
ಮಾಸ್ಕೋ: ಸಾಧಾರಣ ಚಳಿಯೇ ಮೈ ನಡುಗಿಸುವ ನಡುವೆಯ, ರಷ್ಯಾದ ಯಾಕುಟಿಯಾದಲ್ಲಿ ಬರೋಬ್ಬರಿ ಮೈನಸ್ 56 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ವಿಶ್ವದ ಅತಿ ಶೀತನಗರದ ಎನಿಸಿಕೊಂಡಿದೆ, ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ.
ರಷ್ಯಾದ ಸೈಬೀರಿಯಾದಲ್ಲಿರುವ ಈ ಪ್ರದೇಶವು ಅತ್ಯಂತ ಶೀತ ಚಳಿಗಾಲಕ್ಕೆ ಹೆಸರುವಾಸಿ. ಈ ನಗರದಲ್ಲಿ 3.55 ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಾರೆ. ಇಲ್ಲಿ -50 ರಿಂದ - 56ಡಿ. ಸೆ. ತನಕ ತಾಪಮಾನ ದಾಖಲಾಗುತ್ತಿದ್ದು ಮೈಕೊರೆಯುವ ಚಳಿಯಿಂದ ಜನ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಯಾಕುಟಿಯಾದಲ್ಲಿ ದಿನಕ್ಕೆ ನಾಲ್ಕು ಗಂಟೆ ಸೂರ್ಯನ ಬೆಳಕು ಬಿದ್ದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಮಪಾತದಿಂದ ತಪ್ಪಿಸಿಕೊಳ್ಳಲು ಹೊರಾಂಗಣ ಸಮಯವನ್ನು ನಿತ್ಯ 30 ನಿಮಿಷಕಷ್ಟೇ ನಿಗದಿಪಡಿಸಲಾಗಿದೆ. ಈಗಾಗಲೇ ಮಕ್ಕಳ ಆರೋಗ್ಯದ ಹಿತ ದೃಷ್ಟಿಯಿಂದ ಶಾಲೆಗಳನ್ನು ಮತ್ತು ಶಿಶು ವಿಹಾರಗಳನ್ನು ಮುಚ್ಚಲಾಗಿದೆ.
ಈ ನಗರದಲ್ಲಿ ಕೊರೆಯುವ ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಉಷ್ಣ ಉಡುಪು, ಇನ್ಸುಲೇಟೆಡ್ ಬೂಟು, ಕೈಗವಸುಗಳನ್ನು ಹಾಕಿಕೊಂಡು ರಕ್ಷಿಸಿಕೊಳ್ಳುತ್ತಾರೆ. ಮನೆಗಳನ್ನೂ ಕೂಡ ತೀವ್ರ ಚಳಿ ತಡೆಯುವಂತೆಯೇ ವಿನ್ಯಾಸಗೊಳಿಸಿರುತ್ತಾರೆ.
ಕರಗುತ್ತಿರುವ ಪರ್ಮಾಫ್ರಾಸ್ಟ್ ( ಭೂಮಿ ಮೇಲಿನ ಕಲ್ಲು ಮಣ್ಣಗಳು ಘನೀಕೃತವಾಗುವ ಸ್ಥಿತಿ) ಯಾಕುಟಿಯಾದಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಯಾಕುಟಿಯಾ ಎರಡು ದಶಕಗಳಲ್ಲಿ ಅತ್ಯಂತ ಕನಿಷ್ಠ ತಾಪಮಾನ ವನ್ನು - 62.7 ಸೆ.ಯನ್ನು 2023ರ ಜನವರಿಯಲ್ಲಿ ದಾಖಲಿಸಿತ್ತು. 1891ರಲ್ಲಿ ದಾಖಲಾದ - 64.4 ಡಿ.ಸೆ. ಇದುವರೆಗಿನ ಕನಿಷ್ಠ.
ಮರಾಠಿ ಬರೋಲ್ಲವೆಂದು 6 ವರ್ಷದ ಪುತ್ರಿಯನ್ನೇ ಕೊಂದ ಪಾತಕಿ ತಾಯಿ
ನವೀ ಮುಂಬೈ: ಮಗಳಿಗೆ ಮರಾಠಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಹೆತ್ತ ಅಮ್ಮನೇ 6 ವರ್ಷದ ಮಗಳ ಕತ್ತು ಹಿಸುಕಿ ಕೊಂದ ಆಘಾತಕಾರಿ ಘಟನೆ ನವೀ ಮುಂಬೈನಲ್ಲಿ ನಡೆದಿದೆ. ಆರೋಪಿ ಮಹಿಳೆಯು ಇಲ್ಲಿನ ಗುರುಸಂಕಲ್ಪ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು, ಆಕೆಗೆ 6 ವರ್ಷದ ಮಗಳಿದ್ದಳು. ಮಗು ಮಾತನಾಡುವ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಕೇವಲ ಹಿಂದಿ ಬಳಸುತ್ತಿತ್ತು.
ಆದರೆ ಮಗು ಮಾತೃ ಭಾಷೆ ಮರಾಠಿ ಮಾತನಾಡುತ್ತಿಲ್ಲ ಎಂದು ಆಕೆ ಮಗುವನ್ನೇ ಕೊಂದಿದ್ದಾಳೆ.
ಅನುಮಾನ: ಡಿ.23ರಂದು ಮಹಿಳೆ ತನ್ನ ಮಗಳಿಗೆ ಹೃದಯಾಘಾತವಾಗಿದೆ ಎಂದು ಬಿಂಬಿಸಲು ಕತ್ತು ಹಿಸುಕಿ ಉಸಿರುಗಟ್ಟಿಸಿ ಮಗು ನಿತ್ರಾಣಗೊಳ್ಳುವಂತೆ ಮಾಡಿದ್ದಾಳೆ. ಮಗುವಿನ ತಂದೆ ಮನೆಗೆ ಬಂದಾಗ ಪುತ್ರಿ ನಿತ್ರಾಣಗೊಂಡಿದ್ದನ್ನು ಕಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ಮಗು ಮೃತಪಟ್ಟಿದೆ. ಈ ವೇಳೆ ಪೋಷಕರ ಹೇಳಿಕೆ, ಮಗುವಿನ ಸಾವಿನಿಂದ ಅನುಮಾನಗೊಂಡ ಪೊಲೀಸರು ಬಳಿಕ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆಗ ಕೊಲೆಯೆಂದು ಸಾಬೀತಾಗಿದೆ.
ತನಿಖೆ ವೇಳೆ ‘ಮರಾಠಿ ಮಾತನಾಡಲು ಬಾರದಿದ್ದರೆ ಇಂಥ ಮಗುವೇ ಬೇಡ’ ಎಂದು ಮಹಿಳೆ ಹೇಳಿರುವುದನ್ನು ಉಲ್ಲೇಖಿಸಿ ಪೊಲೀಸರು ಹೇಳಿದ್ದಾರೆ. ಆಕೆ ಮಾನಸಿಕ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅದನ್ನೂ ಪರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ