
ಟೆಹರಾನ್: ಆರ್ಥಿಕ ನಿರ್ಬಂಧಗಳಿಂದ ಹದಗೆಟ್ಟ ಅರ್ಥವ್ಯವಸ್ಥೆ, ಗಗನಕ್ಕೇರುತ್ತಿರುವ ಅಗತ್ಯವಸ್ತುಗಳ ಬೆಲೆ, ದುರಾಡಳಿತ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಇರಾನ್‌ನಲ್ಲಿ ನಡೆಯುತ್ತಿರುವ ನಾಗರಿಕರ ಪ್ರತಿಭಟನೆ 12ನೇ ದಿನಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ವ್ಯಾಪಿಸಿದೆ.
ದೇಶಭ್ರಷ್ಟರಾಗಿರುವ ಯುವರಾಜ ರೆಜಾ ಪಹ್ಲವಿ ಅವರು ಖಮೇನಿ ವಿರುದ್ಧ ಸಾಮೂಹಿಕ ಪ್ರತಿಭಟನೆಗೆ ಕರೆಕೊಟ್ಟ ಬೆನ್ನಲ್ಲೇ ಗುರುವಾರ ರಾತ್ರಿಯಿಂದ ಸಾಮೂಹಿಕವಾಗಿ ಬೀದಿಗಿಳಿದ ಜನ ಹಲವು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ.
ರಾತ್ರಿಯಿಡೀ ಜನ ಬೀದಿಗಿಳಿದು ಸರ್ವಾಧಿಕಾರಿ ಖಮೇನಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವಾಧಿಕಾರಿ ಸಾಯಲಿ, ‘ಇಸ್ಲಾಮಿಕ್ ರಿಪಬ್ಲಿಕ್ ಸಾಯಲಿ’, ‘ಇದು ನಮ್ಮ ಕೊನೆಯ ಯುದ್ಧ’, ‘ಪಹಲವಿ ಅವರು ವಾಪಸ್ ಬರಲಿದ್ದಾರೆ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.
ಪ್ರತಿಭಟನಾಕಾರರ ಆಕ್ರೋಶಕ್ಕೆ ರಾಜಧಾನಿ ಟೆಹರಾನ್‌ನಲ್ಲೇ ಕೆಲವು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರವಾಹದೋಪಾದಿಯಲ್ಲಿ ಟೆಹರಾನ್‌ನಲ್ಲಿ ಬೀದಿಗಿಳಿಯುತ್ತಿರುವ ಜನ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. 46 ನಗರಗಳು ಹಾಗೂ 21 ಪ್ರಾಂತ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನೆ ವ್ಯಾಪಕವಾಗುತ್ತಿದ್ದಂತೆ ದೇಶಾದ್ಯಂತ ಇಂಟರ್ನೆಟ್ ಸಂಪರ್ಕವನ್ನು ಸರ್ಕಾರ ಕಡಿತಗೊಳಿಸಿದ್ದು, ಉಪಗ್ರಹ ಸಿಗ್ನಲ್‌ಗಳನ್ನೂ ಜಾಮ್ ಮಾಡಲು ಪ್ರಯತ್ನಿಸಿದೆ.
ಈಗಾಗಲೇ ಪ್ರತಿಭಟನಾಕಾರರ ಮೇಲಿನ ಸರ್ಕಾರದ ಕ್ರಮದಿಂದಾಗಿ 42ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 2,200ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಟೆಹ್ರಾನ್: ‘ಜನರ ಪ್ರತಿಭಟನೆಗೆ ಇಸ್ಲಾಮಿಕ್ ರಿಪಬ್ಲಿಕ್ ತಲೆಬಾಗುವುದಿಲ್ಲ, ದೇಶದಲ್ಲಿ ವಿದೇಶಿ ಶಕ್ತಿಗಳನ್ನು (ಟ್ರಂಪ್) ಸಹಿಸುವುದಿಲ್ಲ’ ಎಂದು ಇರಾನ್‌ನ ಅತ್ಯುನ್ನತ ನಾಯಕ ಆಯತೋಲ್ಲಾ ಅಲಿ ಖಮೇನಿ ಗುಡುಗಿದ್ದಾರೆ. ಈ ಮೂಲಕ ಹಿಂಸೆ ಬೆಂಬಲಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಚಾಟಿ ಬೀಸಿದ್ದಾರೆ.
ಸಾರ್ವಜನಿಕರು ಆಡಳಿತ ವಿರುದ್ಧ ಬೀದಿಗಿಳಿದು ಪ್ರತಿಭಟನೆ ತೀವ್ರಗೊಳಿಸಿದ ಬೆನ್ನಲ್ಲೇ ಸರ್ಕಾರಿ ವಾಹಿನಿ ಮೂಲಕ ಸಂದೇಶ ರವಾನಿಸಿದ ಖಮೇನಿ, ‘ ಇಸ್ಲಾಮಿಕ್ ರಿಪಬ್ಲಿಕ್ ಯಾವುದೇ ಕಾರಣಕ್ಕೂ ಹೆದರಿ ಓಡಿ ಹೋಗಲ್ಲ, ನಮ್ಮ ನಾಗರಿಕರು ವಿದೇಶಿಗರಿಗೋಸ್ಕರ ಕೆಲಸ ಮಾಡುವುದನ್ನು ಸಹಿಸಲ್ಲ. ಇನ್ನೊಂದು ದೇಶದ ಅಧ್ಯಕ್ಷನನ್ನು (ಟ್ರಂಪ್) ಖುಷಿಪಡಿಸಲು ಜನ ತಮ್ಮ ನೆರೆಹೊರೆ ಹಾಳು ಮಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಆರೋಪಿಸಿದ್ದಾರೆ.ಟ್ರಂಪ್ ಅವರ ಕೈಗೆ 1 ಸಾವಿರ ಇರಾನಿಯರ ಹತ್ಯೆಯ ರಕ್ತ ಅಂಟಿದೆ. ಸಾವಿರಾರು ಮಂದಿ ತ್ಯಾಗದಿಂದ ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪನೆಯಾಗಿದೆ. ನಾವು ಯಾವುದೇ ಕಾರಣಕ್ಕೂ ವಿಧ್ವಂಸಕರ ಮುಂದೆ ತಲೆಬಾಗಲ್ಲ ಎಂದಿದ್ದಾರೆ.
ಟೆಹ್ರಾನ್: ಇರಾನಿ ಮಹಿಳೆಯೊಬ್ಬರು ‘ನನಗೆ ಭಯವಿಲ್ಲ. ನಾನು ಸತ್ತು 47 ವರ್ಷಗಳಾಗಿವೆ’ ಎಂದು ಹೇಳುತ್ತ ಪ್ರತಿಭಟನೆ ನಡೆಸಿದ್ದಾರೆ. ಆಗ ಆಕೆಯ ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದಂತೆ ಕಂಡುಬರುತ್ತದೆ. ಆದರೆ ಮಹಿಳೆಯ ಬಾಯಿಯಿಂದ ಒಸರುತ್ತಿದ್ದ ಕೆಂಪು ದ್ರವವು ನಿಜವಾಗಿಯೂ ರಕ್ತವೋ ಅಥವಾ ಯಾವುದೋ ಬಣ್ಣವನ್ನು ಬಳಸುತ್ತಿದ್ದಾಳೋ ಎಂಬುದು ಸ್ಪಷ್ಟವಾಗಿಲ್ಲ.
47 ವರ್ಷ ಹಿಂದೆ 1979 ರ ಇಸ್ಲಾಮಿಕ್ ಕ್ರಾಂತಿಯೊಂದಿಗೆ ಪ್ರಾರಂಭವಾಗಿತ್ತು. ಇದು ಪಾಶ್ಚಿಮಾತ್ಯ ಪರ ಶಾ ಮೊಹಮ್ಮದ್ ರೆಜಾ ಪಹ್ಲವಿಯನ್ನು ಪದಚ್ಯುತಗೊಳಿಸಿ ಅಯತೊಲ್ಲಾ ಖಮೇನಿ ನೇತೃತ್ವದ ಶಿಯಾ ಇಸ್ಲಾಮಿಕ್ ಪ್ರಭುತ್ವ ಜಾರಿಗೆ ಬಂದಿತ್ತು.
ಖಮೇನಿ ಫೋಟೋಗೆ ಸ್ತ್ರೀಯರಿಂದ ಸಿಗರೆಟ್!
ಖಮೇನಿ ಫೋಟೋಗೆ ಇರಾನಿ ಮಹಿಳೆಯರು ಸಿಗರೇಟಿನ ಕಿಡಿ ಹೊತ್ತಿಸಿ ಬೆಂಕಿ ಹಚ್ಚುತ್ತಿದ್ದಾರೆ. ಏಕೆಂದರೆ ಮಹಿಳೆಯರಿಗೆ ಖಮೇನಿ ಧೂಮಪಾನ ನಿಷೇಧಿಸಿದ್ದರು. ಖಮೇನಿ ಫೋಟೋ ದಹನಕ್ಕೂ ಇರಾನ್‌ನಲ್ಲಿ ನಿಷೇಧವಿದೆ. ಇದರ ಸಿಟ್ಟನ್ನು ಈಗ ಮಹಿಳೆಯರು ತೀರಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ