26/11 ಉಗ್ರನ 1.5 ಲಕ್ಷ ರೂ. ಖರ್ಚಿಗೆ ವಿಶ್ವಸಂಸ್ಥೆ ಒಪ್ಪಿಗೆ!

By Suvarna NewsFirst Published Dec 12, 2020, 9:19 AM IST
Highlights

ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ 26/11 ಮುಂಬೈ ದಾಳಿಯ ಪ್ರಮುಖ ರೂವಾರಿ| 26/11 ಉಗ್ರನ 1.5 ಲಕ್ಷ ಖರ್ಚಿಗೆ ವಿಶ್ವಸಂಸ್ಥೆ ಒಪ್ಪಿಗೆ| ಮಾಸಿಕ ಹಣ ವೆಚ್ಚ

ನವದೆಹಲಿ(ಡಿ.12): ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ 26/11 ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಮುಖಂಡ ಝಕಿ ಉರ್‌ ರೆಹಮಾನ್‌ ಲಖ್ವಿ ತಿಂಗಳಿಗೆ 1.5 ಲಕ್ಷ ರು.ಗಳನ್ನು ಆತನ ಖಾತೆಯಿಂದ ಬಳಸಿಕೊಳ್ಳಲು ‘ವಿಶ್ವಸಂಸ್ಥೆ ನಿರ್ಬಂಧ ಸಮಿತಿ’ ಒಪ್ಪಿಗೆ ನೀಡಿದೆ. ವಿಶ್ವಸಂಸ್ಥೆಯ ಈ ಅನುಮತಿಯು ಭಾರತವನ್ನು ಕೆರಳಿಸುವ ಸಾಧ್ಯತೆ ಇದೆ.

ಲಖ್ವಿ ಬ್ಯಾಂಕ್‌ ಖಾತೆಗಳನ್ನು ಪಾಕಿಸ್ತಾನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ, ಲಖ್ವಿ ವಿಶ್ವಸಂಸ್ಥೆಯ ನಿರ್ಬಂಧಿತ ಪಟ್ಟಿಯಲ್ಲಿರುವ ಭಯೋತ್ಪಾದಕನಾದ ಕಾರಣ ತುರ್ತು ಉದ್ದೇಶಕ್ಕೆ ಹಣ ಬಳಸಿಕೊಳ್ಳಬೇಕು ಎಂದರೂ ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಅನುಮತಿ ಬೇಕು. ಈ ಪ್ರಕಾರ, ‘ಆತನಿಗೆ ಹಣದ ತುರ್ತು ಅವಶ್ಯಕತೆ ಇದೆ’ ಎಂದು ಪಾಕಿಸ್ತಾನ ಸರ್ಕಾರವು ನಿರ್ಬಂಧಗಳ ಸಮಿತಿಗೆ ಕೋರಿಕೆ ಸಲ್ಲಿಸಿತ್ತು.

ಇದಕ್ಕೆ 15 ಸದಸ್ಯ ದೇಶಗಳನ್ನು ಹೊಂದಿರುವ ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿ ಅನುಮತಿ ನೀಡಿದ್ದು, ಮಾಸಿಕ 1.5 ಲಕ್ಷ ರು. ಹಣದ ವಿತ್‌ಡ್ರಾಗೆ ಅವಕಾಶ ನೀಡಿದೆ. ಇದರಲ್ಲಿ 50 ಸಾವಿರ ರು. ಆಹಾರಕ್ಕೆ, 45 ಸಾವಿರ ರು. ವೈದ್ಯಕೀಯ ಖರ್ಚು ವೆಚ್ಚಕ್ಕೆ, 20 ಸಾವಿರ ರು. ದೈನಂದಿನ ಖರ್ಚಿಗೆ, 20 ಸಾವಿರ ರು. ವಕೀಲರ ಫೀ, 15 ಸಾವಿರ ರು. ಸಾರಿಗೆ ವೆಚ್ಚ ಎಂದು ವರ್ಗೀಕರಿಸಿದೆ.

ಲಖ್ವಿ 2015ರಿಂದ ಜಾಮೀನಿನ ಮೇಲೆ ಹೊರಗಿದ್ದಾನೆ. ಆತ ಪಾಕಿಸ್ತಾನ ಜೈಲಿನಲ್ಲಿದ್ದುದು ಕೂಡ ಪ್ರಹಸನದಂತಿತ್ತು. ಏಕೆಂದರೆ ಜೈಲಲ್ಲಿದ್ದಾಗಲೇ ಮಗುವಿಗೆ ತಂದೆಯಾಗಿದ್ದ!

ಈ ನಡುವೆ, ಉಗ್ರ ಒಸಾಮಾ ಬಿನ್‌ ಲಾಡೆನ್‌ ಜತೆ ನಂಟು ಹೊಂದಿದ್ದ ಪಾಕ್‌ ಅಣುವಿಜ್ಞಾನಿ ಮೊಹಮ್ಮದ್‌ ಸುಲ್ತಾನ್‌ ಬಶೀರುದ್ದೀನ್‌ಗೂ ಇದೇ ರೀತಿಯ ಅನುಮತಿಯನ್ನು ವಿಶ್ವಸಂಸ್ಥೆ ನೀಡಿದೆ.

click me!