
ಕೀವ್(ಏ.26): ಉಕ್ರೇನ್-ರಷ್ಯಾ ಯುದ್ಧದ ನಡುವೆಯೇ ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಮತ್ತು ರಕ್ಷಣಾ ಕಾರ‍್ಯದರ್ಶಿ ಲಾಯ್ಡ್ ಆಸ್ಟಿನ್ ಸೋಮವಾರ ಉಕ್ರೇನಿಗೆ ರಹಸ್ಯ ಭೇಟಿ ನೀಡಿ ನೀಡಿದರು. ಯುದ್ಧ ಆರಂಭದ ಬಳಿಕ ಉಕ್ರೇನಿಗೆ ಅಮೆರಿಕದ ಮೊಟ್ಟಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ.
ಭೇಟಿ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಬ್ಲಿಂಕನ್, ರಷ್ಯಾ ವಿರುದ್ಧ ಹೋರಾಡಲು ಎಲ್ಲಾ ರೀತಿ ನೆರವು ನೀಡುವುದಾಗಿ ತಿಳಿಸಿದರು. ಹಾಗೆಯೇ ಭೀಕರ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧದ ಹೋರಾಟಕ್ಕಾಗಿ ಉಕ್ರೇನಿಗೆ 16.5 ಕೋಟಿ ಡಾಲರ್ ಮೊತ್ತದ ಸ್ಫೋಟಕಗಳನ್ನು ಮತ್ತು 30 ಕೋಟಿ ಡಾಲರ್ ವಿದೇಶಿ ಮಿಲಿಟರಿ ನೆರವು ನೀಡಲು ಅಮೆರಿಕ ನಿರ್ಧರಿಸಿದೆ ಎಂದು ತಿಳಿಸಿದರು.
ಪೋಲೆಂಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಿಂಕನ್, ‘ಯುದ್ಧದಲ್ಲಿ ರಷ್ಯಾ ಸೋಲುತ್ತಿದೆ. ಉಕ್ರೇನ್ ಮೇಲುಗೈ ಸಾಧಿಸುತ್ತಿದೆ. ಉಕ್ರೇನಿನ ಮೇಲೆ ಹಿಡಿತ ಸಾಧಿಸಿ, ಅದರ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಕಸಿಯುವುದು ರಷ್ಯಾ ಉದ್ದೇಶವಾಗಿತ್ತು. ಆದರೆ ಈ ಪ್ರಯತ್ನದಲ್ಲಿ ರಷ್ಯಾ ಸೋತಿದೆ’ ಎಂದರು.
‘ಉಕ್ರೇನಿಗೆ ಬೃಹತ್ ಬೆಂಬಲ ನೀಡಿ, ರಷ್ಯಾ ಮೇಲೆ ತೀವ್ರ ಒತ್ತಡ ಹೇರುವುದು ನಮ್ಮ ತಂತ್ರ. ಇದಕ್ಕಾಗಿ 30ಕ್ಕೂ ಹೆಚ್ಚು ದೇಶಗಳು ಕೈಜೋಡಿಸಿವೆ’ ಎಂದು ತಿಳಿಸಿದರು.
ಬ್ಲಿಂಕನ್ ಅವರೊಂದಿಗಿನ ಮಾತುಕತೆ ವೇಳೆ ಜೆಲೆನ್‌ಸ್ಕಿ, ಉಕ್ರೇನಿಗೆ ಇನ್ನೂ ಹೆಚ್ಚೆಚ್ಚು ಯುದ್ಧೋಪಕರಣಗಳನ್ನು ಒದಗಿಸಲು ಮನವಿ ಮಾಡಿದರು. ಈಗಾಗಲೇ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ನೀಡಿದ ನೆರವಿಗೆ ಧನ್ಯವಾದ ತಿಳಿಸಿದರು.
ಈ ನಡುವೆ ಉಕ್ರೇನ್ ರಾಜಧಾನಿ ಕೀವ್ ವಶಕ್ಕೆ ಪಡೆಯಲು ವಿಫಲವಾಗಿರುವ ರಷ್ಯಾ ಪೂರ್ವ ಕೈಗಾರಿಕಾ ಪ್ರದೇಶದ ಹೃದಯ ಭಾಗವಾದ ಡೋನ್‌ಬಾಸ್ ಪ್ರದೇಶದ ಮೇಲೆ ಪೂರ್ಣ ಹಿಡಿತ ಸಾಧಿಸುವ ಗುರಿಯೊಂದಿಗೆ ದಾಳಿಯನ್ನು ಇನ್ನೂ ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ಬ್ರಿಟನ್ ವಿದೇಶಾಂಗ ಸಚಿವಾಲಯ ಎಚ್ಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ