
ಬೀಜಿಂಗ್: ಉತ್ತರ ಕೊರಿಯಾದ ಮಹಿಳೆಯರಿಗೆ ಸಂಬಂಧಿಸಿದ ವಿಷಯವೊಂದು ಜಾಗತೀಕಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಉತ್ತರ ಕೊರಿಯಾ ತನ್ನ ದೇಶದ 40 ವರ್ಷ ಮೇಲ್ಪಟ್ಟ ವಿವಾಹಿತ ಮಹಿಳೆರನ್ನು ಚೀನಾಗೆ ಕಳುಹಿಸುತ್ತಿದೆ. ಈ ಹಿಂದೆ ಯುವ ಮತ್ತು ಅವಿವಾಹಿತ ಮಹಿಳೆಯರನ್ನು ಮಾತ್ರ ಚೀನಾಗೆ ಕಳುಹಿಸಲಾಗುತ್ತಿತ್ತು. ಉತ್ತರ ಕೊರಿಯಾದಿಂದ ಚೀನಾಗೆ ಹೋದ ಮಹಿಳೆಯರು ಅಲ್ಲಿಯ ನರಕದಿಂದ ಹೊರಗೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂಬ ವರದಿಗಳು ಮುನ್ನಲೆಗೆ ಬಂದ ಹಿನ್ನೆಲೆ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಈ ಮಹಿಳೆಯರು ಚೀನಾದಲ್ಲಿ ಏನು ಮಾಡ್ತಾರೆ ಎಂದು ನೋಡೋಣ ಬನ್ನಿ.
ಉತ್ತರ ಕೊರಿಯಾದಿಂದ ಚೀನಾಗೆ ಆಗಮಿಸುವ ಸುಮಾರು 40 ರಿಂದ 45 ವರ್ಷದ ಮಹಿಳೆಯರು ಜಿಲಿನ್ ಪ್ರಾಂತ್ಯದಲ್ಲಿರುವ ಗಾರ್ಮೆಂಟ್ ಮತ್ತು ಸಮುದ್ರಾಹಾರ ಸಂಸ್ಕರಣಾ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ. ಈ ಮುಂಚೆ ಜಿಲಿನ್ ಪ್ರಾಂತ್ಯದ ಕಾರ್ಖಾನೆಗಳಲ್ಲಿ ಕಿರಿಯ ಮತ್ತು ಅವಿವಾಹಿತ ಮಹಿಳೆಯರು ಕೆಲಸಕ್ಕೆ ಬರುತ್ತಿದ್ದರು.,ಆದ್ರೆ ಇದೀಗ 40 ವರ್ಷ ಮೇಲ್ಪಟ್ಟ ಮಹಿಳೆಯರ ಸಂಖ್ಯೆ ಏರಿಕೆಯಾಗುತ್ತಿದೆ.
ಕೆಲಸವನ್ನು ಹುಡುಕಿಕೊಂಡು ಬರುವ ಮಹಿಳೆಯರ ಕುಟುಂಬ ಉತ್ತರ ಕೊರಿಯಾದಲ್ಲಿಯೇ ಇರುತ್ತದೆ. ಕೆಲವರು ಚಿಕ್ಕ ಮಕ್ಕಳನ್ನು ಬಿಟ್ಟು ಚೀನಾ ಬಂದು, ಹಲವು ಕಾರಣಗಳಿಂದ ಇಲ್ಲಿಯೇ 3 ರಿಂದ 4 ವರ್ಷ ಉಳಿಯುವಂತಾಗುತ್ತದೆ. ಬಹುತೇಕ ಜನರ ಪಾಸ್‌ಪೋರ್ಟ್ ವಶಕ್ಕೆ ಪಡೆದುಕೊಳ್ಳುವ ಕಾರಣ ಅನಿವಾರ್ಯವಾಗಿ 5 ವರ್ಷಗಳ ಕಾಲ ಚೀನಾದಲ್ಲಿರುವಂತಾಗುತ್ತದೆ. ಈ ಕಾರಣದಿಂದ ತಮ್ಮಿಷ್ಟದಂತೆ ಚೀನಾ ತೊರೆಯಲು ಸಾಧ್ಯವಾಗಲ್ಲ.
ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಮಕ್ಕಳನ್ನು ನೋಡುವ ಆಸೆಯಿಂದ ಯಾವುದೇ ಮಾಹಿತಿ ನೀಡದೇ ಗಾರ್ಮೆಂಟ್‌ನಿಂದ ಹೊರ ಬಂದಿದ್ದರು. ಕಾರ್ಖಾನೆಗೆ ಬಂದಿದ್ದ ಗೂಡ್ಸ್ ಟ್ರಕ್ ಮೂಲಕ ಮಹಿಳೆ ಹೊರ ಬಂದಿದ್ದರು. ಮೂರು ದಿನಗಳ ಬಳಿಕ ಮಹಿಳೆಯನ್ನು ಪತ್ತೆ ಮಾಡಿ, ಮತ್ತೆ ಕಾರ್ಖಾನೆಗೆ ಕರೆದುಕೊಂಡು ಬರಲಾಗಿದೆ. ಚೀನಾದಲ್ಲಿ ಕೆಲಸದ ಅವಧಿ ಮುಕ್ತಾಯದ ಬಳಿಕವಷ್ಟೇ ಮಹಿಳೆಯನ್ನು ಉತ್ತರ ಕೊರಿಯಾಗೆ ಕಳುಹಿಸಲಾಯ್ತು. ಈ ರೀತಿ ಹಲವರು ಕುಟುಂಬ ಸದಸ್ಯರ ಭೇಟಿಗಾಗಿ ಪ್ರತಿದಿನವೂ ಕಣ್ಣೀರು ಹಾಕುತ್ತಿರುತ್ತಾರೆ. ಕುಟುಂಬದ ದೂರ ಉಳಿದು, ಚೀನಾದಲ್ಲಿ ಒಂಟಿಯಾಗುವ ಮಹಿಳೆಯರು ಮಾನಸಿಕ ಖಿನ್ನತೆಗೊಳಗಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಕೊರಿಯಾದ ಮಹಿಳೆಯರನ್ನು ಚೀನಾಗೆ ಬಲವಂತವಾಗಿ ಕಳುಹಿಸುಲಾಗುತ್ತಿದೆಯಾ ಎಂಬ ಪ್ರಶ್ನೆಯೊಂದು ಮೂಡುತ್ತದೆ. ಈ ವಿಷಯದ ಕುರಿತು ಡೈಲಿ ಎನ್‌ಕೆ ಜೊತೆ ಮಾತನಾಡಿರುವ ಮಹಿಳೆಯೊಬ್ಬರು, ಇದಕ್ಕೆ ಕೌಟುಂಬಿಕ ಜವಾಬ್ದಾರಿಗಳು ಕಾರಣ ಎಂದು ಹೇಳುತ್ತಾರೆ. ಈ ಜವಾಬ್ದಾರಿಗಳು ನಮ್ಮನ್ನು ಚೀನಾದಿಂದ ಹೋಗಲು ತಡೆಯುತ್ತವೆ. ಒಂದು ವೇಳೆ ಇಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೆ ಉತ್ತರ ಕೊರಿಯಾದಲ್ಲಿರುವ ಕುಟುಂಬ ಸಮಸ್ಯೆಗಳನ್ನು ಎದುರಿಸುತ್ತದೆ. ಕುಟುಂಬದ ಕಾಳಜಿ ನಮ್ಮನ್ನು ಇಲ್ಲಿರುವಂತೆ ಮಾಡುತ್ತೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ