ಡಿ.11-12ಕ್ಕೆ ಅಮೆರಿಕ ಪ್ರಜೆಗಳಿಗೆ ಕೊರೋನಾ ಗೆಲ್ಲಲು ಫೈಝರ್‌ ಅಸ್ತ್ರ!

By Suvarna NewsFirst Published Nov 23, 2020, 3:22 PM IST
Highlights

ಕೊರೋನಾ ಲಸಿಕೆ ಪರೀಕ್ಷೆಯಲ್ಲಿ ಶೇ.95ರಷ್ಟುಪರಿಣಾಮಕಾರಿಯಾಗಿರುವ ವಿಶ್ವದ ಮೊದಲ ಲಸಿಕೆ ಖ್ಯಾತಿಯ ‘ಫೈಝರ್‌’| ಡಿಸೆಂಬರ್‌ 11-12ರಂದು ಲಭ್ಯವಾಗುವ ಸಾಧ್ಯತೆ

ವಾಷಿಂಗ್ಟನ್(ನ.23): ಕೊರೋನಾ ಲಸಿಕೆ ಪರೀಕ್ಷೆಯಲ್ಲಿ ಶೇ.95ರಷ್ಟು ಪರಿಣಾಮಕಾರಿಯಾಗಿರುವ ವಿಶ್ವದ ಮೊದಲ ಲಸಿಕೆ ಖ್ಯಾತಿಯ ‘ಫೈಝರ್‌’ ಅಮೆರಿಕದ ಪ್ರಜೆಗಳಿಗೆ ಡಿಸೆಂಬರ್‌ 11-12ರಂದು ಲಭ್ಯವಾಗುವ ಸಾಧ್ಯತೆಯಿದೆ.

ತುರ್ತು ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಫೈಝರ್‌ ಕೋರಿಕೆ ಕುರಿತಾಗಿ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಲಹಾ ಸಮಿತಿ ಡಿ.10ಕ್ಕೆ ಸಭೆ ನಡೆಸಲಿದೆ.

ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಸಲಹಾ ಸಮಿತಿ ತುರ್ತು ಬಳಕೆಗೆ ಅನುಮೋದನೆ ನೀಡಿದ 24 ಗಂಟೆಗಳ ಒಳಗೆ ಫೈಝರ್‌ ಲಸಿಕೆ ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಯೋಜನೆಯಾಗಿದ್ದು, ಈ ಪ್ರಕಾರ ಡಿಸೆಂಬರ್‌ 11 ಅಥವಾ 12ರಂದು ಲಸಿಕೆ ಲಭ್ಯವಾಗುವಂತೆ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ಕೊರೋನಾ ಲಸಿಕೆ ಕಾರ್ಯಕ್ರಮದ ಮುಖ್ಯಸ್ಥರಾದ ಡಾ.ಮಾನ್ಸೆಫ್‌ ಸ್ಲಾವಿ ತಿಳಿಸಿದ್ದಾರೆ.

ಆಕ್ಸ್‌ಫರ್ಡ್‌ನ ಕೊರೋನಾ ಲಸಿಕೆ ವೃದ್ಧರಿಗೆ ರಾಮಬಾಣ!

ಕೊರೋನಾ ವೈರಸ್‌ ಬಾಧಿಸದಂತೆ ತಡೆಯುವ ಲಸಿಕೆಗಳು ಒಂದಾದ ಮೇಲೊಂದು ಯಶಸ್ವಿಯಾಗುತ್ತಿರುವುದರ ಬೆನ್ನಲ್ಲೇ ಬಹುನಿರೀಕ್ಷಿತ ಆಕ್ಸ್‌ಫರ್ಡ್‌-ಆಸ್ಟ್ರಾಜೆನೆಕಾ ಲಸಿಕೆ ವೃದ್ಧರ ಮೇಲೆ ಅತ್ಯುತ್ತಮ ರೀತಿಯ ಪರಿಣಾಮ ಉಂಟುಮಾಡುತ್ತದೆಯೆಂಬ ಸಂಗತಿ ಬೆಳಕಿಗೆ ಬಂದಿದೆ.

ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ರೂಪಿಸಿರುವ, ಆಸ್ಟ್ರಾಜೆನೆಕಾ ಎಂಬ ಕಂಪನಿ ತಯಾರಿಸಿರುವ ಛಡಾಕ್ಸ್‌1ಎನ್‌ಕೋವ್‌-19 ಲಸಿಕೆ (ಕೋವಿಶೀಲ್ಡ್‌)ಯ ಎರಡನೇ ಹಂತದ ಪ್ರಯೋಗದ ಕುರಿತು ‘ಲ್ಯಾನ್ಸೆಟ್‌’ ಮೆಡಿಕಲ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ. ಅದರಲ್ಲಿ, 56-59 ವರ್ಷದ ವಯೋಮಿತಿಯವರಲ್ಲಿ ಹಾಗೂ 70 ವರ್ಷ ಮೇಲ್ಪಟ್ಟವರಲ್ಲಿ ಕೋವಿಶೀಲ್ಡ್‌ ಅತ್ಯುತ್ತಮ ರೀತಿಯಲ್ಲಿ (ಶೇ.99ರಷ್ಟು) ಕೊರೋನಾ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಹುಟ್ಟುಹಾಕಿದೆ ಎಂದು ವೈದ್ಯಕೀಯ ನಿಯತಕಾಲಿಕೆ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ.

ವಿಶೇಷವೆಂದರೆ, ಈ ಲಸಿಕೆಯಿಂದ ಯುವಕರಲ್ಲಿ ಸೃಷ್ಟಿಯಾಗಿರುವ ರೋಗನಿರೋಧಕ ಶಕ್ತಿಗಿಂತ ವೃದ್ಧರಲ್ಲಿ ಉತ್ತಮ ರೀತಿಯಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿದೆ. ಕೊರೋನಾದಿಂದ ವೃದ್ಧರಿಗೇ ಹೆಚ್ಚು ಅಪಾಯವಿರುವುದರಿಂದ ಕೋವಿಶೀಲ್ಡ್‌ ಮೂಲಕ ವೃದ್ಧರಿಗೆ ವಿಶ್ವಾಸಾರ್ಹ ಲಸಿಕೆಯೊಂದು ದೊರೆತಂತಾಗಲಿದೆ ಎಂದು ಆಕ್ಸ್‌ಫರ್ಡ್‌ ವಿವಿ ಸಂಶೋಧಕರು ಹೇಳಿಕೊಂಡಿದ್ದಾರೆ. ಸುಮಾರು 10,000 ಸ್ವಯಂಸೇವಕರ ಮೇಲೆ ಈಗಾಗಲೇ ಈ ಲಸಿಕೆಯ 3ನೇ ಹಂತದ ಪ್ರಯೋಗವೂ ನಡೆಯುತ್ತಿದೆ. ಅದರ ಫಲಿತಾಂಶ ಕೆಲ ವಾರಗಳಲ್ಲಿ ಹೊರಬರಲಿದೆ.

click me!