'ನಮ್ಮ ಷರತ್ತು ಒಪ್ಪಿದ್ರೆ ಮಾತ್ರ ಯುದ್ಧ ಮುಗಿಸ್ತೇವೆ': ಟ್ರಂಪ್‌ ಆರ್ಡರ್‌ಗೆ ಡೋಂಟ್ ಕೇರ್ ಅಂದ ಇರಾನ್‌!

Published : Mar 25, 2026, 08:56 PM IST
Iran

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಇರಾನ್, ಯುದ್ಧ ನಿಲ್ಲಿಸಲು ತನ್ನದೇ ಆದ ಕಠಿಣ ಷರತ್ತುಗಳನ್ನು ವಿಧಿಸಿದೆ. ಹೋರ್ಮುಜ್ ಜಲಸಂಧಿಯ ಮೇಲೆ ಸಾರ್ವಭೌಮತ್ವ ಮತ್ತು ಯುದ್ಧದ ನಷ್ಟಕ್ಕೆ ಪರಿಹಾರ ನೀಡುವುದು ಇರಾನ್‌ನ ಪ್ರಮುಖ ಬೇಡಿಕೆಗಳಾಗಿವೆ. 

ತೆಹ್ರಾನ್ (ಮಾ.25): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮದ ಪ್ರಸ್ತಾವನೆಯನ್ನು "ಅತಿಯಾದದ್ದು" (Excessive) ಎಂದು ಕರೆದಿರುವ ಇರಾನ್, ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು ಎಂಬ ಕಾಲಮಿತಿಯನ್ನು ಟ್ರಂಪ್ ನಿರ್ಧರಿಸಲು ನಾವು ಬಿಡುವುದಿಲ್ಲ ಎಂದು ಗುಡುಗಿದೆ. ತನ್ನದೇ ಆದ ಕಠಿಣ ಷರತ್ತುಗಳನ್ನು ವಿಧಿಸಿರುವ ಇರಾನ್, ಅವು ಈಡೇರಿದರೆ ಮಾತ್ರ ಯುದ್ಧ ನಿಲ್ಲಿಸುವುದಾಗಿ ಘೋಷಿಸಿದೆ.

ಇರಾನ್‌ನ 'ಪ್ರೆಸ್ ಟಿವಿ' ವರದಿ ಪ್ರಕಾರ, ಅಮೆರಿಕ ಕಳುಹಿಸಿದ್ದ ಪ್ರಸ್ತಾವನೆಯನ್ನು ಇರಾನ್ ಪರಿಶೀಲಿಸಿದೆ. ಆದರೆ ಅದರ ನಿಯಮಗಳು ಅಸಮಂಜಸವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಅಮೆರಿಕದ ಪ್ರಸ್ತಾವನೆಗೆ ನಮ್ಮ ಆರಂಭಿಕ ಪ್ರತಿಕ್ರಿಯೆ ಸಕಾರಾತ್ಮಕವಾಗಿಲ್ಲ" ಎಂದು ಹಿರಿಯ ಇರಾನ್ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಇರಾನ್ ವಿಧಿಸಿರುವ ಪ್ರಮುಖ ಷರತ್ತುಗಳೇನು?

ಯುದ್ಧ ನಿಲ್ಲಿಸಲು ಇರಾನ್ ಕೂಡ ಪ್ರಮುಖ ಬೇಡಿಕೆಯನ್ನು ಮುಂದಿಟ್ಟಿದ್ದು, ಹಾಗೇನಾದರೂ ಈ ಬೇಡಿಕೆಯನ್ನು ಒಪ್ಪಿದರೆ ಅಮೆರಿಕ ಹಾಗೂ ಇಸ್ರೇಲ್‌ಗೆ ಈ ಯುದ್ಧದಲ್ಲಿ ಸೋಲು ಎನ್ನುವುದು ಖಚಿತವಾಗಲಿದೆ.

ಇರಾನ್‌ ಷರತ್ತಿನ ಪ್ರಕಾರ, ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ 'ಹೋರ್ಮುಜ್ ಜಲಸಂಧಿ'ಯ ಮೇಲೆ ತನ್ನ ಸಾರ್ವಭೌಮತ್ವವನ್ನು ಮತ್ತು ಕಾನೂನುಬದ್ಧ ಹಕ್ಕನ್ನು ಗುರುತಿಸಬೇಕು. ಅದರೊಂದಿಗೆ ಈ ಯುದ್ಧದ ಹಾನಿಗೆ ಯಾರು ಜವಾಬ್ದಾರರು ಎಂಬುದನ್ನು ನಿರ್ಧರಿಸಬೇಕು ಮತ್ತು ಇರಾನ್‌ಗೆ ಅಗತ್ಯವಾದ ಪರಿಹಾರವನ್ನು ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಭವಿಷ್ಯದಲ್ಲಿ ಮತ್ತೆ ಇಂತಹ ಯುದ್ಧ ನಡೆಯದಂತೆ ಕಾಂಕ್ರೀಟ್ ಭರವಸೆಗಳನ್ನು ನೀಡಬೇಕು ಎಂದು ಇರಾನ್‌ ಹೇಳಿದೆ. ಇದೆಲ್ಲದರೊಂದಿಗೆ, ಇರಾನ್ ಮೇಲೆ ಮಾತ್ರವಲ್ಲದೆ, ಈ ಪ್ರದೇಶದ ಇತರ ಪ್ರತಿರೋಧ ಗುಂಪುಗಳ (Resistance Groups) ಮೇಲಿನ ದಾಳಿಯೂ ನಿಲ್ಲಬೇಕು.

ಅಮೆರಿಕದ 15 ಅಂಶಗಳ ಪ್ರಸ್ತಾವನೆಯಲ್ಲೇನಿತ್ತು?

ಪಾಕಿಸ್ತಾನದ ಮೂಲಕ ಅಮೆರಿಕ ರವಾನಿಸಿದ್ದ 15 ಅಂಶಗಳ ಪ್ರಸ್ತಾವನೆಯಲ್ಲಿ ಈ ಕೆಳಗಿನ ಅಂಶಗಳಿದ್ದವು ಎಂದು ವರದಿಯಾಗಿದೆ. ಇರಾನ್ ಮೇಲಿನ ನಿರ್ಬಂಧಗಳನ್ನು ಭಾಗಶಃ ಸಡಿಲಿಸುವುದು, ಇರಾನ್‌ನ ಕ್ಷಿಪಣಿ ಕಾರ್ಯಕ್ರಮಕ್ಕೆ ಮಿತಿ ಹೇರುವುದು, ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ಕಠಿಣ ಮೇಲ್ವಿಚಾರಣೆಯಲ್ಲಿ ಪರಮಾಣು ಚಟುವಟಿಕೆಗಳನ್ನು ಕಡಿತಗೊಳಿಸುವುದು, ಬದಲಾಗಿ ನಾಗರಿಕ ಪರಮಾಣು ಸಹಕಾರ ಮತ್ತು ಹೋರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಹಡಗು ಸಂಚಾರಕ್ಕೆ ಅವಕಾಶ ನೀಡುವುದು ಹಾಗೂ ಈ ಮಾತುಕತೆಗಳಿಗಾಗಿ ಕನಿಷ್ಠ ಒಂದು ತಿಂಗಳ ತಾತ್ಕಾಲಿಕ ಕದನ ವಿರಾಮ ಘೋಷಿಸುವುದು ಎನ್ನುವುದು ಪ್ರಮುಖವಾಗಿತ್ತು.

ಪಶ್ಚಿಮ ಏಷ್ಯಾದತ್ತ ಧಾವಿಸುತ್ತಿರುವ ಅಮೆರಿಕ ಸೇನೆ

ಒಂದೆಡೆ ಶಾಂತಿ ಮಾತುಕತೆಯ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ಅಮೆರಿಕ ತನ್ನ ಸೇನಾ ಬಲವನ್ನು ಹೆಚ್ಚಿಸುತ್ತಿದೆ. ಸುಮಾರು 1,000 ಅತಿ ವೇಗದ ಪ್ಯಾರಾಟ್ರೂಪರ್ಸ್ (82nd Airborne Division) ಮತ್ತು ಸುಮಾರು 5,000ಕ್ಕೂ ಹೆಚ್ಚು ಮರೀನ್ ಸೈನಿಕರನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲು ಪೆಂಟಗನ್ ನಿರ್ಧರಿಸಿದೆ. ಇವರು ಯುದ್ಧ ಭೂಮಿಯಲ್ಲಿ ಪ್ರಮುಖ ವಾಯುನೆಲೆಗಳನ್ನು ವಶಪಡಿಸಿಕೊಳ್ಳುವಲ್ಲಿ ಪರಿಣಿತರಾಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Iran-US Conflict: ಅಮೆರಿಕ ಜೊತೆ ಮಾತುಕತೆಯೇ ಇಲ್ಲ, ಟ್ರಂಪ್ ಹೇಳಿಕೆ ಸುಳ್ಳು ಯುದ್ಧ ಮುಂದುವರಿಯುತ್ತೆ ಎಂದ ಇರಾನ್
Bangladesh War: 1971ರ ಯುದ್ಧದಲ್ಲಿ ಭಾರತದ ಸಹಾಯವನ್ನು ಬಾಂಗ್ಲಾ ಎಂದಿಗೂ ಮರೆಯಲ್ಲ: ಸಚಿವ ಇಶ್ರಾಕ್ ಹೊಸೈನ್