ಪಾಕ್ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಗಡೀಪಾರು| ಗೂಢಚರ್ಯೆ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಪಾಕಿಗಳು| 24 ತಾಸಲ್ಲಿ ದೇಶ ತೊರೆಯಲು ಕೇಂದ್ರ ತಾಕೀತು
ನವದೆಹಲಿ(ಜೂ.01): ಭಾರತದ ವಿರುದ್ಧ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮೀಷನ್ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳಿಗೆ 24 ತಾಸಿನೊಳಗೆ ದೇಶ ತೊರೆಯಲು ಕೇಂದ್ರ ಸರ್ಕಾರ ಭಾನುವಾರ ತಾಕೀತು ಮಾಡಿದೆ.
ಭಾರತೀಯ ಪ್ರಜೆಯೊಬ್ಬನಿಂದ ಭಾರತದ ಭದ್ರತಾ ನೆಲೆಗಳಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಸಂಗ್ರಹಿಸುತ್ತಿರುವಾಗ ಈ ಅಧಿಕಾರಿಗಳು ಸಾಕ್ಷಿ ಸಮೇತ ದೆಹಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ದಾಖಲೆ ಕೊಟ್ಟವ್ಯಕ್ತಿಗೆ ಭಾರತೀಯ ರುಪಾಯಿಯಲ್ಲಿ ನಗದು ಹಾಗೂ ಐಫೋನ್ ನೀಡುತ್ತಿದ್ದರು. ಪೊಲೀಸರು ಪ್ರಶ್ನಿಸಿದಾಗ ತಾವು ಭಾರತೀಯ ಪ್ರಜೆಗಳು ಎಂದು ವಾದಿಸಿದರು. ಅಲ್ಲದೆ ನಕಲಿ ಆಧಾರ್ ಕಾರ್ಡ್ ನೀಡಿದರು ಎಂದು ಮೂಲಗಳು ತಿಳಿಸಿವೆ.
ವಿಚಾರಣೆಯ ವೇಳೆ ತಾವು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಕಾರ್ಯನಿರ್ವಹಿಸುತ್ತಿರುವ ಸಂಗತಿಯನ್ನು ಬಾಯಿಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬೀಬ್ ಹುಸೇನ್ ಹಾಗೂ ಮುಹಮ್ಮದ್ ತಾಹೀರ್ ಎಂಬ ಈ ಇಬ್ಬರು ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿನ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಈ ನಡುವೆ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬ ಭಾರತ ಆರೋಪ ಆಧಾರರಹಿತ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಇಸ್ಲಾಮಾಬಾದ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.