Fact Check: ಸಾವಿರಾರು ಹಂದಿಗಳನ್ನು ಜೀವಂತ ಮಣ್ಣು ಮಾಡಿದ ಚೀನಾ!

By Suvarna NewsFirst Published Feb 5, 2020, 9:15 AM IST
Highlights

ಮಾರಣಾಂತಿಕ ಕೊರೋನಾ ವೈರಸ್‌ಗೆ ಚೀನಾ ಬೆಚ್ಚಿ ಬಿದ್ದಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶತ ಪ್ರಯತ್ನ ಮಾಡುತ್ತಿದೆ. ಕೊರೋನಾ ವೈರಸ್‌ ತಡೆಗಟ್ಟಲು ಚೀನಾ ಹಂದಿಗಳನ್ನು ಜೀವಂತ ಮಣ್ಣು ಮಾಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

ಮಾರಣಾಂತಿಕ ಕೊರೋನಾ ವೈರಸ್‌ಗೆ ಚೀನಾ ಬೆಚ್ಚಿ ಬಿದ್ದಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಶತ ಪ್ರಯತ್ನ ಮಾಡುತ್ತಿದೆ. ಈಗಾಗಲೇ 425 ಜನರು ಸಾವನ್ನಪ್ಪಿದ್ದು, 2000 ಜನರಿಗೆ ಸೋಂಕು ಹರಡಿದೆ. ಚೀನಾದಲ್ಲಿ ಮಾತ್ರವಲ್ಲದೆ ನೆರೆಯ ದೇಶಗಳಲ್ಲೂ ಪತ್ತೆಯಾಗುತ್ತಿದೆ.

ಕೊರೋನಾವನ್ನು ಗುಣಪಡಿಸುವ ಮಾಧ್ಯಮಗಳಲ್ಲಿ ಬಹುದೊಡ್ಡ ಚರ್ಚೆಯಾಗುತ್ತಿದೆ. ಈ ನಡುವೆ ಕೊರೋನಾ ವೈರಸ್‌ ತಡೆಗಟ್ಟಲು ಚೀನಾ ಹಂದಿಗಳನ್ನು ಜೀವಂತ ಮಣ್ಣು ಮಾಡುತ್ತಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಜೀವಂತ ಹಂದಿಗಳನ್ನು ಆಳವಾದ ಗುಂಡಿಗೆ ನೂಕಿ ಮಣ್ಣು ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗಿದೆ.

ಇಂಡಿಯಾ ಟುಡೇ ಈ ವಿಡಿಯೋದ ಹಿಂದಿನ ವಾಸ್ತವವನ್ನು ಬಯಲು ಮಾಡಿ, ಇದೊಂದು ಸುಳ್ಳುಸುದ್ದಿ ಎನ್ನುವುದನ್ನು ಸಾಬೀತುಪಡಿಸಿದೆ. ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ಆಗಿರುವ ವಿಡಿಯೋ ಕೊರೋನಾ ವೈರಸ್‌ ಪತ್ತೆಗೂ ಮುನ್ನವೇ ಯುಟ್ಯೂಬ್‌ನಲ್ಲಿ ಅಪ್ಲೋಡ್‌ ಆಗಿರುವುದು ಕಂಡುಬಂದಿದೆ. ಮೂಲ ವಿಡಿಯೋವನ್ನು ಜನವರಿ 11, 2019ರಂದು ಯುಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ. ಇದರಲ್ಲಿ ಈ ವಿಡಿಯೋವನ್ನು ಚೀನಾದ್ದು ಎಂದೇ ಹೇಳಲಾಗಿದೆ. ಆದರೆ ವಾಸ್ತವವಾಗಿ 2018ರಲ್ಲಿ ಪತ್ತೆಯಾದ ಆಫ್ರಿಕನ್‌ ಹಂದಿ ಜ್ವರ ನಿಯಂತ್ರಣಕ್ಕೆ ಮುಂದಾದ ಚೀನಾ ಸರ್ಕಾರ ಆಯ್ದ ಸಾವಿರಾರು ಹಂದಿಗಳನ್ನು ಮಣ್ಣು ಮಾಡಿತ್ತು. ಈ ವಿಡಿಯೋಗೂ ಕೊರೋನಾ ವೈರಸ್‌ಗೂ ಯಾವುದೇ ಸಂಬಂಧ ಇಲ್ಲ. ಅಲ್ಲಿಗೆ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟ.

- ವೈರಲ್ ಚೆಕ್ 

click me!