
ವಾಷಿಂಗ್ಟನ್/ನವದೆಹಲಿ(ಮೇ.17): ಭಾರತವು ಅಮೆರಿಕದ ಕೊರೋನಾ ರೋಗಿಗಳಿಗೆ ನೆರವಾಗಲು ‘ಹೈಡ್ರೋಕ್ಸಿಕ್ಲೋರೋಕ್ವಿನ್’ ಮಾತ್ರೆಗಳನ್ನು ಕೊಟ್ಟು ಸಹಾಯ ಮಾಡಿತ್ತು. ಇದಕ್ಕೆ ‘ಪ್ರತ್ಯುಪಕಾರ’ ಎಂಬಂತೆ ಅಮೆರಿಕವು ಭಾರತಕ್ಕೆ ಮುಂದಿನ 3 ವಾರದಲ್ಲಿ 200 ಮೊಬೈಲ್ ವೆಂಟಿಲೇಟರ್‌ಗಳನ್ನು ಕೊರೋನಾ ಪೀಡಿತರ ಚಿಕಿತ್ಸೆಗೆಂದು ರವಾನಿಸುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ರಾತ್ರಿ ಭಾರತಕ್ಕೆ ವೆಂಟಿಲೇಟರ್ ನೀಡುವ ಘೋಷಣೆ ಮಾಡಿದ್ದಾರೆ. ಆದರೆ ಎಷ್ಟುವೆಂಟಿಲೇಟರ್ ನೀಡಲಾಗುತ್ತದೆ ಎಂದು ಅವರು ಹೇಳಿಲ್ಲ. ಮೂಲಗಳ ಪ್ರಕಾರ, ‘200 ಮೊಬೈಲ್ ವೆಂಟಿಲೇಟರ್‌ಗಳು ಇನ್ನು 3 ವಾರದೊಳಗೆ ಭಾರತಕ್ಕೆ ರಫ್ತಾಗಲಿವೆ. ಪ್ರತಿ ವೆಂಟಿಲೇಟರ್ ಮೌಲ್ಯ ಸುಮಾರು 10 ಲಕ್ಷ ರು.ಗಳು ಒಟ್ಟಾರೆ ಸುಮಾರು 20 ಕೋಟಿ ರು.ಗಳಾಗಬಹುದು. ಸಾಗಣೆ ವೆಚ್ಚ ಪ್ರತ್ಯೇಕ’ ಎಂದು ಅಂದಾಜಿಸಲಾಗಿದೆ.
ಭಾರತಕ್ಕೆ ವೆಂಟಿಲೇಟರ್ ಕೊಡ್ತೀವಿ, ಜತೆಗೂಡಿ ಲಸಿಕೆ ತಯಾರಿಸ್ತೀವಿ: ಟ್ರಂಪ್
ಮೋದಿ ಕೃತಜ್ಞತೆ:
ಭಾರತಕ್ಕೆ ವೆಂಟಿಲೇಟರ್ ಕೊಡುಗೆ ನೀಡುವ ಟ್ರಂಪ್ ನಿರ್ಧಾರವನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ವಿಶ್ವವನ್ನು ಕೊರೋನಾ ಮುಕ್ತ ಮಾಡಲು ದೇಶಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಟ್ರಂಪ್ ಅವರಿಗೆ ಧನ್ಯವಾದ. ಭಾರತ-ಅಮೆರಿಕ ಸ್ನೇಹಕ್ಕೆ ಮತ್ತಷ್ಟುಬಲ ಬರಲಿದೆ’ ಎಂದು ಹರ್ಷಿಸಿದ್ದಾರೆ.
‘ಭಾರತದಲ್ಲಿನ ನಮ್ಮ ಸ್ನೇಹಿತರಿಗೆ ಮೊಬೈಲ್ ವೆಂಟಿಲೇಟರ್‌ಗಳನ್ನು ಕೊಡುಗೆಯಾಗಿ ನೀಡಲು ನನಗೆ ಹೆಮ್ಮೆ ಎನ್ನಿಸುತ್ತದೆ. ನಾನು ಪ್ರಧಾನಿ ಮೋದಿ ಜತೆ ಮಾತನಾಡಿದ್ದೇನೆ. ನಾವಿಬ್ಬರೂ ಸೇರಿ ‘ಅದೃಶ್ಯ ವೈರಿ’ಯನ್ನು (ಕೊರೋನಾ) ಸೋಲಿಸಲಿದ್ದೇವೆ. ನಾವು ಈ ಪಿಡುಗಿನ ಸಂದರ್ಭದಲ್ಲಿ ಭಾರತ ಹಾಗೂ ಮೋದಿ ಜತೆ ನಿಲ್ಲುತ್ತೇವೆ. ಮೋದಿ ನನ್ನ ಉತ್ತಮ ಸ್ನೇಹಿತ’ ಎಂದು ಶುಕ್ರವಾರ ಟ್ರಂಪ್ ಹೇಳಿದ್ದರು. ‘ಈ ವರ್ಷದ ಅತ್ಯಕ್ಕೆ ಕೊರೋನಾ ಸೋಂಕು ಲಸಿಕೆ ದೊರಕುವ ಸಾಧ್ಯತೆ ಇದೆ. ಭಾರತ ಹಾಗೂ ಅಮೆರಿಕದಲ್ಲಿ ಉತ್ತಮ ವಿಜ್ಞಾನಿಗಳು ಇದ್ದು, ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ’ ಎಂದಿದ್ದರು.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ