
ಬ್ರಸಿಲಿಯಾ (ಜು.1): ಭಾರತದಲ್ಲಿ ಇವಿಎಂ ಮೇಲೆ, ಇಲ್ಲಿನ ಚುನಾವಣಾ ವ್ಯವಸ್ಥೆ ಮೇಲೆ ನಮ್ಮ ರಾಜಕೀಯ ನಾಯಕರೇ ಎಷ್ಟೆಲ್ಲಾ ಅಪಾದನೆಗಳನ್ನು ಮಾಡಿದರು ಅನ್ನೋದು ನೆನಪಿದೆಯಲ್ಲ. ಚುನಾವಣಾ ಆಯೋಗ ಹಾಗೆಲ್ಲ ಇಲ್ಲ, ಇದೆಲ್ಲ ಸುಳ್ಳು ಸುದ್ದಿ ಎಂದರೂ, ಇವಿಎಂ ಮೇಲೆ ಮಾಡುವ ಆಪಾದನೆಗಳು ನಿಂತಿಲ್ಲ. ಇಂಥ ಸುಳ್ಳು ಆಪಾದನೆಗಳನ್ನು ಮಾಡಿದ ರಾಜಕಾರಣಿಗಳಿಗೆ ಯಾವ ಶಿಕ್ಷೆ ಕೂಡ ಆಗಿಲ್ಲ. ಆದರೆ, ಇಂಥದ್ದೇ ವಿಚಾರದಲ್ಲಿ ಇಂದು ಬ್ರೆಜಿಲ್ ಬಹಳ ಭಿನ್ನವಾಗಿ ನಿಂತಿದೆ. ದೇಶದ ಚುನಾವಣಾ ವ್ಯವಸ್ಥೆ ಮೇಲೆ ಅನುಮಾನ ಬರುವಂಥ ಆರೋಪಗಳನ್ನು ಮಾಡಿದ್ದ ಕಾರಣಕ್ಕೆ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಜೈರ್ ಬೊಲ್ಸನಾರೋಗೆ 8 ವರ್ಷಗಳ ಚುನಾವಣಾ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಅವರು ಯಾವುದೇ ಕಾರಣಕ್ಕೂ ದೇಶದ ಚುನಾವಣೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವಂತಿಲ್ಲ. ಬ್ರೆಜಿಲ್‌ನ ಸುಪ್ರೀಂ ಎಲೆಕ್ಟ್ರಲ್ ಕೋರ್ಟ್‌ನ 7 ಸದಸ್ಯರ ಪೀಠ 5-2 ಮತಗಳಿಂದ ಬೊಲ್ಸನಾರೋಗೆ ನಿಷೇಧ ಹೇರುವ ತೀರ್ಪು ನೀಡಿದೆ. ಅದರೊಂದಿಗೆ 68 ವರ್ಷದ ಬೊಲ್ಸನಾರೋಗೆ ಮತ್ತೊಮ್ಮೆ ಅಧಿಕಾರದ ಪದವಿಗೇರುವ ಆಸೆ ಕಮರಿ ಹೋದಂತಾಗಿದೆ.
ಕಳೆದ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದ ಚುನಾವಣಾ ವ್ಯವಸ್ಥೆಯನ್ನು ನಿಂದಿಸಿದ್ದು ಮಾತ್ರವಲ್ಲೆ, ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊರಿಸಲಾಗಿತ್ತು. ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿದ್ದ ಬೊಲ್ಸನಾರೋ, ಇವಿಎಂ ಹ್ಯಾಕ್ ಆಗಿದೆ ಇದರಿಂದ ವಂಚನೆಯಾಗಿದೆ ಎಂದು ಆರೋಪ ಮಾಡಿದ್ದರು. ಆ ಮೂಲಕ ಬ್ರೆಜಿಲ್‌ನ ಪ್ರಜಾಪ್ರಭುತ್ವವನ್ನೇ ಟೀಕೆ ಮಾಡಿದ್ದರು. ಇದರ ಕುರಿತಾಗಿ ಕೋರ್ಟ್‌ನಲ್ಲಿ ಹಾಕಿದ್ದ ಕೇಸ್‌ನಲ್ಲಿ ಬೊಲ್ಸನಾರೋ ತಪ್ಪಿತಸ್ಥ ಎಂದು ಕೋರ್ಟ್ ಹೇಳಿದೆ.
ಬೋಲ್ಸನಾರೊ ಅವರ ವಕೀಲರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ. ಅವರ ಹೇಳಿಕೆಗಳು ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅವರು ವಾದಿಸಿದ್ದಾರೆ. 2022ರ ಅಕ್ಟೋಬರ್ 2 ರಿಂದ ಅವರ ನಿಷೇಧ ಶಿಕ್ಷೆ ಜಾರಿಯಾಗಲಿದೆ. ಅದೇ ದಿನ ಬ್ರೆಜಿಲ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಹಾಗೇನಾದರೂ ತೀರ್ಪು ಜಾರಿಯಾದಲ್ಲಿ 2026ರ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡುವಂತಿಲ್ಲ. 2030ರ ಚುನಾವಣೆಗೆ ಸ್ಪರ್ಧೆ ಮಾಡಬಹುದಾಗಿರುತ್ತದೆ. ಅಧ್ಯಕ್ಷೀಯ ಮಾತ್ರವಲ್ಲ 2024 ಹಾಗೂ 2028ರ ಬ್ರೆಜಿಲ್‌ನ ಪಾಲಿಕೆ ಚುನಾವಣೆಗಳಲ್ಲೂ ಅವರು ಸ್ಪರ್ಧೆ ಮಾಡುವಂತಿಲ್ಲ.
ಬೋಲ್ಸನಾರೊ ಈ ನಿರ್ಧಾರವನ್ನು ಟೀಕಿಸಿದ್ದು, ನನ್ನ ಬೆನ್ನಿಗೂ ಚೂರಿ ಹಾಕಲಾಗಿದೆ ಎಂದಿದ್ದಾರೆ. ಅದೇನೇ ಇದ್ದರೂ, ಬ್ರೆಜಿಲ್‌ನಲ್ಲಿ ಬಲಪಂಥೀಯ ರಾಜಕೀಯವನ್ನು ಮುನ್ನಡೆಸಲು ತಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು. 2022ರಲ್ಲಿ ಅವರು ಅಧ್ಯಕ್ಷರಾಗಿದ್ದ ಸಮಯದಲ್ಲಿಯೇ ಮಾಡಿದ ಭಾಷಣದ ಸುತ್ತ ಈ ಕೇಸ್ ಹಾಕಲಾಗದೆ.
ಜುಲೈ 18 ರಂದು ವಿದೇಶದ ರಾಜತಾಂತ್ರಿಕರಿಗೆ ರಾಜಧಾನಿ ಬ್ರಸಿಲಿಯಾದಲ್ಲಿನ ತನ್ನ ನಿವಾಸದಲ್ಲಿ ಔತಣ ಕೂಟ ಏರ್ಪಡಿಸಿದ್ದ ಬಾಲ್ಸನಾರೋ, ದೇಶದ ಚುನಾವಣಾ ವ್ಯವಸ್ಥೆ ಹಾಗೂ ಇವಿಎಂ ಮತಯಂತ್ರಗಳ ಬಗ್ಗೆ ಟೀಕೆ ಮಾಡಿದ್ದರು. ಅವುಗಳನ್ನು ಹ್ಯಾಕ್ ಮಾಡಲಾಗುತ್ತದೆ ಎಂದಿದ್ದರು.
'ಕೊರೋನಾ ಸಣ್ಣ ಜ್ವರ' ಎಂದಿದ್ದ ಬ್ರೆಜಿಲ್ ಅಧ್ಯಕ್ಷರಿಗೆ ವಕ್ಕರಿಸಿದ ವೈರಸ್!
ಬಾಲ್ಸನಾರೋ ಅಂದು ಬ್ರೆಜಿಲ್‌ನಲ್ಲಿ ಚುನಾವಣೆಗಳು ಹೇಗೆ ನಡೆಯುತ್ತದೆ ಎಂದಷ್ಟೇ ಹೇಳಿದ್ದರು. ಆದರೆ, ಚುನಾವಣಾ ವ್ಯವಸ್ಥೆನ್ನು ಅವರು ಟೀಕೆ ಮಾಡಿರಲಿಲ್ಲ ಎಂದು ಅವರ ಪರ ವಕೀರು ತಿಳಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಬಾಲ್ಸನಾರೋ ಹಾಲಿ ಅಧ್ಯಕ್ಷರಾಗಿರುವ ಲೂಯಿಜ್ ಲುಲಾ ಡಾ ಸಿಲ್ವಾಗೆ ಅಲ್ಪ ಅಂತದಲ್ಲಿ ಸೋತಿದ್ದರು. ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಬಾಲ್ಸನಾರೋ ಬೆಂಬಲಿಗರು ಜನವರಿ 8 ರಂದು ಬ್ರೆಜಿಲ್‌ನ ಕಾಂಗ್ರೆಸ್, ಅಧ್ಯಕ್ಷೀಯ ಭವನ ಮತ್ತು ಸುಪ್ರೀಂ ಕೋರ್ಟ್‌ನ ಕಟ್ಟಡದ ಮೇಲೆ ದಾಳಿ ಮಾಡಿದರು.
ದೇಶದ ಅಧ್ಯಕ್ಷರ ಮೀಟಿಂಗ್‌ನಲ್ಲೇ ಬೆತ್ತಲೆ ಸ್ನಾನ, ಇವ್ನ ಮನೆ ಹಾಳಾಗ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ