ಮಯನ್ಮಾರ್(ಡಿ.6): 1991 ರ ನೊಬೆಲ್ ಪ್ರಶಸ್ತಿ ವಿಜೇತೆ ಮಯನ್ಮಾರ್‌ನ ಹಿರಿಯ ರಾಜಕಾರಣಿ ಹಾಗೂ ಪ್ರಸ್ತುತ ಮಯನ್ಮಾರ್ ದೇಶದ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ(Aung San Suu Kyi) ಅವರಿಗೆ ಒಟ್ಟು 4 ವರ್ಷಗಳ ಜೈಲು ಶಿಕ್ಷೆ ಘೋಷಿಸಲಾಗಿದೆ. ಸೆಕ್ಷನ್ 505 (ಬಿ) ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ನೈಸರ್ಗಿಕ ವಿಕೋಪ ಕಾನೂನಿನ ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಜುಂಟಾ ವಕ್ತಾರ ಜಾವ್ ಮಿನ್ ಟುನ್( Zaw Min Tun) ಹೇಳಿದ್ದಾರೆ.
(ಜುಂಟಾ ಎಂದರೆ ಅಧಿಕಾರವನ್ನು ವಶಪಡಿಸಿಕೊಂಡ ನಂತರ ದೇಶವನ್ನು ಆಳುವ ಮಿಲಿಟರಿ ಅಧಿಕಾರಿಗಳ ಗುಂಪು) ಮಯನ್ಮಾರ್(Myanmar)ನ ಜುಂಟಾವು ದೇಶದ ಉಚ್ಚಾಟಿತ ನಾಯಕಿಗೆ ಮಿಲಿಟರಿ ವಿರುದ್ಧ ಪ್ರಚೋದನೆ ಮತ್ತು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸೋಮವಾರ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಘೋಷಿಸಲಾಗಿದೆ. ನೊಬೆಲ್ ಪ್ರಶಸ್ತಿ ವಿಜೇತೆಯೊಬ್ಬರನ್ನು ಜೈಲಿನಲ್ಲಿರಿಸಿರುವುದು ಇದೇ ಮೊದಲು. ಈ ವರ್ಷದ ಫೆಬ್ರವರಿ 1 ರಂದು ಮಯನ್ಮಾರ್‌ನ ಸೇನಾ ಜನರಲ್‌ಗಳು ದಂಗೆ ನಡೆಸಿ ಸೂಕಿಯವರ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ 76 ವರ್ಷದ ಸೂಕಿ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಸುದೀರ್ಘ ಪ್ರಜಾಪ್ರಭುತ್ವದ ಇತಿಹಾಸ ಹೊಂದಿದ ಆಗ್ನೇಯ ಏಷ್ಯಾ ದೇಶವೊಂದರ ಪ್ರಜಾಪ್ರಭುತ್ವ(Democracy) ಆಡಳಿತವು ಕೊನೆಗೊಂಡು ಸೇನಾಡಳಿತ ಜಾರಿಗೆ ಬಂದಿದೆ.
ರೋಹಿಂಗ್ಯಾ ಮುಸ್ಲಿಮರಿಗೆ ಗೇಟ್ಪಾಸ್?
ಬಂಧನಕ್ಕೊಳಗಾದಂದಿನಿಂದಲೂ ಸೂಕಿ ವಿರುದ್ಧ ಅಧಿಕೃತ ರಹಸ್ಯ ಕಾಯಿದೆ, ಭ್ರಷ್ಟಾಚಾರ ಮತ್ತು ಚುನಾವಣಾ ವಂಚನೆ ಸೇರಿದಂತೆ ಹಲವಾರು ಆರೋಪಗಳನ್ನು ಹೇರಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ತಪ್ಪಿತಸ್ಥರಾದರೆ ಸೂಕಿ ದಶಕಗಳ ಕಾಲ ಜೈಲು ಶಿಕ್ಷೆ ಎದುರಿಸಬೇಕಾಗುವುದು. ಮಾಜಿ ಅಧ್ಯಕ್ಷ ವಿನ್ ಮೈಂಟ್(Win Myint)ಕೂಡ ಇದೇ ಆರೋಪದಲ್ಲಿ ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದರು ಎಂದು ಜುಂಟಾ ವಕ್ತಾರ ಹೇಳಿದ್ದಾರೆ. ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷವೂ ದಂಗೆಯ ನಂತರ ಜನರಲ್‌ಗಳ ಸ್ವಾಧೀನವನ್ನು ಖಂಡಿಸಿ ಹೇಳಿಕೆಗಳನ್ನು ನೀಡಿತ್ತು. ಈ ಹೇಳಿಕೆಗಳ ಮೂಲಕ ಜನರನ್ನು ಪ್ರಚೋದಿಸಿದ ಆರೋಪವನ್ನು ಸೇನೆ ಮಾಡಿದೆ. ಇನ್ನೂ ಸೂಕಿ ವಿರುದ್ಧ ಮಾಡಿರುವ ಕೋವಿಡ್ ಸಂಬಂಧಿತ ಆರೋಪವೂ ಕಳೆದ ವರ್ಷ ನಡೆದ ಚುನಾವಣೆಗೆ ಸಂಬಂಧಿಸಿದಾಗಿದೆ. ಈ ಚುನಾವಣೆಯಲ್ಲಿ ಸೂಕಿಯವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಟಿಕ್ ಪಕ್ಷ(National League for Democratic Party)ವೂ ಭಾರಿ ಅಂತರದ ಗೆಲುವು ಸಾಧಿಸಿತ್ತು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ವಿವರಗಳಿರಲಿಲ್ಲ.
ಇನ್ನು ವಿಚಾರಣೆಗೆ ಸಂಬಂಧಿಸಿದಂತೆ ನಾಪಿಡವ್(Napidav)ನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಪತ್ರಕರ್ತರಿಗೆ ನಿಷೇಧ ಹೇರಲಾಗಿದೆ. ಅಲ್ಲದೇ ಸೂಕಿ ಪರ ವಕೀಲರಿಗೂ ಮಾಧ್ಯಮದವರೊಂದಿಗೆ ಮಾತನಾಡದಂತೆ ನಿಷೇಧ ಹೇರಲಾಗಿದೆ. ಇಷ್ಟೇ ಅಲ್ಲದೇ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಟಿಕ್ ಪಕ್ಷದ ಇನ್ನೂ ಅನೇಕ ಹಿರಿಯ ಸದಸ್ಯರಿಗೂ ಈಗಾಗಲೇ ಜೈಲು ಶಿಕ್ಷೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಈ ತಿಂಗಳು 75 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇದೇ ವೇಳೆ ಸೂಕಿಯ ಆಪ್ತ ಸಹಾಯಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸೂಕಿ ವಿರುದ್ಧ ಕೈಗೊಂಡ ಕ್ರಮವನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ತಕ್ಷಣವೇ ಖಂಡಿಸಿದೆ.
ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ: ಮತ್ತೆ ಮಿಲಿಟರಿ ಆಡಳಿತ ಜಾರಿ !
ನಕಲಿ ಆರೋಪಗಳನ್ನು ಹೇರುವ ಮೂಲಕ ಆಂಗ್ ಸಾನ್ ಸೂಕಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ. ಮಯನ್ಮಾರ್‌ನಲ್ಲಿ ಸೇನೆಯ ಮೇಲಿನ ಎಲ್ಲಾ ವಿರೋಧಗಳನ್ನು ತೊಡೆದು ಹಾಕಲು ಹಾಗೂ ಅಲ್ಲಿ ಸ್ವಾತಂತ್ರವನ್ನು ಉಸಿರುಗಟ್ಟಿಸಲು ಸೇನೆಯ ಕೈಗೊಂಡಿರುವ ದೌರ್ಜನ್ಯದ ಇತ್ತೀಚಿನ ಉದಾಹರಣೆ ಇದು ಎಂದು ಆಮ್ನೆಸ್ಟಿ ಅಭಿಯಾನಗಳ ಉಪ ಪ್ರಾದೇಶಿಕ ನಿರ್ದೇಶಕ ಮಿಂಗ್ ಯು ಹಾಹ್(Ming Yu Hah)ಹೇಳಿದ್ದಾರೆ. ನ್ಯಾಯಾಲಯದ ಹಾಸ್ಯಾಸ್ಪದ ಮತ್ತು ಭ್ರಷ್ಟ ನಿರ್ಧಾರವು ಅನಿಯಂತ್ರಿತ ಶಿಕ್ಷೆಯ ವಿನಾಶಕಾರಿ ಮಾದರಿಯ ಭಾಗವಾಗಿದೆ. ಮಯನ್ಮಾರ್‌ನಲ್ಲಿ ಫೆಬ್ರವರಿಯಲ್ಲಿ ಮಿಲಿಟರಿ ದಂಗೆಯಿಂದ 1,300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಸಾವಿರಾರು ಜನರನ್ನು ಸೇನೆ ಬಂಧಿಸಿತ್ತು.