
ಪ್ರಾಣಿಗಳು ಸೇಡು ತೀರಿಸಿಕೊಳ್ಳುತ್ತವೆಯೇ? ಹೌದು! ನೇಪಾಳದಲ್ಲಿ ಹೃದಯ ವಿದ್ರಾವಕ ಮತ್ತು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಧುರ್ಬೆ (Dhurbe Elephant) ಎಂಬ ಹೆಸರಿನ ಒಂಟಿಸಲಗ ಕಳೆದ 14 ವರ್ಷಗಳಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದಿದೆ. ಈ ಆನೆಯಿಂದ ತಪ್ಪಿಸಿಕೊಳ್ಳಲು ಆ ಕುಟುಂಬ 17 ಕಿಲೋಮೀಟರ್ ದೂರದ ಊರಿಗೆ ವಲಸೆ ಹೋಗಿದ್ದರೂ ಸಹ, ಸಾವು ಮಾತ್ರ ಅವರನ್ನು ಬೆನ್ನತ್ತಿ ಬಂದಿದೆ..!
ಈ ದುರಂತದ ಕಥೆ ಆರಂಭವಾಗಿದ್ದು 2012ರಲ್ಲಿ! ಚಿತ್ವಾನ್ ರಾಷ್ಟ್ರೀಯ ಉದ್ಯಾನವನದ ಬಳಿ ವಾಸವಿದ್ದ ಶನಿಚರ ಬೋಟೆ (Shanichara Bote) ಎಂಬುವವರ ತಂದೆ-ತಾಯಿ (ಬುಧಿರಾಂ ಮತ್ತು ಝರಾಲಿ) ಅವರನ್ನು ಇದೇ ಆನೆ ತುಳಿದು ಸಾಯಿಸಿತ್ತು. ಈ ಘಟನೆಯಿಂದ ಕಂಗೆಟ್ಟ ಶನಿಚರ ಬೋಟೆ ಕುಟುಂಬ ತಮ್ಮ ಆಸ್ತಿಪಾಸ್ತಿ ಮಾರಿ ಆನೆಯ ಭಯವಿಲ್ಲದ ಜಗತ್‌ಪುರ ಎಂಬಲ್ಲಿಗೆ ವಲಸೆ ಹೋಗಲು ನಿರ್ಧರಿಸಿತು.
ಬರೋಬ್ಬರಿ ಎರಡು ದೊಡ್ಡ ನದಿಗಳನ್ನು ದಾಟಿ, ಹಳೆಯ ಮನೆಯಿಂದ 17 ಕಿಲೋಮೀಟರ್ ದೂರದಲ್ಲಿ ಹೊಸ ಬದುಕು ಕಟ್ಟಿಕೊಂಡಿದ್ದ ಶನಿಚರ ಬೋಟೆ ಕುಟುಂಬ, ಇಲ್ಲಿಗೆ ಆನೆ ಬರಲಾರದು, ನಾವು ಸುರಕ್ಷಿತ ಎಂದು ನಂಬಿದ್ದರು. ಆದರೆ, ಜುಲೈ 4ರಂದು ಮಧ್ಯರಾತ್ರಿ ಮತ್ತೆ ಅದೇ ಆನೆ ಇವರ ಮನೆಯ ಮೇಲೆ ದಾಳಿ ಮಾಡಿದೆ. ಈ ಭೀಕರ ದಾಳಿಯಲ್ಲಿ ಶನಿಚರ ಬೋಟೆ ಅವರ 25 ವರ್ಷದ ಸೊಸೆ ಮತ್ತು 4 ವರ್ಷದ ಪುಟ್ಟ ಮಗು ಮೃತಪಟ್ಟಿದೆ.
ಏಕಾಏಕಿ ಮಧ್ಯರಾತ್ರಿ ಮನೆಗೆ ಎಂಟ್ರಿಕೊಟ್ಟ ಆನೆ, ಮನೆಯ ಗೋಡೆ ಮೇಲೆ ದಾಳಿ ಮಾಡಿದೆ. ಆಗ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ಮನೆಯ ಮಣ್ಣಿನ ಗೋಡೆ ಕುಸಿದಾಗ ಸೊಸೆ ಮತ್ತು ಮಗು ಆನೆಯ ಹಿಡಿತಕ್ಕೆ ಸಿಲುಕಿದ್ದಾರೆ. ಶನಿಚರ ಅವರ ಪತ್ನಿ ಒಣ ಹುಲ್ಲಿಗೆ ಬೆಂಕಿ ಹಚ್ಚಿ ಆನೆಯನ್ನು ಓಡಿಸುವಲ್ಲಿ ಯಶಸ್ವಿಯಾದರಾದರೂ, ಆ ಬೆಂಕಿ ಇಡೀ ಮನೆಗೆ ಹಬ್ಬಿ ಮನೆ ಸುಟ್ಟು ಭಸ್ಮವಾಗಿದೆ. ಪ್ರಾಣ ಉಳಿಸಿಕೊಂಡರೂ, ಆಶ್ರಯ ಕಳೆದುಕೊಂಡು ಕುಟುಂಬ ಇಂದು ಬೀದಿಗೆ ಬಿದ್ದಿದೆ.
ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದಲ್ಲಿ ಧುರ್ಬೆ ಒಂದು ಕುಖ್ಯಾತ ಒಂಟಿಸಲಗ. 2010ರಲ್ಲಿ ಈ ಆನೆ ಮೊದಲ ಬಾರಿಗೆ ಒಬ್ಬನನ್ನ ಬಲಿ ಪಡೆದಿತ್ತು.ಈವರೆಗೆ ಇದು ಬರೋಬ್ಬರಿ 25 ಜನರ ಸಾಯಿಸಿದೆ. ಇದರಲ್ಲಿ ಇಬ್ಬರು ಸೇನಾ ಸಿಬ್ಬಂದಿಯೂ ಸೇರಿದ್ದಾರೆ.
2012ರ ದಾಳಿಯ ನಂತರ ಅಧಿಕಾರಿಗಳು ಈ ಆನೆಯನ್ನು ಕೊಲ್ಲಲು ಕಾರ್ಯಾಚರಣೆ ನಡೆಸಿದ್ದರು. ಗುಂಡೇಟು ತಿಂದಿದ್ದ ಆನೆ ಕಾಡಿನೊಳಗೆ ನಾಪತ್ತೆಯಾಗಿತ್ತು. ಅಧಿಕಾರಿಗಳು ಆನೆ ಸತ್ತಿರಬಹುದು ಎಂದು ಭಾವಿಸಿದ್ದರು. ಆದರೆ 2026ರಲ್ಲಿ ಅದು ಮತ್ತೆ ಪ್ರತ್ಯಕ್ಷವಾಗಿ ತನ್ನ ಅಟ್ಟಹಾಸ ಮುಂದುವರಿಸಿದೆ.
ವನ್ಯಜೀವಿ ತಜ್ಞರ ಪ್ರಕಾರ, ಧುರ್ಬೆ ಚಿಕ್ಕ ವಯಸ್ಸಿನಲ್ಲೇ ತನ್ನ ಹಿಂಡಿನ ಪ್ರಬಲ ಆನೆಗಳಿಂದ ಹೊರಹಾಕಲ್ಪಟ್ಟಿತ್ತು. ಏಕಾಂಗಿಯಾಗಿ ಬದುಕುತ್ತಿದ್ದ ಈ ಸಲಗ ಆಹಾರಕ್ಕಾಗಿ ಮಾನವ ವಸತಿ ಪ್ರದೇಶಗಳಿಗೆ ನುಗ್ಗಲು ಆರಂಭಿಸಿತು. ಕಾಲಕ್ರಮೇಣ ಅದು ಮನುಷ್ಯರ ಮೇಲೆ ದಾಳಿ ಮಾಡುವ ಸ್ವಭಾವ ಬೆಳೆಸಿಕೊಂಡಿದೆ. ಪ್ರಸ್ತುತ ಈ ಆನೆಗೆ ಸ್ಯಾಟಲೈಟ್ ಟ್ರ್ಯಾಕಿಂಗ್ ಕಾಲರ್ ಅಳವಡಿಸಲಾಗಿದೆಯಾದರೂ, ಅದು ಪ್ರತಿ ಒಂದು ಗಂಟೆಗೊಮ್ಮೆ ಮಾತ್ರ ಲೊಕೇಶನ್ ಕಳುಹಿಸುವುದರಿಂದ ಅದರ ಕ್ಷಣಕ್ಷಣದ ಚಲನವಲನ ತಿಳಿಯುವುದು ಕಷ್ಟವಾಗಿದೆ. ತನ್ನ ಹಿರಿಯರನ್ನು ಕೊಂದ ಆನೆಯೇ, ತನ್ನ ಮುಂದಿನ ಪೀಳಿಗೆಯನ್ನೂ ಬಲಿ ಪಡೆದ ಘಟನೆ ಶನಿಚರ ಬೋಟೆ ಕುಟುಂಬವನ್ನು ಅನಾಥವಾಗಿಸಿದೆ.
ನೇಪಾಳದ ಅಂಕಿ ಅಂಶಗಳ ಪ್ರಕಾರ ಈ ಆನೆ 25ಕ್ಕೂ ಹೆಚ್ಚು ಮಂದಿಯ ಬಲಿ ಪಡೆದಿರೋದಲ್ಲದೇ 60ಕ್ಕೂ ಹೆಚ್ಚು ಮನೆಗಳನ್ನ ಧ್ವಂಸ ಮಾಡಿದೆ. ಅಂದ್ಹಾಗೆ ನೇಪಾಳದಲ್ಲಿ ಕಾಡಾನೆಗಳ ಸಂಘರ್ಷ ಇದೇ ಮೊದಲಲ್ಲ. 2021-22 ಅವಧಿಯಲ್ಲಿ ಸುಮಾರು 12ಸಾವಿರಕ್ಕೂ ಅಧಿಕ ಕಾಡುಪ್ರಾಣಿಗಳ ದಾಳಿ ಪ್ರಕರಣಗಳು ದಾಖಲಾಗಿವೆ. 58 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ