Pope Francis: ಕೋಣೆಗೆ ಬೀಗ, 6 ದಿನದಲ್ಲಿ ಅಂತ್ಯಕ್ರಿಯೆ, ಹೊಸ ಪೋಪ್‌ ಆಯ್ಕೆ ಹೇಗೆ? ಏನಿದು ಕಪ್ಪು-ಬಿಳುಪು ಹೊಗೆ?

Published : Apr 22, 2025, 09:54 AM ISTUpdated : Apr 22, 2025, 11:14 AM IST
Pope Francis: ಕೋಣೆಗೆ ಬೀಗ, 6 ದಿನದಲ್ಲಿ ಅಂತ್ಯಕ್ರಿಯೆ, ಹೊಸ ಪೋಪ್‌ ಆಯ್ಕೆ ಹೇಗೆ? ಏನಿದು ಕಪ್ಪು-ಬಿಳುಪು ಹೊಗೆ?

ಸಾರಾಂಶ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ೮೮ ವರ್ಷದ ಪೋಪ್ ಫ್ರಾನ್ಸಿಸ್, ಈಸ್ಟರ್ ನಂತರ ನಿಧನರಾದರು. ವ್ಯಾಟಿಕನ್ ಹೊರಗೆ ಅಂತ್ಯಕ್ರಿಯೆ ನಡೆಯಲಿದ್ದು, ೧೫-೨೦ ದಿನಗಳಲ್ಲಿ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಭಾರತದಲ್ಲಿ ೩ ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಈಸ್ಟರ್‌ ದರ್ಶನದ ಮರುದಿನ ನಿಧನ 12 ವರ್ಷದಿಂದ ಕ್ರೈಸ್ತರ ಪರಮೋಚ್ಚ ಗುರುವಾಗಿದ್ದ ಪೋಪ್‌ ಫ್ರಾನ್ಸಿಸ್‌ (88), ಸುದೀರ್ಘ ಅನಾರೋಗ್ಯಪೀಡಿತರಾಗಿದ್ದರು. ಈಸ್ಟರ್‌ ಸಂಡೇ ನಿಮಿತ್ತ ಸಾರ್ವಜನಿಕ ದರ್ಶನ ನೀಡಿ, ಸಂದೇಶ ಕೊಟ್ಟಿದ್ದರು. ಮರುದಿನವಾದ ಸೋಮವಾರ ಬೆಳಗ್ಗೆ 7.35ಕ್ಕೆ ಇಹಲೋಕ ತ್ಯಜಿಸಿದ್ದಾರೆ.

ಮೂರು ಬಾರಿ ಕರೆದರೂ ಏಳದಿದ್ದರೆ ಸಾವು ಪ್ರಕಟ!
ಪೋಪ್‌ ಮರಣವನ್ನು ಅಧಿಕೃತವಾಗಿ ಘೋಷಣೆ ಮಾಡಲೂ ಪ್ರಕ್ರಿಯೆ ಇದೆ. ವ್ಯಾಟಿಕನ್‌ ಆಡಳಿತಾಧಿಕಾರಿ ಅವರು ಸನಿಹಕ್ಕೆ ಹೋಗಿ ಮೂರು ಬಾರಿ ಪೋಪ್‌ ಹೆಸರನ್ನು ಕೂಗುತ್ತಾರೆ. ಪ್ರತಿಕ್ರಿಯೆ ಬಾರದಿದ್ದರೆ ಮರಣವಾರ್ತೆಯನ್ನು ಪ್ರಕಟಿಸುತ್ತಾರೆ. ಪೋಪ್‌ ಅವರ ಹಣೆಗೆ ಬೆಳ್ಳಿಯ ಸುತ್ತಿಗೆಯಿಂದ ಮೂರು ಬಾರಿ ಮೆದುವಾಗಿ ಕುಟ್ಟಿ ಸಾವು ಘೋಷಿಸುವ ಪರಿಪಾಠ 1963ರವರೆಗೂ ಇತ್ತು.

ಪೋಪ್‌ ಕೋಣೆಗೆ ಬೀಗ, 6 ದಿನದಲ್ಲಿ ಅಂತ್ಯಕ್ರಿಯೆ
ಮರಣವಾರ್ತೆ ಪ್ರಕಟ ಬಳಿಕ ಆಡಳಿತಾಧಿಕಾರಿ ಪೋಪ್‌ ವಾಸ್ತವ್ಯ ಸ್ಥಳಕ್ಕೆ ಬೀಗ ಜಡಿಯುತ್ತಾರೆ. ಅವರ ಉಂಗುರ ಹಾಗೂ ಸೀಲ್‌ ನಾಶಪಡಿಸುವ ಮೂಲಕ ಪೋಪ್‌ ಆಳ್ವಿಕೆ ಮುಗಿದಿದೆ ಎಂದು ಸೂಚಿಸುತ್ತಾರೆ. ಪೋಪ್‌ ನಿಧನದ 4-6 ದಿನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವ್ಯಾಟಿಕನ್‌ ಹೊರಗೆ ಪೋಪ್‌ ಅಂತ್ಯಕ್ರಿಯೆ
ನಗರವೇ ಒಂದು ದೇಶವಾಗಿರುವ, ಇಟಲಿಯಿಂದ ಸುತ್ತುವರೆದಿರುವ ವ್ಯಾಟಿಕನ್‌ನಲ್ಲಿ ಸಾಮಾನ್ಯವಾಗಿ ಪೋಪ್‌ಗಳ ಅಂತ್ಯಕ್ರಿಯೆ ನೆರವೇರುತ್ತದೆ. ಆದರೆ ಫ್ರಾನ್ಸಿಸ್‌ ಬೇರೆ ಕಡೆ (ರೋಮ್‌ನಲ್ಲಿ) ಅಂತ್ಯಕ್ರಿಯೆ ನಡೆಸುವಂತೆ ಕೋರಿದ್ದಾರೆ. 100 ವರ್ಷಗಳಲ್ಲಿ ಇದೇ ಮೊದಲ ಬಾರಿ ಪೋಪ್‌ ಒಬ್ಬರ ಅಂತ್ಯಕ್ರಿಯೆ ವ್ಯಾಟಿಕನ್‌ನಲ್ಲಿ ನಡೆಯುತ್ತಿಲ್ಲ!

ಹೊಸ ಪೋಪ್‌ ಆಯ್ಕೆ ಹೇಗೆ?
ಪೋಪ್‌ ನಿಧನದ 15-20 ದಿನ ಬಳಿಕ ನೂತನ ಪೋಪ್‌ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವ್ಯಾಟಿಕನ್‌ಗೆ ಆಗಮಿಸುತ್ತಾರೆ. ರಹಸ್ಯ ಮತದಾನ ಉದ್ದೇಶ ಸಲುವಾಗಿ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದಿಂದ ಅವರು ಸಂಪರ್ಕ ಕಳೆದುಕೊಳ್ಳುತ್ತಾರೆ. ದೂರವಾಣಿ ಕರೆ ಸೌಲಭ್ಯೂ ಇರುವುದಿಲ್ಲ. ಹಲವು ಸುತ್ತಿನ ಮತದಾನ ಪ್ರಕ್ರಿಯೆ ನಡೆಯುತ್ತದೆ.

ಕಪ್ಪು ಹೊಗೆ, ಬಿಳಿ ಹೊಗೆ:ನೂತನ ಪೋಪ್‌ ಆಯ್ಕೆ
ಕಾರ್ಡಿನಲ್‌ಗಳು ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುತ್ತಾರೆ. 3ನೇ 2ರಷ್ಟು ಬಹುಮತ ಪಡೆದವರು ಪೋಪ್‌ ಆಗುತ್ತಾರೆ. ಬಹುಮತ ಬಾರದಿದ್ದರೆ ಚಲಾವಣೆ ಮಾಡಿದ ಮತಗಳನ್ನು ಸುಡಲಾಗುತ್ತದೆ. ಆಗ ವ್ಯಾಟಿಕನ್‌ನಲ್ಲಿ ಕಪ್ಪು ಹೊಗೆ ಕಾಣಿಸುತ್ತದೆ. ಅದರರ್ಥ ಆಯ್ಕೆ ಪೂರ್ಣವಾಗಿಲ್ಲ ಎಂದು. ಹಲವು ಸುತ್ತಿನ ಮತದಾನ ಬಳಿಕ 3ನೇ 2ರಷ್ಟು ಬಹುಮತದೊಂದಿಗೆ ಒಬ್ಬರು ಆಯ್ಕೆಯಾದ ಬಳಿಕ ವ್ಯಾಟಿಕನ್‌ನಲ್ಲಿ ಬಿಳಿ ಹೊಗೆ ಕಾಣಿಸಿಕೊಳ್ಳುತ್ತದೆ. ಅದರರ್ಥ- ಹೊಸ ಪೋಪ್‌ ಆಯ್ಕೆಯಾಗಿದ್ದಾರೆ!

ಕರುಣೆ, ವಿನಮ್ರತೆ ಸಂಕೇತಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯಾವಾಗಲೂ ಕರುಣೆ, ವಿನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ಸಂಕೇತವಾಗಿ ನೆನಪಿಸಿಕೊಳ್ಳುತ್ತಾರೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಸದಾ ಸ್ಮರಣೀಯ. ದೇವರ ಸಾನ್ನಿಧ್ಯದಲ್ಲಿ ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 

ಭಾರತದಲ್ಲಿ 3 ದಿನ ಶೋಕಾಚರಣೆ: ಪೋಪ್ ಫ್ರಾನ್ಸಿಸ್‌ ಅವರ ನಿಧನಕ್ಕೆ ಸಂತಾಪ ಸೂಚಕವಾಗಿ ಭಾರತ ಸರ್ಕಾರ ದೇಶಾದ್ಯಂತ 3 ದಿನಗಳ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ. 

ಕಾಡಿದ ಅನಾರೋಗ್ಯ
ಕೆಲ ಸಮಯದಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಫೆ.14ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂಮೋನಿಯಾದಿಂದಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಬಿಗಡಾಯಿಸಿತ್ತು. ಐದು ವಾರಗಳ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಿ ಮಾ.23ರಂದು ಆಸ್ಪತ್ರೆಯ ಬಾಲ್ಕನಿಯಲ್ಲಿ ಮೊದಲ ಬಾರಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಗೆಲುವಿನ ಚಿಹ್ನೆ ತೋರಿಸಿದ್ದರು. 38 ದಿನದ ಆಸ್ಪತ್ರೆ ವಾಸದ ನಂತರ ಅವರು ವ್ಯಾಟಿಕನ್‌ಗೆ ಮರಳಿ ವಿಶ್ರಾಂತಿಯಲ್ಲಿದ್ದರು. ಈ ನಡುವೆ, ಏ.19ರಂದು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್‌ ಅವರನ್ನು ಭೇಟಿಯಾಗಿದ್ದರು. ಮರುದಿನ ಅಂದರೆ ಈಸ್ಟರ್‌ ಸಂಡೆ ಹಿನ್ನೆಲೆಯಲ್ಲಿ ವ್ಯಾಟಿಕನ್‌ನ ಸೈಂಟ್‌ ಪೀಟರ್ಸ್‌ ಬೆಸಿಲಿಕಾದ ಬಾಲ್ಕನಿಯಲ್ಲಿ ಸಾಜನಿಕರಿಗೆ ದರ್ಶನ ನೀಡಿದ್ದರು. ಆದರೆ ಅದಾದ ಒಂದೇ ದಿನದಲ್ಲಿ ಅವೆರು ಅಸುನೀಗಿದ್ದು ಆಘಾತಕಾರಿ ವಿಚಾರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ