
ಟೆಹರಾನ್: ಇರಾನ್‌ನ ಮೂಲಭೂತವಾದಿ ಹಾಗೂ ದೇಶದ ಪರಮೋಚ್ಚ ನಾಯಕ ಆಯತೋಲ್ಲಾ ಅಲಿ ಖಮೇನಿ ನೇತೃತ್ವದ ಸರ್ಕಾರ ವಿರುದ್ಧ ರಾಜಧಾನಿ ಟೆಹರಾನ್‌ನಲ್ಲಿ ಆರಂಭವಾದ ಪ್ರತಿಭಟನೆ ಇದೀಗ ದೇಶಾದ್ಯಂತ ವ್ಯಾಪಿಸಿದ್ದು, ಭದ್ರತಾಪಡೆಗಳು ಹಾಗೂ ಪ್ರತಿಭಟನಾಕಾರರ ನಡುವಿನ ತಿಕ್ಕಾಟದಲ್ಲಿ 10ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ಮಂದಿಯನ್ನು ಬಂಧಿಸಲಾಗಿದೆ.
ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಸಮುದಾಯದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಹಣದುಬ್ಬರ ಮಿತಿಮೀರಿದ್ದು, ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಕೊನೆಯ ವಾರ ರಾಜಧಾನಿ ಟೆಹರಾನ್‌ನಲ್ಲಿ ವ್ಯಾಪಾರಿಗಳು ಖಮಿನೇನಿ ಸರ್ಕಾರ ವಿರುದ್ಧ ಬೀದಿಗಿಳಿದಿದ್ದರು. ಈ ವೇಳೆ ಭದ್ರತಾಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ತಿಕ್ಕಾಟ ನಡೆದಿತ್ತು. ಇದೀಗ ಪ್ರತಿಭಟನೆ ದೇಶವ್ಯಾಪಿಯಾಗಿದೆ.
ಟೆಹರಾನ್‌ನಲ್ಲಿ ಆರಂಭವಾದ ಈ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ತೀವ್ರ ಸ್ವರೂಪ ಪಡೆದಿದೆ. ‘ಮುಲ್ಲಾ ಸಾಯುವವರೆಗೆ ಈ ನಾಡಿಗೆ ಸ್ವಾತಂತ್ರ್ಯ ಸಿಗಲ್ಲ’, ‘ಖಮೇನಿ ಸಾಯಲಿ’, ‘ಮುಲ್ಲಾಗಳು ತೊಲಗಲಿ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದಾರೆ.
2022ರಲ್ಲೂ ಖಮೇನಿ ಆಡಳಿತ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆದಿತ್ತು. ಹಿಜಾಬ್ ವಿರೋಧಿ ಪ್ರತಿಭಟನೆ ವೇಳೆ 22 ವರ್ಷದ ಮಾಷಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ ಜನ ಬೀದಿಗಿಳಿದು ಸರ್ಕಾರ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಬೃಹತ್ ಪ್ರತಿಭಟನೆ ಆರಂಭವಾಗಿದ್ದು ಇದೇ ಮೊದಲು.
ವಾಷಿಂಗ್ಟನ್: ಇರಾನ್ ಪ್ರತಿಭಟನಾಕಾರರ ಬೆಂಬಲಕ್ಕೆ, ಇರಾನ್ ಸರ್ಕಾರದ ವಿರೋಧಿ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧಾವಿಸಿದ್ದಾರೆ. ಹೀಗಾಗಿ ಇರಾನ್ ಆಂತರಿಕ ಸಂಘರ್ಷವು ಖಮೇನಿ-ಟ್ರಂಪ್ ನಡುವೆ ಜಟಾಪಟಿಗೆ ವೇದಿಕೆ ಆಗುವ ಸಾಧ್ಯತೆ ಇದೆ.
‘ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಗುಂಡಿನದಾಳಿ ನಡೆಸಿದರೆ ನಾವು ಸುಮ್ಮನಿರಲ್ಲ. ಸರ್ಕಾರ ಪ್ರತಿಭಟನಾಕಾರರನ್ನು ಹಿಂಸಾಚಾರದ ಮೂಲಕ ಧಮನಿಸಲು ಹೊರಟರೆ ಅಮೆರಿಕವು ಪ್ರತಿಭಟನಾಕಾರರ ನೆರವಿಗೆ ಬರಲಿದೆ’ ಎಂದು ಎಂದು ಟ್ರಂಪ್ ಅವರು ಇರಾನ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ