
ಕೇಪ್ ಕೆನವರೆಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಹ್ಯಾಕಾಶ ಯಾನಿಯೊಬ್ಬರನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ತುರ್ತು ಕಾರ್ಯಾಚರಣೆಯೊಂದರಲ್ಲಿ ಯಶಸ್ವಿಯಾಗಿ ಭೂಮಿಗೆ ಮರಳಿ ಕರೆತಂದಿದೆ. ಇದು ನಾಸಾ ಇತಿಹಾಸದಲ್ಲೇ ತುರ್ತು ವೈದ್ಯಕೀಯ ಕಾರಣಗಳಿಗಾಗಿ ಯಾನಿಯೊಬ್ಬರನ್ನು ಭೂಮಿಗೆ ಕರೆತಂದ ಮೊದಲ ಉದಾಹರಣೆಯಾಗಿದೆ.
ಅಮೆರಿಕ, ರಷ್ಯಾ ಮತ್ತು ಜಪಾನ್‌ಗೆ ಸೇರಿದ ನಾಲ್ವರನ್ನು ಯಾನಿಗಳನ್ನು ಹೊತ್ತ ಸ್ಪೇಸ್ ಎಕ್ಸ್ ನೌಕೆ ಪೆಸಿಫಿಕ್ ಸಮುದ್ರದಲ್ಲಿ ಬಂದಿಳಿದಿದೆ. ಆದರೆ ಯಾವ ಯಾನಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ? ಅವರು ಯಾವ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬುದನ್ನು ನಾಸಾ ಬಹಿರಂಗಪಡಿಸಿಲ್ಲ. ಆದರೆ ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ, ಸುರಕ್ಷಿತವಾಗಿದ್ದಾರೆ ಮತ್ತು ಅವರಿಗೆ ಎಲ್ಲಾ ರೀತಿಯಲ್ಲೂ ಆರೈಕೆ ಮಾಡಲಾಗುತ್ತಿದೆ ಎಂದು ನಾಸಾ ಹೇಳಿದೆ.
ಕಳೆದ ಆಗಸ್ಟ್ ತಿಂಗಳಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಕಾರ್ಡ್‌ಮನ್, ಫಿಂಕಲ್, ಜಪಾನ್ ಕಿಮಿಯಾ ಯುಯಿ ಮತ್ತು ರಷ್ಯಾದ ಒಲೆಗ್ ಪ್ಲಾಟೊನೋವ್ ಮುಂದಿನ ಫೆಬ್ರುವರಿವರೆಗೂ ಬಾಹ್ಯಾಕಾಶ ಕೇಂದ್ರದಲ್ಲೇ ಇರಬೇಕಿತ್ತು. ಆದರೆ ಜ.7ರಂದು ನಾಸಾ ಇದ್ದಕ್ಕಿದ್ದಂತೆ ಕಾರ್ಡ್‌ಮನ್ ಮತ್ತು ಫಿಂಕಲ್ ಅವರ ಬಾಹ್ಯಾಕಾಶ ನಡಿಗೆ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು. ಜೊತೆಗೆ ಬಾಹ್ಯಾಕಾಶ ಯಾನಿಗಳು ನಿಗದಿತ ಅವಧಿಗಿಂತ ಮೊದಲೇ ಭೂಮಿಗೆ ಮರಳಲಿದ್ದಾರೆ ಎಂದು ಪ್ರಕಟಿಸಿತ್ತು.
ಇದೀಗ ನಾಲ್ವರು ಯಾತ್ರಿಗಳು ಭೂಮಿಗೆ ಮರಳಿದ ಕಾರಣ, ಬಾಹ್ಯಾಕಾಶ ಕೇಂದ್ರದಲ್ಲಿ ರಷ್ಯಾದ ಇಬ್ಬರು ಮತ್ತು ಅಮೆರಿಕದ ಒಬ್ಬರು ಉಳಿದುಕೊಂಡಂತೆ ಆಗಿದೆ. ಈ ಹಿಂದಿನ ಕಂಪ್ಯೂಟರ್ ಮಾಡೆಲಿಂಗ್ ಊಹೆಯ ಪ್ರಕಾರ ಮೂರೂವರೆ ವರ್ಷದಲ್ಲಿ ಒಮ್ಮೆ ಬಾಹ್ಯಾಕಾಶದಲ್ಲಿ ವೈದ್ಯಕೀಯ ತುರ್ತುಪರಿಸ್ಥಿತಿ ಎದುರಾಗುವ ನಿರೀಕ್ಷೆ ಇತ್ತು. ಆದರೆ ಕಳೆದ 65 ವರ್ಷದಲ್ಲಿ ಒಮ್ಮೆಯೂ ನಾಸಾ ಇಂಥ ಸಮಸ್ಯೆ ಎದುರಿಸಿರಲಿಲ್ಲ.
1985ರಲ್ಲಿ ರಷ್ಯಾದ ಬಾಹ್ಯಾಕಾಶ ಯಾನಿ ವ್ಲಾಡಿಮಿರ್ ವಾಸ್‌ಯುಟಿನ್ ಸಲ್ಯೂಟ್ 7 ಬಾಹ್ಯಾಕಾಶ ಕೇಂದ್ರದಲ್ಲಿ ಗಂಭೀರ ವೈದ್ಯಕೀಯ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಮರಳಿ ಭೂಮಿಗೆ ಕರೆತರಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ