ಸಮರೋತ್ಸಾಹದಲ್ಲಿರುವ ರಷ್ಯಾ, ಉಕ್ರೇನ್ ಗಡಿಯಲ್ಲಿ ತನ್ನ ಸೇನಾ ನಿಯೋಜನೆಯನ್ನು 1.30 ಲಕ್ಷಕ್ಕೆ ಹೆಚ್ಚಿಸಿದೆ. ಇತ್ತ ಉಕ್ರೇನ್‌ಗೆ ನ್ಯಾಟೋ ಪಡೆಗಳು ಮತ್ತಷ್ಟುಶಸ್ತ್ರಾಸ್ತ್ರಗಳನ್ನು ರವಾನಿಸುವುದರೊಂದಿಗೆ ಉಭಯ ದೇಶಗಳ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಯುದ್ಧ ಭೀತಿ ಮತ್ತಷ್ಟುದಟ್ಟವಾಗಿ ಹೊರಹೊಮ್ಮಿದೆ.
ವಾಷಿಂಗ್ಟನ್/ಕಿಯೇವ್ (ಫೆ.15): ಸಮರೋತ್ಸಾಹದಲ್ಲಿರುವ ರಷ್ಯಾ (Russia), ಉಕ್ರೇನ್ (Ukraine) ಗಡಿಯಲ್ಲಿ ತನ್ನ ಸೇನಾ ನಿಯೋಜನೆಯನ್ನು 1.30 ಲಕ್ಷಕ್ಕೆ ಹೆಚ್ಚಿಸಿದೆ. ಇತ್ತ ಉಕ್ರೇನ್‌ಗೆ ನ್ಯಾಟೋ ಪಡೆಗಳು ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ರವಾನಿಸುವುದರೊಂದಿಗೆ ಉಭಯ ದೇಶಗಳ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು, ಯುದ್ಧ ಭೀತಿ ಮತ್ತಷ್ಟು ದಟ್ಟವಾಗಿ ಹೊರಹೊಮ್ಮಿದೆ. ಈ ನಡುವೆ ತನ್ನ ಗಡಿಯಲ್ಲಿ ರಷ್ಯಾ ಭಾರೀ ಪ್ರಮಾಣದ ಸೇನೆ ನಿಯೋಜನೆಯನ್ನು ಆಕ್ಷೇಪಿಸಿರುವ ಉಕ್ರೇನ್, ಈ ಬಗ್ಗೆ ಮಾಹಿತಿಗಾಗಿ ರಷ್ಯಾದ ಜೊತೆ ಮುಂದಿನ 48 ಗಂಟೆಯೊಳಗೆ ಸಭೆಗೆ ಪ್ರಸ್ತಾವನೆ ಮುಂದಿಟ್ಟಿದೆ.
ಸೇನಾ ನಿಯೋಜನೆ ಹೆಚ್ಚಳ: ಉಕ್ರೇನ್ ಗಡಿಯಲ್ಲಿ ರಷ್ಯಾ ತನ್ನ ಯೋಧರ ನಿಯೋಜನೆಯನ್ನು 1.30 ಲಕ್ಷಕ್ಕೆ ಹೆಚ್ಚಿಸಿದೆ. ಅಲ್ಲದೆ ಮಂಗಳವಾರದಿಂದ ಉಕ್ರೇನ್ ಸೇನೆ ದೇಶದ ಪೂರ್ವ ಭಾಗದಲ್ಲಿ ತನ್ನ ಸಮರಾಭ್ಯಾಸ ನಡೆಸಲಿದ್ದು, ಅದರ ಮೇಲೆ ರಷ್ಯಾ ದಾಳಿ ನಡೆಸುವ ಸಾಧ್ಯತೆ ಇದೆ. ಇದು ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಮಾಡಿಕೊಂಡಿರುವ ಹಲವು ಯೋಜನೆಗಳ ಪೈಕಿ ಒಂದು ಅಮೆರಿಕದ ಗುಪ್ತಚರ ಮೂಲಗಳು ಎಚ್ಚರಿಸಿವೆ. ರಷ್ಯಾ ಈಗಾಗಲೇ ಉಕ್ರೇನ್‌ನ ಉತ್ತರ, ಪೂರ್ವ, ದಕ್ಷಿಣ ಗಡಿಯಲ್ಲಿ ತನ್ನ ಭಾರೀ ಸೇನೆ ನಿಯೋಜನೆ ಮಾಡಿರುವುದು ಇದೇ ಕಾರಣಕ್ಕಾಗಿ ಎಂದು ಹೇಳಿವೆ.
ಈ ನಡುವೆ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್‌ಸ್ಕೀ ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ 1 ಗಂಟೆಗಳ ಸುದೀರ್ಘ ಚರ್ಚೆ ನಡೆಸಿದ್ದು, ಉಕ್ರೇನ್ ಭದ್ರವಾದ ಕೈಗಳಲ್ಲಿ ಸುರಕ್ಷಿತವಾಗಿದ್ದು, ರಷ್ಯಾದ ಯಾವುದೇ ದಾಳಿಯನ್ನು ಎದುರಿಸಲು ಸಮರ್ಥವಾಗಿದೆ ಎಂದು ಭರವಸೆ ನೀಡಿದ್ದಾರೆ.
Russia Ukraine Crisis: ರಷ್ಯಾ ಸೇನೆ ಜಮಾವಣೆ ಉಪಗ್ರಹ ಚಿತ್ರ ಬಹಿರಂಗ!
ಈ ನಡುವೆ ಉಕ್ರೇನ್‌ಗೆ ನೆರವಾಗಲು ನ್ಯಾಟೋ ದೇಶಗಳು ರವಾನಿಸಿರುವ ಅತ್ಯಾಧುನಿಕ ಯುದ್ಧ ಶಸ್ತ್ರಾಸ್ತ್ರಗಳು ಸೋಮವಾರ ರಾಜಧಾನಿ ಕಿಯೇವ್‌ಗೆ ತಲುಪಿದ್ದು, ಇದು ದೇಶದ ಸಾಮರ್ಥ್ಯವನ್ನು ಹೆಚ್ಚಿಸಿದೆ. ಹೀಗೆ ಉಭಯ ದೇಶಗಳು ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ವಿಮಾನಯಾನ ಕಂಪನಿಗಳು ಉಕ್ರೇನ್‌ಗೆ ವಿಮಾನ ಸಂಚಾರ ರದ್ದುಪಡಿಸಿವೆ.
ಮಾತುಕತೆ: ಈ ನಡುವೆ ತನ್ನ ಗಡಿಯಲ್ಲಿ ರಷ್ಯಾ ಭಾರೀ ಪ್ರಮಾಣದ ಸೇನೆ ನಿಯೋಜಿಸಿರುವುದನ್ನು, ಆರ್ಗನೈಜೇಷನ್ ಫಾರ್ ಸೆಕ್ಯುರಿಟಿ ಆ್ಯಂಡ್ ಕೋ ಆಪರೇಷನ್ ಇನ್ ಯುರೋಪ್ ಸಂಘಟನೆ ಮೂಲಕ ಉಕ್ರೇನ್ ಪ್ರಶ್ನಿಸಿದೆ. ಅಲ್ಲದೆ ಈ ಬಗ್ಗೆ ಮುಂದಿನ 48 ಗಂಟೆಗಳಲ್ಲಿ ಸಭೆಗೂ ಪ್ರಸ್ತಾಪ ಮುಂದಿಟ್ಟಿದೆ.
ಯಾವುದೇ ಕ್ಷಣ ಉಕ್ರೇನ್ ಮೇಲೆ ರಷ್ಯಾ ದಾಳಿ ಸಂಭವ: ನೆರೆಯ ಉಕ್ರೇನ್ (Ukraine) ದೇಶದ ಮೇಲೆ ರಷ್ಯಾ (Russia) ಯಾವುದೇ ಸಮಯದಲ್ಲಿ ದಾಳಿ ನಡೆಸಬಹುದು. ಬಹುತೇಕ ಬುಧವಾರವೇ ಯುದ್ಧ ಆರಂಭವಾಗುವ ಸಾಧ್ಯತೆ ಇದೆ ಎಂದು ಅಮೆರಿಕ (America) ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ. ಉಕ್ರೇನ್ ಬಿಕ್ಕಟ್ಟು ಇತ್ಯರ್ಥ ಸಂಬಂಧ ಶನಿವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ರಷ್ಯಾ ಅಧ್ಯಕ್ಷ ಪುಟಿನ್ (Putin) 1 ಗಂಟೆಗಳ ಸುದೀರ್ಘ ಮಾತುಕತೆ ನಡೆಸಿದರೂ, ಶಾಂತಿಯ ಸುಳಿವು ಸಿಕ್ಕಿಲ್ಲ.
Russia Ukraine Crisis: ಉಕ್ರೇನ್‌ನಿಂದ ದೇಶಕ್ಕೆ ಮರಳಿ: ಅಮೆರಿಕನ್ನಿಗರಿಗೆ ಬೈಡೆನ್ ಕರೆ
ಒಂದು ವೇಳೆ ರಷ್ಯಾ ದಾಳಿ ನಡೆಸಿದ್ದೇ ಆದಲ್ಲಿ ಅದು ಭಾರೀ ವಿನಾಶಕ್ಕೆ ಕಾರಣವಾಗಲಿದೆ. ಭಾರೀ ಪ್ರಮಾಣದಲ್ಲಿ ನಾಗರಿಕರ ಸಾವಿಗೆ ಕಾರಣವಾಗಬಹುದು. ಪರಿಸ್ಥಿತಿಯ ಏನೇ ಇದ್ದರೂ ಉಕ್ರೇನ್ ಜೊತೆ ಅಮೆರಿಕ ರಾಜತಾಂತ್ರಿಕತೆ ಮುಂದುವರಿಸುತ್ತದೆ. ಅದೇ ರೀತಿ ಅಲ್ಲಿ ಯಾವುದೇ ರೀತಿಯ ಸಲ್ಲಿವೇಶವನ್ನು ಎದುರಿಸಲೂ ಸಿದ್ಧವಾಗಿದೆ ಎಂದು ಮಾತುಕತೆ ವೇಳೆ ಬೈಡೆನ್ ಸ್ಪಷ್ಪಡಿಸಿದ್ದಾರೆ ಎಂದು ಶ್ವೇತಭವನ ಹೇಳಿಕೆ ನೀಡಿದೆ.
ಈ ನಡುವೆ ಯುದ್ಧ ಭೀತಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಖಾಲಿ ಮಾಡಲು ಅಮೆರಿಕ ಆರಂಭಿಸಿದೆ. ರಷ್ಯಾ ಈಗಾಗಲೇ ಉಕ್ರೇನ್ ಗಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಯೋಧರ ನಿಯೋಜನೆ ಮಾಡಿದೆ. ಮತ್ತೊಂದೆಡೆ ನ್ಯಾಟೋ ಪಡೆಗಳು ಕೂಡಾ ಉಕ್ರೇನ್ ನೆರವಿಗೆ ಧಾವಿಸಲು ಸಜ್ಜಾಗಿ ನಿಂತಿವೆ.