ಕೊರೋನಾ ನಡುವೆ ‘ಲಸ್ಸಾ’ ಸೋಂಕು ಭೀತಿ, ಎಬೋಲಾ ಮಾದರಿಯ ಜ್ವರ ಇದು!

Published : Feb 16, 2022, 07:17 AM ISTUpdated : Feb 16, 2022, 02:22 PM IST
ಕೊರೋನಾ ನಡುವೆ ‘ಲಸ್ಸಾ’ ಸೋಂಕು ಭೀತಿ, ಎಬೋಲಾ ಮಾದರಿಯ ಜ್ವರ ಇದು!

ಸಾರಾಂಶ

* ಲಸ್ಸಾ ಜ್ವರಕ್ಕೆ ಬ್ರಿಟನ್ನಲ್ಲಿ ಒಂದು ಬಲಿ, ಇನ್ನೂ ಇಬ್ಬರಿಗೆ ಸೋಂಕು * ಇಲಿಯ ಮಲ, ಮೂತ್ರ ಬಿದ್ದ ಆಹಾರ ಸೇವನೆಯಿಂದ ಬರುವ ಜ್ವರ * ಆದರೆ ಕೊರೋನಾದಂತೆ ತೀವ್ರವಾಗಿ ಹರಡದು: ತಜ್ಞರ ಅಭಯ * ಎಬೋಲಾ ಮಾದರಿಯ ಜ್ವರ ಇದು

ಲಂಡನ್‌(ಫೆ.16): ಇಡೀ ಜಗತ್ತೇ ಕೋವಿಡ್‌-19 ವೈರಸ್‌ನಿಂದ (Covid 19) ತತ್ತರಿಸುತ್ತಿದೆ. ಈ ನಡುವೆ ಬ್ರಿಟನ್ನಿನಲ್ಲಿ ಲಸ್ಸಾ ಜ್ವರ (Lassa Fever) ಎಂಬ ಸೋಂಕು ಪತ್ತೆಯಾಗಿದ್ದು, ಮೂವರು ಸೋಂಕಿತರ ಪೈಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪಶ್ಚಿಮ ಆಫ್ರಿಕಾಕ್ಕೆ ಭೇಟಿ ನೀಡಿ ವಾಪಸಾಗಿದ್ದ ಒಂದೇ ಕುಟುಂಬದ ಮೂವರಲ್ಲಿ ಈ ಹೆಮರಾಜಿಕ್‌ ಲಸ್ಸಾ ಜ್ವರ ಪತ್ತೆಯಾಗಿತ್ತು. ಎಬೋಲಾ ಮಾದರಿಯ ವೈರಸ್‌ಗಳಿಂದ ಉಂಟಾಗುವ ಲಸ್ಸಾ ಜ್ವರ ಅಪಾಯಕಾರಿ ಕಾಯಿಲೆಯಾದ್ದರಿಂದ ದೇಶಾದ್ಯಂತ ಆತಂಕ ಸೃಷ್ಟಿಸಿದೆ.

ಈ ಮೂಲಕ 1980ರಿಂದ ಈಚೆಗೆ ಬ್ರಿಟನ್‌ನಲ್ಲಿ (Britain) ಈವರೆಗೆ ಲಸ್ಸಾ ಜ್ವರದ 8 ಪ್ರಕರಣಗಳು ಪತ್ತೆಯಾದಂತಾಗಿದೆ. 2009ರಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದವು, ಅನಂತರ ಈ ಜ್ವರ ಕಾಣಿಸಿಕೊಂಡಿದ್ದು ಇದೇ ಮೊದಲು.

ಹರಡುವುದು ಹೇಗೆ?:

ಲಸ್ಸಾ ಜ್ವರವು ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಸೋಂಕಿತ ಇಲಿಗಳ (Mouse) ಮೂತ್ರ ಅಥವಾ ಮಲದಿಂದ ಕಲುಷಿತಗೊಂಡ ಆಹಾರ ಅಥವಾ ಇತರ ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಜನರು ಸೋಂಕಿಗೆ ಒಳಗಾಗುತ್ತಾರೆ. ಹಾಗೆಯೇ ಒಬ್ಬ ವ್ಯಕ್ತಿ ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳೊಂದಿಗೆ ಸಂಪರ್ಕಕ್ಕೆ ಬಂದರೆ ಅಥವಾ ಕಣ್ಣು, ಮೂಗು ಅಥವಾ ಬಾಯಿಯಂತಹ ಲೋಳೆಯ ಮೂಲಕ ಈ ಜ್ವರ ಹರಡಬಹುದು.

ಹಾಗಂತ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ಖಚಿತ ಎಂಬುದಕ್ಕೆ ಪುರಾವೆ ಲಭ್ಯವಿಲ್ಲ. ಇನ್ನೂ ಅಧ್ಯಯನ ನಡೆದಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಜ್ವರಕ್ಕೆ ಸೂಕ್ತವಾದ ಔಷಧ ಅಥವಾ ಲಸಿಕೆ ಲಭ್ಯವಿಲ್ಲ.

ಲಕ್ಷಣಗಳೇನು?:

ಲಸ್ಸಾ ಜ್ವರ ಬಂದ 1ರಿಂದ 3 ವಾರಗಳ ನಂತರ ರೋಗಲಕ್ಷಣಗಳು (Symptoms) ಕಾಣಿಸಿಕೊಳ್ಳುತ್ತವೆ. ಜ್ವರ, ತಲೆನೋವು, ಗಂಟಲು ಉರಿ, ಮಾಂಸಖಂಡಗಳ ಸೆಳೆತ, ವಾಂತಿ, ಅತಿಸಾರ ಭೇದಿ ಇದರ ಸಾಮಾನ್ಯ ಲಕ್ಷಣಗಳು. ತೀವ್ರತರದ ಪ್ರಕರಣಗಳಲ್ಲಿ ಯೋನಿ, ಬಾಯಿ ಅಥವಾ ಮೂಗಿನಿಂದ ರಕ್ತಸ್ರಾವವಾಗಬಹುದು. ಲಸ್ಸಾ ಜ್ವರ ಬಂದವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟುಜನರು ವಿವಿಧ ಹಂತದ ಕಿವುಡುತನವನ್ನು ಅನುಭವಿಸುತ್ತಾರೆ. ಕಿವುಡುತನವು ಜ್ವರದ ಸೌಮ್ಯವಾದ ಮತ್ತು ತೀವ್ರ ಸ್ವರೂಪಗಳೆರಡರಲ್ಲೂ ಸಂಭವಿಸಬಹುದು.

ಮೊದಲು ಪತ್ತೆಯಾಗಿದ್ದು ಎಲ್ಲಿ?:

ಲಸ್ಸಾ ಜ್ವರವನ್ನು ಹರಡುವ ವೈರಸ್‌ 1969ರಲ್ಲಿ ಪಶ್ಚಿಮ ಆಫ್ರಿಕಾದ ನೈಜೀರಿಯಾದ ಪತ್ತೆಯಾಗಿತ್ತು. ಇಲ್ಲಿ ಇಬ್ಬರು ನರ್ಸ್‌ಗಳು ಸಾವನ್ನಪ್ಪಿದ ನಂತರ ಈ ರೋಗದ ಆವಿಷ್ಕಾರವಾಯಿತು. ಈ ರೀತಿಯ ಇಲಿ ಜ್ವರ ಪ್ರಾಥಮಿಕವಾಗಿ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್‌, ಲೈಬೀರಿಯಾ, ಗಿನಿಯಾ ಮತ್ತು ನೈಜೀರಿಯಾ ಸೇರಿದಂತೆ ಸ್ಥಳೀಯ ದೇಶಗಳಲ್ಲಿ ಕಂಡುಬಂದಿದೆ. ಪಶ್ಚಿಮ ಆಫ್ರಿಕಾದಲ್ಲಿ ವರ್ಷಕ್ಕೆ ಸುಮಾರು 1,00,000 ಲಸ್ಸಾ ಜ್ವರ ಪ್ರಕರಣಗಳು ದೃಢಪಟ್ಟರೆ, ಸರಾಸರಿ 5,000 ಸಾವುಗಳು ಸಂಭವಿಸುತ್ತವೆ. ಆದರೆ ಸುಮಾರು 80 ಪ್ರತಿಶತ ಪ್ರಕರಣಗಳು ಲಕ್ಷಣರಹಿತವಾಗಿವೆ.

ರೋಗಲಕ್ಷಣಗಳ ಪ್ರಾರಂಭದ ಎರಡು ವಾರಗಳ ಬಳಿಕ ಸಾವು ಸಂಭವಿಸಬಹುದು, ಸಾಮಾನ್ಯವಾಗಿ ಬಹು-ಅಂಗಾಂಗ ವೈಫಲ್ಯದ ಪರಿಣಾಮವಾಗಿ ಇದು ಆಗುತ್ತದೆ. ಜ್ವರಕ್ಕೆ ಸಂಬಂಧಿಸಿದ ಅತ್ಯಂತ ಸಾಮಾನ್ಯ ಸಮಸ್ಯೆ ಕಿವುಡುತನ ಎಂದು ಸಿಡಿಡಿ ಹೇಳಿದೆ. ಸೋಂಕಿತರ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಜನರು ವಿವಿಧ ಹಂತದ ಕಿವುಡುತನವನ್ನು ವರದಿ ಮಾಡಿದ್ದಾರೆ. ಅಂತಹ ಅನೇಕ ಸಂದರ್ಭಗಳಲ್ಲಿ, ಶ್ರವಣ ನಷ್ಟವು ಶಾಶ್ವತವಾಗಿರುತ್ತದೆ. ಗಮನಾರ್ಹವಾಗಿ, ಕಿವುಡುತನವು ಜ್ವರದ ಸೌಮ್ಯವಾದ ಮತ್ತು ತೀವ್ರ ಸ್ವರೂಪಗಳೆರಡರಲ್ಲೂ ಸಂಭವಿಸಬಹುದು ಎಂದು ಸಿಡಿಸಿ ಹೇಳಿದೆ. ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಇಲಿಗಳ ಸಂಪರ್ಕವನ್ನು ತಪ್ಪಿಸುವುದು ಎಂದು ಸಿಡಿಸಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ