Epstein Death: ಎಪ್‌ಸ್ಟೀನ್ ಸಾವಿಗೂ ಮುನ್ನ ಜೈಲಿಗೆ ಬಂದಿದ್ನಾ ಆ ವ್ಯಕ್ತಿ? ಹೊಸ ವಿಡಿಯೋದಿಂದ ಹುಟ್ಟಿಕೊಂಡ ಅನುಮಾನ!

Published : Feb 06, 2026, 02:41 PM IST
New Video Fuels Conspiracy Theories About Jeffrey Epstein Death

ಸಾರಾಂಶ

ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್() 2019ರಲ್ಲಿ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದು ಆತ್ಮ೧ಹತ್ಯೆ ಎಂದು ವರದಿ ನೀಡಲಾಗಿತ್ತು. ಆದರೆ ಈಗ ಆತ ಸಾಯುವ ಹಿಂದಿನ ರಾತ್ರಿ ಸೆಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಓಡಾಡಿದ್ದ ವಿಡಿಯೋ ಬಹಿರಂಗವಾಗಿದ್ದು, ಸಾವಿನ ಸುತ್ತ ಹೊಸ ಅನುಮಾನಗಳು ಹುಟ್ಟಿಕೊಂಡಿವೆ.

Epstein Death: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್(Jeffrey Epstein) ಸಾವಿನ ಕುರಿತು ಅಮೆರಿಕದ ಅಧಿಕೃತ ವರದಿಯ ಬಗ್ಗೆಯೇ ಅನುಮಾನ ಹುಟ್ಟಿಸುವಂತಹ ಹೊಸ ವಿಡಿಯೋವೊಂದು ಈಗ ಬಹಿರಂಗವಾಗಿದೆ. ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಕರೆಕ್ಷನಲ್ ಸೆಂಟರ್ (MCC) ಜೈಲಿನ ಈ ವಿಡಿಯೋ ಮತ್ತು ಕಣ್ಗಾವಲು ದಾಖಲೆಗಳು, ಎಪ್‌ಸ್ಟೀನ್ ಸಾವಿನ ಬಗ್ಗೆ ಸರ್ಕಾರ ನೀಡಿದ್ದ ಹೇಳಿಕೆಗಳಿಗಿಂತ ಭಿನ್ನವಾದ ಚಿತ್ರಣವನ್ನು ಕಟ್ಟಿಕೊಡುತ್ತಿವೆ.

ಎಪ್‌ಸ್ಟೀನ್ ಆಗಸ್ಟ್ 10, 2019 ರಂದು ತನ್ನ ಸೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ. ಅಧಿಕಾರಿಗಳು ಇದನ್ನು ನೇಣು ಬಿಗಿದುಕೊಂಡು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ ಎಂದು ಘೋಷಿಸಿದ್ದರು. ಅಂದು ಅಮೆರಿಕದ ನ್ಯಾಯಾಂಗ ಇಲಾಖೆ (DOJ) ಮತ್ತು ಎಫ್‌ಬಿಐ (FBI), ಎಪ್‌ಸ್ಟೀನ್‌ನನ್ನು ಸೆಲ್‌ನಲ್ಲಿ ಲಾಕ್ ಮಾಡಿದ ನಂತರ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರೂ ಆತನಿದ್ದ ಜಾಗಕ್ಕೆ ಪ್ರವೇಶಿಸಿಲ್ಲ ಎಂದು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸ್ಪಷ್ಟಪಡಿಸಿದ್ದವು. ಆದರೆ, ಈಗ ಹೊಸದಾಗಿ ಬಿಡುಗಡೆಯಾದ ದಾಖಲೆಗಳು ಈ ವಾದವನ್ನು ಪ್ರಶ್ನಿಸುವಂತೆ ಮಾಡಿವೆ.

ಎಪ್‌ಸ್ಟೀನ್ ಸಾಯುವ ಹಿಂದಿನ ದಿನ ಹೋಗಿದ್ದಆ ವ್ಯಕ್ತಿ ಯಾರು?

ಹೊಸದಾಗಿ ಸಿಕ್ಕಿರುವ ದಾಖಲೆಗಳ ಪ್ರಕಾರ, ಎಪ್‌ಸ್ಟೀನ್ ಸಾಯುವ ಹಿಂದಿನ ದಿನ, ಅಂದರೆ ಆಗಸ್ಟ್ 9, 2019ರ ರಾತ್ರಿ ಸುಮಾರು 10:39ಕ್ಕೆ, ಕೇಸರಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಎಪ್‌ಸ್ಟೀನ್ ಇದ್ದ 'L' ಶ್ರೇಣಿಯ ಲಾಕಪ್ ಕಡೆಗಿನ ಮೆಟ್ಟಿಲುಗಳನ್ನು ಹತ್ತುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸುಮಾರು ಎರಡು ನಿಮಿಷಗಳ ನಂತರ, ಅದೇ ವ್ಯಕ್ತಿ ಮೆಟ್ಟಿಲುಗಳಿಂದ ಕೆಳಗೆ ಇಳಿದು ಬಂದಿದ್ದಾನೆ. ಈ ಹಿಂದೆ ಅಧಿಕಾರಿಗಳು ನೀಡಿದ್ದ ಹೇಳಿಕೆಗಳಲ್ಲಿ ಈ ವ್ಯಕ್ತಿಯ ಓಡಾಟದ ಬಗ್ಗೆ ಯಾವುದೇ ಪ್ರಸ್ತಾಪವಿರಲಿಲ್ಲ. ಇದೇ ಕಾರಣಕ್ಕೆ ಈಗ ತಜ್ಞರು ಸರ್ಕಾರದ ವರದಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ವ್ಯಕ್ತಿ 'ಬಹುಶಃ ಕೈದಿ ಇರಬಹುದು' ಎಂದು ಎಫ್‌ಬಿಐ ಆರಂಭದಲ್ಲಿ ಹೇಳಿತ್ತು. ನಂತರ, ನ್ಯಾಯಾಂಗ ಇಲಾಖೆಯ ತನಿಖಾ ಕಚೇರಿ, 'ಅತ ಯಾರೋ ಗುರುತು ತಿಳಿಯದ ಜೈಲು ಅಧಿಕಾರಿಯಾಗಿದ್ದು, ಬೆಡ್‌ಶೀಟ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ' ಎಂದು ಹೇಳಿಕೆ ನೀಡಿತ್ತು. ಆದರೆ, ಈ ಎರಡೂ ವಿವರಣೆಗಳನ್ನು ಸ್ವತಂತ್ರ ವಿಡಿಯೋ ವಿಶ್ಲೇಷಕರು ಒಪ್ಪುತ್ತಿಲ್ಲ. ಆ ವ್ಯಕ್ತಿಯ ಚಲನವಲನ ಮತ್ತು ಸಮಯಕ್ಕೂ, ಅಧಿಕೃತ ಹೇಳಿಕೆಗಳಿಗೂ ತಾಳೆಯಾಗುತ್ತಿಲ್ಲ ಎನ್ನುವುದು ಅವರ ವಾದ.

ಇದಲ್ಲದೆ, ಸರ್ಕಾರ ಬಿಡುಗಡೆ ಮಾಡಿದ ವಿಡಿಯೋ ಫೈಲ್‌ಗಳಲ್ಲಿ ಕೆಲವು ಭಾಗಗಳು ನಾಪತ್ತೆಯಾಗಿವೆ ಮತ್ತು ಎಡಿಟ್ ಮಾಡಿದಂತಿದೆ ಎಂದೂ ತಜ್ಞರು ಆರೋಪಿಸಿದ್ದಾರೆ. ವಿಡಿಯೋದ ಮೆಟಾಡೇಟಾವನ್ನು ಪರಿಶೀಲಿಸಿದಾಗ, ಅದನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೊದಲು ಪ್ರೊಸೆಸ್ ಮಾಡಿರುವ ಸುಳಿವು ಸಿಕ್ಕಿದೆ. ಇದರಿಂದಾಗಿ, ಎಲ್ಲಾ ಪ್ರಮುಖ ದೃಶ್ಯಗಳನ್ನು ಸರ್ಕಾರ ಹಂಚಿಕೊಂಡಿದೆಯೇ ಎಂಬ ಅನುಮಾನ ಮೂಡಿದೆ.

ವಿಶೇಷ ಭದ್ರತಾ ಘಟಕದ (SHU) ವಿನ್ಯಾಸ ಮತ್ತು ಕ್ಯಾಮೆರಾಗಳ ಬ್ಲೈಂಡ್ ಸ್ಪಾಟ್‌ಗಳನ್ನು ಬಳಸಿಕೊಂಡು ಯಾರಾದರೂ ಕ್ಯಾಮೆರಾ ಕಣ್ಣಿಗೆ ಬೀಳದಂತೆ ಎಪ್‌ಸ್ಟೀನ್ ಸೆಲ್ ಬಳಿ ತಲುಪಲು ಸಾಧ್ಯವಿತ್ತು ಎಂದೂ ವಿಶ್ಲೇಷಕರು ಹೇಳುತ್ತಿದ್ದಾರೆ. ಇದು, ಅಂತಹ ಯಾವುದೇ ಚಲನವಲನ ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು ಎಂಬ ಹಿಂದಿನ ಅಧಿಕೃತ ಹೇಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ.

ಜೆಫ್ರಿ ಎಪ್‌ಸ್ಟೀನ್ ಸಾವು ಪ್ರಕರಣ ಮತ್ತಷ್ಟು ಜಟಿಲಗೊಳಿಸಿದ ಹೊಸ ವಿಡಿಯೋ!

ಈ ಹೊಸ ವಿವರಗಳು ಬಹಿರಂಗವಾಗುತ್ತಿದ್ದಂತೆ, ಪ್ರಕರಣದ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಕಾನೂನು ತಜ್ಞರು, ಪತ್ರಕರ್ತರು ಮತ್ತು ವಿಶ್ಲೇಷಕರು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಪಾರದರ್ಶಕವಾಗಿ ಬಹಿರಂಗಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಆ ಅಪರಿಚಿತ ವ್ಯಕ್ತಿ ಜೈಲಿನ ಸಾಮಾನ್ಯ ಸಿಬ್ಬಂದಿಯೇ, ಕೈದಿಯೇ ಅಥವಾ ಬೇರೆ ಯಾರಾದರೂ ಹೌದೇ ಎಂಬುದು ಇನ್ನೂ ನಿಗೂಢ. ಆದರೆ, ಈ ಹೊಸ ವಿಡಿಯೋ ಅಮೆರಿಕದ ಇತಿಹಾಸದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದ ಸಾವಿನ ಪ್ರಕರಣದ ನಿರೂಪಣೆಯನ್ನೇ ಮತ್ತಷ್ಟು ಜಟಿಲಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷದ ಗೆಳತಿಗೆ ಮಗು ಕರುಣಿಸಿ 13ನೇ ವಯಸ್ಸಿಗೆ ತಂದೆಯಾದ ಬಾಲಕ!
ಮೃತಪಟ್ಟ ವ್ಯಕ್ತಿ 48 ಗಂಟೆಗಳ ನಂತರ ಶವಾಗಾರದಲ್ಲಿ ಕಿರುಚುತ್ತಲ್ಲೇ ಎದ್ದ: ಸತ್ತು ಬದುಕಿದವನಿಗೆ ಕಾದಿತ್ತು ಮತ್ತೊಂದು ಆಘಾತ