
ಇರಾನ್‌ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳು ಈಗ ರಕ್ತಪಾತದ ಅಂಚಿಗೆ ಬಂದು ನಿಂತಿವೆ. ತನ್ನ ಅಧಿಕಾರ ಉಳಿಸಿಕೊಳ್ಳಲು ಇರಾನ್‌ನ ಇಸ್ಲಾಮಿಕ್ ಸರ್ಕಾರವು ಪ್ರತಿಭಟನಾಕಾರರ ವಿರುದ್ಧ 'ಮರಣದಂಡನೆ' ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಈ ಘೋಷಣೆಯು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದು, ಅಮೆರಿಕದ ಹಸ್ತಕ್ಷೇಪದ ಭೀತಿಯನ್ನು ಹೆಚ್ಚಿಸಿದೆ.
ಇರಾನ್‌ನ ಅಟಾರ್ನಿ ಜನರಲ್ ಮೊಹಮ್ಮದ್ ಮೊವಾಹೆದಿ ಆಜಾದ್ ಅವರು ಪ್ರತಿಭಟನಾಕಾರರಿಗೆ ಮರಣದಂಡನೆಯ ನೇರ ಎಚ್ಚರಿಕೆ ನೀಡಿದ್ದಾರೆ. 'ಈ ಪ್ರತಿಭಟನಾಕಾರರು ಕೇವಲ ಗಲಭೆಕೋರರಲ್ಲ, ಇವರು 'ಅಲ್ಲಾಹನ ಶತ್ರುಗಳು' (Moharebeh). ಇಸ್ಲಾಮಿಕ್ ಕಾನೂನಿನ ಪ್ರಕಾರ ಇವರಿಗೆ ಮರಣದಂಡನೆಯೇ ಶಿಕ್ಷೆ ಎಂದು ಘೋಷಿಸಿದ್ದಾರೆ. ಪ್ರತಿಭಟನಾಕಾರರಿಗೆ ಸಹಾಯ ಮಾಡುವವರು ಕೂಡ ಇದೇ ರೀತಿಯ ಕಠಿಣ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಸರ್ಕಾರಿ ಟಿವಿಯಲ್ಲಿ ಗುಡುಗಿದೆ.
ಇರಾನ್‌ನ ಪದಚ್ಯುತ ಷಾ ಅವರ ಪುತ್ರ ರೆಜಾ ಪಹ್ಲವಿ ಅವರು ಅಮೆರಿಕದಿಂದಲೇ ಈ ಚಳುವಳಿಗೆ ಹೊಸ ರೂಪ ನೀಡಿದ್ದಾರೆ. 'ಈಗ ಬರಿ ಬೀದಿಗಿಳಿದು ಕೂಗಾಡುವುದಲ್ಲ, ಬದಲಾಗಿ ಇರಾನ್‌ನ ಪ್ರಮುಖ ನಗರಗಳ ಕೇಂದ್ರಗಳನ್ನು ಮತ್ತು ಸರ್ಕಾರಿ ಕಚೇರಿಗಳನ್ನು ಪ್ರತಿಭಟನಾಕಾರರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು' ಎಂದು ಕರೆ ನೀಡಿದ್ದಾರೆ. ಇದು ಇರಾನ್‌ನಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ.
ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ನಿಮ್ಮದೇ ದೇಶದ ಜನರನ್ನು ಕೊಲ್ಲಬೇಡಿ' ಎಂದು ಟೆಹ್ರಾನ್‌ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಆದರೆ, ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರು ಟ್ರಂಪ್ ಎಚ್ಚರಿಕೆಯನ್ನು ಲೆಕ್ಕಿಸದೆ, 'ನಾವು ಹಿಂದೆ ಸರಿಯುವ ಮಾತೇ ಇಲ್ಲ, ಪ್ರತಿಭಟನಾಕಾರರು ಟ್ರಂಪ್ ಅವರನ್ನು ಮೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ. ಇತ್ತ ಇರಾನ್ ಸೇನೆಯು ಸಾರ್ವಜನಿಕ ಆಸ್ತಿ ರಕ್ಷಣೆ ಹೆಸರಲ್ಲಿ ಬೀದಿಗಿಳಿಯಲು ಸಜ್ಜಾಗಿದೆ.
1.4 ಮಿಲಿಯನ್ ತಲುಪಿದ ಕರೆನ್ಸಿ ಕುಸಿತ: ಇತಿಹಾಸದಲ್ಲೇ ದೊಡ್ಡ ಬಿಕ್ಕಟ್ಟು
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಆಡಳಿತವು ಎದುರಿಸುತ್ತಿರುವ ಅತಿದೊಡ್ಡ ಸವಾಲು ಇದಾಗಿದೆ. ಡಿಸೆಂಬರ್ 2025ರ ಅಂತ್ಯದಲ್ಲಿ ಇರಾನ್ ಕರೆನ್ಸಿ ಡಾಲರ್ ಎದುರು 1.4 ಮಿಲಿಯನ್‌ನಷ್ಟು ಕುಸಿತ ಕಂಡಿದ್ದೇ ಈ ಆಕ್ರೋಶಕ್ಕೆ ಮೂಲ ಕಾರಣ. ಸದ್ಯದ ವರದಿಗಳ ಪ್ರಕಾರ, ಪ್ರತಿಭಟನೆಯಲ್ಲಿ 65ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 2,300ಕ್ಕೂ ಹೆಚ್ಚು ಮಂದಿಯನ್ನು ಜೈಲಿಗಟ್ಟಲಾಗಿದೆ. ಇಡೀ ದೇಶದಲ್ಲಿ ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ