಮೇಲೂ ಬೀಳಲು ಆರಂಭಿಸಿದ್ದು, ಸರ್ಕಾರಕ್ಕೆ ವಾರಕ್ಕೆ 1.32 ಲಕ್ಷ ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ ಎಂದು ಬ್ಲೂಮ್‌ಬರ್ಗ್ ಹೇಳಿದೆ.
ಶಟ್‌ಡೌನ್‌ನ ಹೆಚ್ಚಿನ ಬಿಸಿ ವಿಮಾನ ಪ್ರಯಾಣಿಕರ ಮೇಲಾಗುತ್ತಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ 40 ಜನನಿಬಿಡ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಖ್ಯೆಯನ್ನು ಶುಕ್ರವಾರದಿಂದ ಕಡಿಮೆ ಮಾಡಲು ನಿರ್ಧರಿಸಿದೆ. ಸಿಬ್ಬಂದಿಯ ತೀವ್ರ ಕೊರತೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ, ಒಂದು ವೇಳೆ ಶಟ್‌ಡೌನ್ ಮುಂದುವರಿದರೆ ವಿಮಾನಗಳ ವಿಳಂಬ, ರದ್ದು ಮತ್ತಷ್ಟು ಹೆಚ್ಚಾಗಲಿದೆ. 40 ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಸ್ಥಗಿತಗೊಳಿಸುವ ಆತಂಕ ಎದುರಾಗಿದೆ. ಒಂದು ತಿಂಗಳಿಂದಲೂ ಹೆಚ್ಚು ಕಾಲ ಏರ್‌ಟ್ರಾಫಿಕ್ ಕಂಟ್ರೋಲರ್‌ಗೆ ಹಣ ಪಾವತಿಯಾಗಿಲ್ಲ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
ಆಡಳಿತ ಮತ್ತು ಪ್ರತಿಪಕ್ಷದ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಸರ್ಕಾರಿ ವೆಚ್ಚಗಳಿಗೆ ಸಂಬಂಧಿಸಿದ ವಿಧೇಯಕ ಪಾಸ್ ಮಾಡಲು ಸಾಧ್ಯವಾಗದೆ ಅಮೆರಿಕದಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.
ಆರೋಗ್ಯ ಸಬ್ಸಿಡಿಗಳು ಮತ್ತು ಇತರೆ ಸರ್ಕಾರಿ ವೆಚ್ಚಗಳಿಗೆ ಸಂಬಂಧಿಸಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಮತ್ತು ಡೆಮಾಕ್ರಟಿಕ್ ಪಕ್ಷದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಶಟ್‌ಡೌನ್ ಉಂಟಾಗಿದೆ. ಹೆಲ್ತ್ ಇನ್ಸೂರೆನ್ಸ್ ಟ್ಯಾಕ್ಸ್ ಕ್ರೆಡಿಟ್‌ಗಳನ್ನು ನವೀಕರಣ ಮಾಡಬೇಕು ಮತ್ತು ಮೆಡಿಕ್‌ಏಡ್‌ನ ಕಡಿತ ಕೈಬಿಡಬೇಕು ಎಂದು ಡೆಮಾಕ್ರಟಿಕ್ ಪಕ್ಷ ಆಗ್ರಹಿಸಿತ್ತು. ಆದರೆ ಇದಕ್ಕೆ ರಿಪಬ್ಲಿಕನ್ಸ್ ವಿರೋಧ ವ್ಯಕ್ತಪಡಿಸಿದ್ದು, ಇದರಿಂದಾಗಿ ಸರ್ಕಾರಿ ವೆಚ್ಚದ ವಿಧೇಯಕ ಸಂಸತ್ತಲ್ಲಿ ಪಾಸ್ ಮಾಡಲು ಸಾಧ್ಯವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ