
ಕ್ಯಾಲ್ಗರಿ (ಕೆನಡಾ): ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಜಾಲ ವಿಸ್ತರಿಸಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್(Bishnoi Gang) ಕೆನಡಾದಲ್ಲಿ ಮತ್ತೊಮ್ಮೆ ಭೀಕರ ಗುಂಡಿನ ದಾಳಿ ಮಾಡಿ ಸುದ್ದಿಯಾಗಿದೆ. ಕೆನಡಾದ ಕ್ಯಾಲ್ಗರಿಯಲ್ಲಿರುವ ಪ್ರಖ್ಯಾತ 'ಮಾಲ್ವಾ ಟೈರ್ಸ್' ಮಾಲೀಕ ಹರ್‌ಪ್ರೀತ್ ಬ್ರಾರ್ ಅವರ ನಿವಾಸದ ಮೇಲೆ ಗ್ಯಾಂಗ್ ಸದಸ್ಯರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಬಿಷ್ಣೋಯ್ ಗ್ಯಾಂಗ್‌ನ ಶೂಟರ್‌ಗಳಾದ ಅರ್ಜು ಬಿಷ್ಣೋಯ್ ಮತ್ತು ಟೈಸನ್ ಬಿಷ್ಣೋಯ್ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ದಾಳಿಯ ನಂತರ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಉದ್ಯಮಿಗೆ ಭೀಕರ ಎಚ್ಚರಿಕೆ ನೀಡಲಾಗಿದೆ. 'ಹರ್‌ಪ್ರೀತ್ ಬ್ರಾರ್ ನಮ್ಮ ಶತ್ರುಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದಾನೆ, ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದಾನೆ ಮತ್ತು ಅವರ ವಾಹನಗಳನ್ನು ಬುಲೆಟ್ ಪ್ರೂಫ್ ಮಾಡಿಕೊಡುತ್ತಿದ್ದಾನೆ. ಈ ಹಿಂದೆ ನಾವು ಫೋನ್ ಮಾಡಿ ಎಚ್ಚರಿಸಿದಾಗ ಅವನು ತಲೆಮರೆಸಿಕೊಂಡಿದ್ದ. ಈಗ ಅವನ ಮನೆಯ ಮೇಲೆ ದಾಳಿ ಮಾಡುವ ಮೂಲಕ ನೇರ ಎಚ್ಚರಿಕೆ ನೀಡಿದ್ದೇವೆ' ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಿಷ್ಣೋಯ್ ಗ್ಯಾಂಗ್ ತನ್ನ ಪೋಸ್ಟ್‌ನಲ್ಲಿ ಅತ್ಯಂತ ಕ್ರೂರ ಭಾಷೆಯನ್ನು ಬಳಸಿದೆ. 'ಇದು ನಿನಗೆ ಕೊನೆಯ ಎಚ್ಚರಿಕೆ. ನೀನು ಸುಧಾರಿಸಿಕೊಳ್ಳದಿದ್ದರೆ ಮುಂದಿನ ಬಾರಿ ನಿನ್ನ ಮನೆಗೇ ನುಗ್ಗಿ, ನಿನ್ನ ಇಡೀ ಜೀವನದಲ್ಲಿ ನೋಡಿರದಷ್ಟು ಗುಂಡುಗಳನ್ನು ನಿನ್ನ ಎದೆಗೆ ಇಳಿಸುತ್ತೇವೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ, ಈಗ ನಾವು ಕತ್ತು ಸೀಳಲು ಶುರು ಮಾಡುತ್ತೇವೆ. ನಮ್ಮ ಶತ್ರುಗಳನ್ನು ಬೆಂಬಲಿಸುವ ಪ್ರತಿಯೊಬ್ಬರಿಗೂ ಇದೇ ಗತಿ' ಎಂದು ಪೋಸ್ಟ್ ಕೊನೆಯಲ್ಲಿ 'ಜೈ ಶ್ರೀ ರಾಮ್' ಎಂದು ಬರೆದು ಬೆದರಿಕೆ ಹಾಕಲಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆನಡಾದಲ್ಲಿ ಇಂತಹ ಕೃತ್ಯ ಎಸಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಗಾಯಕರು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಈ ಇತ್ತೀಚಿನ ಘಟನೆಯು ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸದ್ಯ ಸ್ಥಳೀಯ ಕೆನಡಾ ಪೊಲೀಸರು ಗುಂಡಿನ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ವೈರಲ್ ಆಗಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ