
ನವದೆಹಲಿ (ನ.23): ಇತ್ತೀಚೆಗೆ ಒಂದು ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಚೀನಾದಲ್ಲಿ ಕುರಿಗಳ ಗುಂಪು ಸತತ 12 ದಿನಗಳ ಕಾಲ ಜಮೀನಿನೊಂದರಲ್ಲಿ ವೃತ್ತಾಕಾರದಲ್ಲಿ ಸುತ್ತುಹೊಡೆದಿದ್ದವು. ಸರ್ವೇಕ್ಷಣಾ ಕ್ಯಾಮೆರಾದ ಈ ದೃಶ್ಯವನ್ನು ಚೀನಾದ ಸುದ್ದಿಸಂಸ್ಥೆಯೊಂದು ಪ್ರಕಟಿಸಿ ಇದಕ್ಕೆ ಕಾರಣವೇನಿರಬಹುದು ಎಂದು ಪ್ರಶ್ನೆ ಮಾಡಿತ್ತು. ಕೆಲವರು ಇದು ಬಹುತೇಕ ವಿಶ್ವದ ಅಂತ್ಯ ಸನಿಹವಾಗಿದೆ ಎನ್ನುವ ಸೂಚನೆಯ ಅರ್ಥ ಎಂದು ಹೇಳಿದ್ದರೆ, ಇನ್ನೂ ಕೆಲವರು ಏನೋ ಅಹಿತಕರವಾದದ್ದು ನಡೆಯಲಿದೆ ಎನ್ನುವುದು ಕುರಿಗಳ ಅರಿವಿಗೆ ಬಂದಿದೆ ಎಂದು ಮಾತನಾಡಿದ್ದರು. ಈ ನಡುವೆ ವಿಜ್ಷಾನಿಯೊಬ್ಬರು ಕುರಿಗಳ ಈ ವರ್ತನೆಗೆ ಕಾರಣವೇನಿರಬಹುದು ಎನ್ನುವುದನ್ನು ಊಹೆ ಮಾಡಿದ್ದು, ಬಹುತೇಕ ಇದೇ ಸತ್ಯ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಪೀಪಲ್ಸ್ ಡೈಲಿ ಚೀನಾ ವರದಿ ಮಾಡಿದ್ದ ಈ ಸುದ್ದಿ ತಕ್ಷಣವೇ ವಿಶ್ವದೆಲ್ಲೆಡೆ ಅಚ್ಚರಿ ಸೃಷ್ಟಿಸಿತ್ತು. ಅಷ್ಟು ಅಚ್ಚುಕಟ್ಟಾಗಿ ಕುರಿಗಳು ಸುತ್ತು ಹಾಕಲು ಕಾರಣವೇನು, ಒಂದು ದಿನವಾದರೆ ಇದು ದೊಡ್ಡ ಸುದ್ದಿಯಾಗುತ್ತಿರಲಿಲ್ಲ. ಸತತ 12 ದಿನಗಳ ಕಾಲ ಕುರಿಗಳು ಈ ರೀತಿ ಮಾಡಿದ್ದವು. ಚೀನಾದ ಉತ್ತರ ಭಾಗದ ಮಂಗೋಲಿಯಾದ ಭಾಗದಲ್ಲಿ ಈ ಘಟನೆ ನಡೆದಿತ್ತು.
ಇದೀಗ, ಇಂಗ್ಲೆಂಡ್‌ನ ಗ್ಲೌಸೆಸ್ಟರ್‌ನಲ್ಲಿರುವ ಹಾರ್ಟ್‌ಪುರಿ ವಿಶ್ವವಿದ್ಯಾಲಯದ ಕೃಷಿ ವಿಭಾಗದ ಪ್ರಾಧ್ಯಾಪಕ ಮತ್ತು ನಿರ್ದೇಶಕ ಮ್ಯಾಟ್ ಬೆಲ್ ಅವರು ವೈರಲ್ ವೀಡಿಯೊದ ಹಿಂದಿನ ರಹಸ್ಯವನ್ನು ಪರಿಹರಿಸಿದ್ದಾಗಿ ಹೇಳಿದ್ದಾರೆ. ನ್ಯೂಸ್‌ವೀಕ್‌ನ ವರದಿಯಲ್ಲಿ ಮಾತನಾಡಿರುವ ಅವರು, 'ಕುರಿಗಳು ದೀರ್ಘಕಾಲದವರೆಗೆ ದೊಡ್ಡಿಯಲ್ಲಿದ್ದವು ಎಂದು ಕಾಣುತ್ತದೆ. ದೊಡ್ಡಿಯಲ್ಲಿ ಕುರಿಗಳು ಇನ್ನೊಂದು ಕುರಿಗಳ ವರ್ತನೆಯನ್ನು ಪಾಲನೆ ಮಾಡುತ್ತಿದ್ದವು. ದೊಡ್ಡಿಯಲ್ಲಿದ್ದು, ತಮ್ಮ ತಮ್ಮ ಮುಖಗಳ್ನು ನೋಡಿಕೊಂಡು ಬಹುಶಃ ಇವುಗಳು ಹತಾಶವಾಗಿ ಸುತ್ತುವುದನ್ನೇ ರೂಢಿ ಮಾಡಿಕೊಂಡಿದ್ದವು ಎಂದು ಕಾಣುತ್ತದೆ. ಹೊರಗಡೆ ಬಂದಾಗಲೂ ಕೂಡ ಅವುಗಳು ಹಾಗೆಯೇ ವರ್ತನೆ ಮಾಡಿದ್ದರ ಪರಿಣಾಮ ಇದು. ಒಟ್ಟಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ' ಎಂದು ಅವರು ಹೇಳಿದ್ದಾರೆ.
ಚೀನಾ ಜೊತೆ ಕೈಜೋಡಿಸಿದ ಪಾಕ್, ಕೊರೋನಾಗಿಂತ ಮಾರಕವಾದ 'ಡೆಡ್ಲಿ ವೈರಸ್' ಸಂಶೋಧನೆ!
ಆದರೆ, ಕುರಿಗಳ ಈ ವಿಡಿಯೋಗಳು ನೆಟಿಜನ್ಸ್‌ಗಳಿಗೆ ಅಚ್ಚರಿಗೆ ಕಾರಣವಾಗಿದ್ದು ಮಾತ್ರವಲ್ಲದೆ ಭಿನ್ನ ಭಿನ್ನ ಕಾಮೆಂಟ್‌ಗಳು ಬಂದಿದ್ದವು. ಕುರಿಗಳ ವಿಲಕ್ಷಣ ನಡವಳಿಕೆಯನ್ನು ವಿಚಿತ್ರವಾದದ್ದು ಎಂದು ಕರೆಯುವುದರಿಂದ ಹಿಡಿದು ನಮ್ಮ ಅಂತ್ಯ ಹತ್ತಿರದಲ್ಲಿದೆ ಎಂದು ಹೇಳುವವರೆಗೆ, ಜನರು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ