ಎಲ್ಲಿವೆ ಇರಾನ್‌ ಮಿತ್ರ ರಾಷ್ಟ್ರಗಳು? ರಷ್ಯಾ, ಚೀನಾ ಯುದ್ಧದಿಂದ ಅಂತರ ಕಾಯ್ದುಕೊಂಡಿದ್ದೇಕೆ?

Published : Mar 05, 2026, 03:15 PM IST
Iran War Russi and China

ಸಾರಾಂಶ

ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ಸಂಕಷ್ಟದಲ್ಲಿರುವ ಇರಾನ್‌ಗೆ, ಅದರ ಮಿತ್ರರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ಸೇನಾ ಬೆಂಬಲ ನೀಡುತ್ತಿಲ್ಲ. ರಷ್ಯಾಕ್ಕೆ ಇರಾನ್ ಒಪ್ಪಂದದಲ್ಲಿ ಮಿಲಿಟರಿ ನೆರವಿನ ಕಡ್ಡಾಯ ಷರತ್ತುಗಳಿಲ್ಲ, ಚೀನಾ ತನ್ನ ಆರ್ಥಿಕ ಹಿತಾಸಕ್ತಿ ಮುಂದಿಟ್ಟುಕೊಂಡು ಯುದ್ಧದಿಂದ ದೂರ ಉಳಿದಿದೆ.

ನವದೆಹಲಿ (ಮಾ.5): ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ ಈಗಾಗಲೇ 1,000ಕ್ಕೂ ಹೆಚ್ಚು ಇರಾನಿಯನ್ನರು ಬಲಿಯಾಗಿದ್ದಾರೆ. ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಹತ್ಯೆಯನ್ನು ರಷ್ಯಾ ಮತ್ತು ಚೀನಾ ತೀವ್ರವಾಗಿ ಖಂಡಿಸಿವೆಯಾದರೂ, ಇರಾನ್‌ಗೆ ಸೇನಾ ಬೆಂಬಲ ನೀಡುವ ವಿಷಯದಲ್ಲಿ ಮಾತ್ರ ಹಿಂದೆ ಸರಿಯುತ್ತಿವೆ. ಒಂದೆಡೆ ಕದನ ಕಣದಲ್ಲಿ ಇರಾನ್‌ ಏಕಾಂಗಿಯಾಗಿ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಮುಗಿಬಿದ್ದಿದ್ದರೂ, ಇರಾನ್‌ನ ಮಿತ್ರರಾಷ್ಟ್ರಗಳಾದ ಬಲಿಷ್ಠ ಚೀನಾ ಹಾಗೂ ರಷ್ಯಾ ಅವರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಇರಾನ್‌ ಮೇಲಿನ ದಾಳಿಗೆ, ಖಮೇನಿ ಹತ್ಯೆಗೆ ಇವರಿಂದ ಖಂಡನೆ ಬಂದಿದ್ದರೂ, ಇರಾನ್‌ಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ. ಅದಕ್ಕೆ ಕಾರಣವೇನು

ರಷ್ಯಾ ಮತ್ತು ಇರಾನ್: ಪಾಲುದಾರರು, ಆದರೆ ಮಿಲಿಟರಿ ಮಿತ್ರರಲ್ಲ!

ಜನವರಿ 2025 ರಲ್ಲಿ ರಷ್ಯಾ ಮತ್ತು ಇರಾನ್ ನಡುವೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದದ ಅಡಿಯಲ್ಲಿ ಗುಪ್ತಚರ ಮಾಹಿತಿ ಹಂಚಿಕೆ ಮತ್ತು ರಕ್ಷಣಾ ಸಮನ್ವಯದ ಬಗ್ಗೆ ಮಾತುಕತೆಯಾಗಿತ್ತು. ಆದರೆ, ಈ ಒಪ್ಪಂದದಲ್ಲಿ ಒಂದು ದೊಡ್ಡ ಮಿತಿಯನ್ನು ವಿಧಿಸಲಾಗಿತ್ತು

ರಷ್ಯಾ ತನ್ನ ಪಾಲಿನ 'ನೈಜ ಮಿಲಿಟರಿ ಮಿತ್ರ' ಎಂದು ಉತ್ತರ ಕೊರಿಯಾವನ್ನು ಪರಿಗಣಿಸುತ್ತದೆ. ಉತ್ತರ ಕೊರಿಯಾ ಜೊತೆಗಿನ ಒಪ್ಪಂದದ ಪ್ರಕಾರ, ಆ ದೇಶದ ಮೇಲೆ ದಾಳಿಯಾದರೆ ರಷ್ಯಾ ಯುದ್ಧಕ್ಕೆ ಇಳಿಯಲೇಬೇಕು. ಆದರೆ, ಇರಾನ್ ಜೊತೆಗಿನ ಒಪ್ಪಂದದಲ್ಲಿ ಇಂತಹ ಯಾವುದೇ ಕಡ್ಡಾಯ ಷರತ್ತುಗಳು ಇದ್ದಿರಲಿಲ್ಲ. ಉಕ್ರೇನ್ ಯುದ್ಧದಲ್ಲಿ ಅಮೆರಿಕದ ಮಧ್ಯಸ್ಥಿಕೆಯನ್ನು ರಷ್ಯಾ ನಿರೀಕ್ಷಿಸುತ್ತಿದೆ. ಹೀಗಾಗಿ, ಇರಾನ್ ಪರವಾಗಿ ನೇರ ಯುದ್ಧಕ್ಕಿಳಿದು ಅಮೆರಿಕವನ್ನು ಎದುರು ಹಾಕಿಕೊಳ್ಳಲು ಪುಟಿನ್ ಸಿದ್ಧರಿಲ್ಲ.

ರಷ್ಯಾ ಕೇವಲ ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ಬೆಂಬಲ ನೀಡುತ್ತಿರುವುದು ಇರಾನ್‌ನ ಕೆಲವು ನಾಯಕರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ. ಇದು ಮುಂಬರುವ ದಿನಗಳಲ್ಲಿ ರಷ್ಯಾ ಹಾಗೂ ಇರಾನ್‌ ನಡುವಿನ ವೈಮನಸ್ಯಕ್ಕೂ ಕಾರಣವಾಗಬಹುದು ಎನ್ನುವ ಸೂಚನೆಗಳು ಸಿಕ್ಕಿವೆ.

ಚೀನಾ ಮತ್ತು ಇರಾನ್: ಆರ್ಥಿಕ ಹಿತಾಸಕ್ತಿ ಮುಖ್ಯ

2021 ರಲ್ಲಿ ಚೀನಾ ಮತ್ತು ಇರಾನ್ 25 ವರ್ಷಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇರಾನ್‌ನ ಶೇ. 87 ಕ್ಕೂ ಹೆಚ್ಚು ಕಚ್ಚಾ ತೈಲ ರಫ್ತು ಚೀನಾಕ್ಕೇ ಹೋಗುತ್ತಿದೆ. ಆದರೂ ಚೀನಾದ ಸೇನೆ ಕೂಡ ಈ ಹಂತದಲ್ಲಿ ಇರಾನ್‌ನ ಸಹಾಯಕ್ಕೆ ಬರುತ್ತಿಲ್ಲ. ಅದಕ್ಕೆ ಕಾರಣವೂ ಇದೆ.

ಬೇರೆ ದೇಶಗಳ ಆಂತರಿಕ ವಿಷಯಗಳಲ್ಲಿ ಅಥವಾ ಯುದ್ಧಗಳಲ್ಲಿ ನೇರವಾಗಿ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದು ಚೀನಾದ ವಿದೇಶಾಂಗ ನೀತಿಗೆ ವಿರುದ್ಧವಾಗಿದೆ. ಚೀನಾ ನೇರವಾಗಿ ಈವರೆಗೂ ಅಂಥ ಯಾವುದೇ ಕಾರ್ಯ ಮಾಡಿಲ್ಲ. ಹಾಗಂತ ಹಿಂಬಾಗಿಲ ಮೂಲಕ ಶಸ್ತ್ರಾಸ್ತ್ರ ಸಹಾಯವನ್ನು ಚೀನಾ ಮಾಡುತ್ತದೆ ಅನ್ನೋದಕ್ಕೆ ಆಪರೇಷನ್‌ ಸಿಂದೂರ್‌ ಸಾಕ್ಷಿಯಾಗಿತ್ತು.

ಇನ್ನು ಇರಾನ್‌ಗೆ ಚೀನಾ ದೊಡ್ಡ ಆರ್ಥಿಕ ಶಕ್ತಿಯಾಗಿರಬಹುದು, ಆದರೆ ಚೀನಾದ ಜಾಗತಿಕ ವ್ಯಾಪಾರದ ದೃಷ್ಟಿಯಿಂದ ಇರಾನ್ ಅತ್ಯಂತ ಸಣ್ಣ ಪಾಲುದಾರ ರಾಷ್ಟ್ರ ಎನಿಸಿದೆ. ಚೀನಾ ಸದ್ಯ ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳ ಜೊತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದೆಯೇ ಹೊರತು, ಯುದ್ಧದಲ್ಲಿ ಭಾಗಿಯಾಗುವ ಲಕ್ಷಣ ತೋರುತ್ತಿಲ್ಲ.

ವೆನೆಜುವೆಲಾ ಘಟನೆಯಿಂದ ಕಲಿತ ಪಾಠ

ಸಿಂಗಾಪುರದ ತಜ್ಞರ ಪ್ರಕಾರ, ಜನವರಿ 2026 ರಲ್ಲಿ ಅಮೆರಿಕವು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ ನಂತರ, ಚೀನಾ ಮತ್ತು ರಷ್ಯಾ ತಮ್ಮ ವಿದೇಶಾಂಗ ನೀತಿಯನ್ನು ಮರುಪರಿಶೀಲಿಸುತ್ತಿವೆ. ನೇರ ಸಂಘರ್ಷಕ್ಕಿಂತ ಹೆಚ್ಚಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಚೀನಾ ಆದ್ಯತೆ ನೀಡುತ್ತಿದೆ.

ಒಟ್ಟಾರೆಯಾಗಿ, ಇರಾನ್‌ಗೆ ಮೌಖಿಕ ಬೆಂಬಲ ನೀಡುತ್ತಿರುವ ರಷ್ಯಾ ಮತ್ತು ಚೀನಾ, ತನ್ನ ಸ್ವಂತ ಭದ್ರತೆ ಮತ್ತು ಆರ್ಥಿಕತೆಯನ್ನು ಪಣಕ್ಕಿಟ್ಟು ಯುದ್ಧರಂಗಕ್ಕೆ ಜಿಗಿಯಲು ತಯಾರಿಲ್ಲ ಎನ್ನುವುದು ಸ್ಪಷ್ಟವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕ-ಇಸ್ರೇಲ್ ಸೇನಾನೆಲೆ ಪುಡಿಗಟ್ಟಿದ ಇರಾನ್ ನಿರ್ಮಿತ ಶಾಹಿದ್ ಡ್ರೋನ್; ಶತ್ರುಗಳು ಕಕ್ಕಾಬಿಕ್ಕಿ
ಹಿರೋಷಿಮಾ ಬಾಂಬ್‌ಗಿಂತ 20 ಪಟ್ಟು ಬಲಶಾಲಿ Doomsday ಕ್ಷಿಪಣಿ ಪರೀಕ್ಷೆ ಮಾಡಿದ ಯುಎಸ್‌ ಏರ್‌ಫೋರ್ಸ್‌!