ಚೀನಾಗೆ ಭಾರತದ ರಫೇಲ್ ರಹಸ್ಯ ಸೋರಿಕೆ ಶಂಕೆ: ಚೀನಿ ಯುದ್ಧವಿಮಾನ ಹೊಗಳಿದ್ದ ಫ್ರೆಂಚ್ ಮಾಜಿ ಪೈಲಟ್ ಬಂಧನ!

Published : Jul 30, 2026, 10:45 PM IST
india navy 40000 crore ngc corvette deal project 75i submarine aip technology rafale marine jets indigenization defense

ಸಾರಾಂಶ

ಭಾರತೀಯ ರಫೇಲ್ ವಿಮಾನಗಳ ವಿರುದ್ಧ ಅಪಪ್ರಚಾರ ನಡೆಸಿದ್ದ ಫ್ರಾನ್ಸ್‌ನ ಮಾಜಿ ನೌಕಾಪಡೆಯ ಪೈಲಟ್ ಪಿಯರೆ-ಹೆನ್ರಿ ಚುಯೆಟ್ ಅವರನ್ನು, ಚೀನಾಕ್ಕೆ ಸೂಕ್ಷ್ಮ ಮಿಲಿಟರಿ ಮಾಹಿತಿ ರವಾನಿಸಿದ ಗೂಢಚರ್ಯೆ ಆರೋಪದ ಮೇಲೆ ಫ್ರೆಂಚ್ ಗೂಢಚಾರ ಸಂಸ್ಥೆ ವಿಚಾರಣೆಗೊಳಪಡಿಸಿದೆ.

ಪ್ಯಾರಿಸ್ (ಜು.30): ಭಾರತೀಯ ವಾಯುಪಡೆಯ ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳ ವಿರುದ್ಧ ಅಪಪ್ರಚಾರ ನಡೆಸಿ, ಚೀನಾ ನಿರ್ಮಿತ ಯುದ್ಧವಿಮಾನಗಳನ್ನು ಹೊಗಳಿದ್ದ ಫ್ರಾನ್ಸ್‌ನ ನೌಕಾಪಡೆಯ ಮಾಜಿ ಪೈಲಟ್ ಪಿಯರೆ-ಹೆನ್ರಿ ಚುಯೆಟ್ (Pierre-Henri Chuet) ಅವರನ್ನು ಚೀನಾಗೆ ಸೂಕ್ಷ್ಮ ಮಿಲಿಟರಿ ಮಾಹಿತಿಗೂಢಚರ್ಯೆ ನಡೆಸಿದ ಆರೋಪದ ಮೇಲೆ ಫ್ರಾನ್ಸ್‌ ಗೂಢಚಾರ ಸಂಸ್ಥೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದೆ.

ಮೇ 2025 ರಲ್ಲಿ ನಡೆದ 'ಆಪರೇಷನ್ ಸಿಂಧೂರ್' ಸಮಯದಲ್ಲಿ ಭಾರತೀಯ ವಾಯುಪಡೆಯು ರಫೇಲ್ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಹೇಳಿಕೆ ನೀಡುವ ಮೂಲಕ ಚುಯೆಟ್ ತೀವ್ರ ವಿವಾದ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೆ, ಚೀನಾ ನಿರ್ಮಿತ J-10C ಮತ್ತು JF-17 ವಿಮಾನಗಳನ್ನು "ರಫೇಲ್ ಕಿಲರ್ಸ್‌" ಎಂದು ಬಣ್ಣಿಸಿದ್ದರು. ಭಾರತೀಯ ವಾಯುಪಡೆ ಬಳಸುವ ಅತ್ಯಂತ ಸುಧಾರಿತ ರಫೇಲ್ ವಿಮಾನಗಳನ್ನು ಫ್ರಾನ್ಸ್‌ನ ದಸಾಲ್ಟ್ ಏವಿಯೇಷನ್ (Dassault Aviation) ಸಂಸ್ಥೆ ತಯಾರಿಸುತ್ತದೆ ಎಂಬುದು ಉಲ್ಲೇಖನೀಯ.

ಫ್ರೆಂಚ್ ತನಿಖಾ ಮಾಧ್ಯಮಗಳಾದ 'ಲೆ ಕಾನಾರ್ಡ್ ಎನ್‌ಚೈನ್' (Le Canard Enchaine) ಮತ್ತು 'ಮೀಡಿಯಾಪಾರ್ಟ್' (Mediapart) ವರದಿಗಳ ಪ್ರಕಾರ, ಪ್ಯಾರಿಸ್‌ನ ಪ್ರಾಸಿಕ್ಯೂಟರ್‌ಗಳು ಚುಯೆಟ್ ಅವರು ಕ್ಲಾಸಿಫೈಡ್‌ ಮಿಲಿಟರಿ ರಹಸ್ಯಗಳನ್ನು ಸಂಗ್ರಹಿಸಿ ಚೀನಾಗೆ ನೀಡಿದ್ದಾರೆ ಎಂಬ ಬಲವಾದ ಅನುಮಾನದ ಮೇಲೆ ದೋಷಾರೋಪ ಹೊರಿಸಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಪ್ರಸ್ತುತ ಬಿಡುಗಡೆ ಮಾಡಲಾಗಿದ್ದು, ಕಠಿಣ ನ್ಯಾಯಾಂಗ ಮೇಲ್ವಿಚಾರಣೆಯೊಂದಿಗೆ ತನಿಖೆಯನ್ನು ಮುಂದುವರಿಸಲಾಗಿದೆ.

ಯಾರೀ ಪಿಯರೆ-ಹೆನ್ರಿ ಚುಯೆಟ್?

ಫ್ರಾನ್ಸ್ ಮತ್ತು ಕೆನಡಾ ದೇಶಗಳ ದ್ವಿಪೌರತ್ವ ಹೊಂದಿರುವ ಚುಯೆಟ್, ಸುಮಾರು 2021 ರವರೆಗೆ ಫ್ರೆಂಚ್ ನೌಕಾಪಡೆಯ ನೌಕಾ ವಿಮಾನಯಾನ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಅವರು ಫ್ರಾನ್ಸ್‌ನ ಏಕೈಕ ಸಕ್ರಿಯ ವಿಮಾನವಾಹಕ ನೌಕೆಯಾದ 'ಚಾರ್ಲ್ಸ್ ಡಿ ಗಾಲೆ'ಯಿಂದ 'ಸೂಪರ್ ಎಟೆಂಡಾರ್ಡ್' ಮತ್ತು 'ರಫೇಲ್ ಎಂ' (Rafale M) ಯುದ್ಧವಿಮಾನಗಳನ್ನು ಹಾರಿಸಿದ ಅನುಭವ ಹೊಂದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಫ್ರೆಂಚ್ ನೌಕಾಪಡೆಯಲ್ಲಿ ಸೇವೆಯಲ್ಲಿದ್ದಾಗಲೇ ಚುಯೆಟ್ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಸೆಪ್ಟೆಂಬರ್ 2018 ಮತ್ತು ಆಗಸ್ಟ್ 2019 ರಲ್ಲಿ ಕನಿಷ್ಠ ಎರಡು ಬಾರಿ ಚೀನಾಗೆ ಪ್ರವಾಸ ಬೆಳೆಸಿದ್ದರು. ದಕ್ಷಿಣ ಆಫ್ರಿಕಾದ ವಿಮಾನಯಾನ ಕಂಪನಿಯೊಂದರ ಮೂಲಕ ಆಯೋಜಿಸಲಾದ ಈ ಪ್ರವಾಸಗಳಲ್ಲಿ, ಅವರು ಚೀನಾದ ಮಿಲಿಟರಿ ಪೈಲಟ್‌ಗಳಿಗೆ ತರಬೇತಿ ಶಿಬಿರಗಳನ್ನು ನಡೆಸಿಕೊಟ್ಟು, ತಾಂತ್ರಿಕ ಮತ್ತು ಕಾರ್ಯಾಚರಣೆಯ ಪ್ರಮುಖ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಜುಲೈ 20, 2026 ರ ವಾರದಲ್ಲಿ ಫ್ರಾನ್ಸ್‌ನ ಪ್ರಮುಖ ಆಂತರಿಕ ಗೂಢಚಾರ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ 'ಡಿಜಿಎಸ್ಐ' (DGSI) ಚುಯೆಟ್ ಅವರ ಮನೆ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ ರಾಮಾಯಣ ಟ್ರೇಲರ್; ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ ಕಿಕ್ಕೇರಿಸುವ ಸಂಗತಿಗಳು ಇವೇ ನೋಡಿ..!
ಟಾಯ್ಲೆಟ್ ಹೋಗ್ಬೇಡಿ, ಕೈ ತೊಳಿಬೇಡಿ, ಸ್ನಾನ ಮಾಡ್ಬೇಡಿ…. ಸರ್ಕಾರ ವಿಚಿತ್ರ ಆದೇಶಕ್ಕೆ ಮಿಚಿಗನ್ ಜನ ಶಾಕ್