
ಕೇಂಬ್ರಿಜ್(ಮೇ.30): 2019ರ ಕೊನೆಯ ಭಾಗದಲ್ಲಿ ಚೀನಾದಲ್ಲಿ ಪತ್ತೆಯಾದ ಮಾರಕ ಕೊರೋನಾ ವೈರಸ್ ಸೋಂಕು ವಿಶ್ವವನ್ನೇ ಹೈರಾಣಾಗಿಸಿರುವಾಗಲೇ, ಮಲೇಷ್ಯಾದ 8 ಮಂದಿಯಲ್ಲಿ ಶ್ವಾನ ಕೊರೋನಾ ಪತ್ತೆಯಾಗಿದೆ. ಇದು ಹೊಸ ಆತಂಕಕ್ಕೆ ಕಾರಣವಾಗಿದೆ.
ಮಲೇಷ್ಯಾದ ಸಾರಾವಾಕ್ ಆಸ್ಪತ್ರೆಯಲ್ಲಿ ನ್ಯುಮೋನಿಯಾದಿಂದ ಆಸ್ಪತ್ರೆ ಸೇರಿದ್ದ 8 ರೋಗಿಗಳಲ್ಲಿ ನಾಯಿಗಳಲ್ಲಿ ಕಂಡುಬರುವ ಕೊರೋನಾ ವೈರಾಣು ದೃಢಪಟ್ಟಿದೆ ಎಂದು ಅಂತಾರಾಷ್ಟ್ರೀಯ ಮನ್ನಣೆ ಹೊಂದಿರುವ ವಿಜ್ಞಾನಿಗಳ ಗುಂಪು ಪತ್ತೆ ಹಚ್ಚಿದೆ.
ಆದರೆ ಮಾನವರಲ್ಲಿ ಪತ್ತೆಯಾಗುವ ಕೋವಿಡ್‌ಗೆ ಹೋಲಿಸಿದರೆ, ಈ ಕೋವಿಡ್ 50 ವರ್ಷಗಳಷ್ಟುಹಳತು. ಹೆಚ್ಚು ಹರಡುತ್ತಿರಲಿಲ್ಲ ಎಂದು ತಜ್ಞರು ವಿವರಿಸಿದ್ದಾರೆ.
ಶ್ವಾನ ಕೊರೋನಾದಿಂದ ಮಾನವರಲ್ಲಿ ನ್ಯುಮೋನಿಯಾ ಬರುತ್ತದೆಯೇ? ಇಲ್ಲವೇ ಎಂಬುದು ಖಚಿತಪಟ್ಟಿಲ್ಲ. ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡಬಲ್ಲದು. ಸೋಂಕು ಪ್ರಸರಣಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ತೆಯಾಗಿದ್ದು ಹೇಗೆ?:
ಕೊರೋನಾ ವೈರಸ್ ಕುಟುಂಬದಲ್ಲಿ ಆಲ್ಛಾ, ಬೀಟಾ, ಗ್ಯಾಮಾ ಹಾಗೂ ಡೆಲ್ಟಾಎಂಬ 4 ವಿಭಾಗಗಳಿವೆ. ಮಾನವರಲ್ಲಿ ಕಂಡುಬರುವ ಕೊರೋನಾ ವೈರಸ್ ಬೀಟಾ ಗುಂಪಿಗೆ ಸೇರಿದ್ದು. ಶ್ವಾನಗಳಲ್ಲಿ ಪತ್ತೆಯಾಗುವ ವೈರಾಣು ಆಲ್ಛಾ ಕುಟುಂಬದ್ದು. ಶ್ವಾನ ಕೊರೋನಾ ಬಗ್ಗೆ ವಿಜ್ಞಾನಿಗಳಿಗೆ 50 ವರ್ಷಗಳ ಹಿಂದಿನಿಂದಲೂ ಗೊತ್ತಿದೆ. ಆದರೆ ಅದರ ಹಾವಳಿ ಹೆಚ್ಚಿಲ್ಲ.
ಕೊರೋನಾ ವೈರಸ್ ಬಗ್ಗೆ ಹೆಚ್ಚು ಹೆಚ್ಚು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಗೆಯ ಕೊರೋನಾ ವೈರಸ್ಸನ್ನೂ ಒಂದೇ ಪರೀಕ್ಷೆ ಮೂಲಕ ಪತ್ತೆ ಹಚ್ಚಲು ವಿಜ್ಞಾನಿಗಳು ಹೊಸ ಪರೀಕ್ಷಾ ವಿಧಾನವನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿದ್ದರು. ನ್ಯುಮೋನಿಯಾಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಮಲೇಷ್ಯಾದ 192 ಮಂದಿಯ ಸ್ವಾಬ್ ಅನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ್ದರು. ಆ ಪೈಕಿ 9 ಮಂದಿಯಲ್ಲಿ ಕೊರೋನಾ ಪತ್ತೆಯಾಯಿತು. ಅದರಲ್ಲೂ ನಾಲ್ವರಲ್ಲಿ ಶ್ವಾನ ಕೊರೋನಾ ದೃಢಪಟ್ಟಿತ್ತು. ಮತ್ತಷ್ಟುರೋಗಿಗಳನ್ನು ಪರೀಕ್ಷೆಗೊಳಪಡಿಸಿದಾಗ ಇನ್ನೂ ನಾಲ್ವರಲ್ಲಿ ಶ್ವಾನ ಕೊರೋನಾ ಪತ್ತೆಯಾಯಿತು ಎಂದು ತಿಳಿಸಿದ್ದಾರೆ. ಎಲ್ಲ ರೋಗಿಗಳು ಈಗಾಗಲೇ ಗುಣಮುಖರಾಗಿದ್ದಾರೆ ಎಂದೂ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ