
ರಿಯಾಧ್(ಜೂ.02): ಜಗತ್ತಿನಲ್ಲೇ ಹಿಂದೆಂದೂ ಕೇಳರಿಯದ ರೀತಿಯ ಅತ್ಯಂತ ಬೃಹತ್ ಅವಳಿ ಕಟ್ಟಡವನ್ನು ನಿರ್ಮಿಸಲು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮುಂದಾಗಿದ್ದಾರೆ. ವಿಶೇಷವೆಂದರೆ, 500 ಮೀಟರ್ (1,640 ಅಡಿ) ಎತ್ತರವಿರುವ ಈ ಅವಳಿ ಕಟ್ಟಡಗಳು ಹಲವು ಮೈಲುಗಳಷ್ಟುಉದ್ದವಿರಲಿವೆ! ಕೆಂಪು ಸಮುದ್ರದಿಂದ ಆರಂಭಿಸಿ ಮರುಭೂಮಿಯವರೆಗೂ ಈ ಕಟ್ಟಡಗಳನ್ನು ನಿರ್ಮಿಸಲು ಚಿಂತನೆ ನಡೆದಿದೆ.
2017ರಲ್ಲಿ ಸೌದಿ ಸರ್ಕಾರ ನಿಯೋಮ್ ಎಂಬ ವಿನೂತನ ನಗರವೊಂದರ ನಿರ್ಮಾಣ ಯೋಜನೆಯನ್ನು ಪ್ರಕಟಿಸಿತ್ತು. ಅದರಲ್ಲಿ ಕೆಲ ಮಾರ್ಪಾಡು ಮಾಡಿ ಈಗ ‘ದಿ ಲೈನ್’ ಎಂಬ ಅವಳಿ ಕಟ್ಟಡ ನಿರ್ಮಿಸಲು ಬಹುತೇಕ ನಿರ್ಧರಿಸಲಾಗಿದೆ. ಇದು ಜಗತ್ತಿನ ಅತ್ಯಂತ ದೊಡ್ಡ ಕಟ್ಟಡ ಎಂಬ ಖ್ಯಾತಿ ಗಳಿಸಲಿದೆ. ಸುಮಾರು 500 ಬಿಲಿಯನ್ ಡಾಲರ್ (ಅಂದಾಜು 40 ಲಕ್ಷ ಕೋಟಿ ರು.) ವೆಚ್ಚದಲ್ಲಿ ಇದನ್ನು ನಿರ್ಮಿಸಲು ನಿರ್ಧರಿಸಲಾಗಿದೆ.
ಅವಳಿ ಕಟ್ಟಡದಲ್ಲಿ ಇಡೀ ನಗರ:
ಸದ್ಯ ಜಗತ್ತಿನ ಅತ್ಯಂತ ಎತ್ತರದ ಕಟ್ಟಡಗಳೆಲ್ಲ ಹೋಟೆಲ್, ಮಾಲ್ ಹಾಗೂ ವಸತಿ ಸಂಕೀರ್ಣಗಳಾಗಿವೆ. ಸೌದಿಯಲ್ಲಿ ನಿರ್ಮಾಣವಾಗಲಿರುವ ‘ದಿ ಲೈನ್’ ಕಟ್ಟಡದಲ್ಲಿ ಒಂದು ನಗರದಲ್ಲಿರುವ ಎಲ್ಲ ವ್ಯವಸ್ಥೆಗಳೂ ಇರಲಿವೆ. ಮನೆಗಳು, ಚಿಲ್ಲರೆ ಮಾರುಕಟ್ಟೆ, ಅಂಗಡಿ, ಕಚೇರಿ, ಮನರಂಜನೆ, ಹೋಟೆಲ್, ಮಾಲ್, ಶಾಲೆ ಹೀಗೆ ಪ್ರತಿಯೊಂದು ಅಗತ್ಯ ಸೌಕರ್ಯವೂ ಇದರಲ್ಲಿರಲಿದೆ. ಸದ್ಯ ಅರ್ಧ ಮೈಲು ಉದ್ದದ ಮಾದರಿಯೊಂದನ್ನು ವಿನ್ಯಾಸಗೊಳಿಸಿ ಕೊಡಲು ಅಮೆರಿಕ ಮೂಲದ ಆರ್ಕಿಟೆಕ್ಚರ್ ಕಂಪನಿಯೊಂದಕ್ಕೆ ಹೇಳಲಾಗಿದೆ. ನಂತರ ನಿರ್ಮಿಸುವ ಕಟ್ಟಡ ಹಲವು ಡಜನ್ ಮೈಲುಗಳಷ್ಟುಉದ್ದವಿರಲಿದೆ ಎಂದು ತಿಳಿದುಬಂದಿದೆ.
ಪಾಳುಬಿದ್ದ ಜಾಗದಲ್ಲಿ ನಿರ್ಮಾಣ:
ಕೆಂಪು ಸಮುದ್ರದಿಂದ ಮರುಭೂಮಿಯವರೆಗೆ ಸದ್ಯ ಜನವಸತಿ ಇಲ್ಲದ, ಬಳಕೆಗೂ ಯೋಗ್ಯವಲ್ಲದ ಖಾಲಿ ಜಾಗದಲ್ಲಿ ಈ ಯೋಜನೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಕಾರ್ಮಿಕರಿಂದ ಹಿಡಿದು ಶತಕೋಟಿ ಡಾಲರ್ ಶ್ರೀಮಂತರವರೆಗೆ ಪ್ರತಿಯೊಬ್ಬರಿಗೂ ‘ದಿ ಲೈನ್’ನಲ್ಲಿ ಜಾಗವಿರಲಿದೆ. ಹೊಸ ಕಾಲದ ಜಗತ್ತಿನ ಅಗತ್ಯಗಳನ್ನು ಆಧರಿಸಿ ಇದನ್ನು ನಿರ್ಮಿಸಲಾಗುವುದು ಎಂದು ‘ನಿಯೋಮ್’ ಸಿಇಒ ನಧಮಿ ಅಲ್ ನಸರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ