ವಾಗ್ದಂಡನೆಯಿಂದ ಟ್ರಂಪ್‌ ಪಾರು: ಬಹುಮತ ಗಳಿಸಲು ಡೆಮಾಕ್ರೆಟಿಕ್‌ ಸದಸ್ಯರು ವಿಫಲ!

By Kannadaprabha NewsFirst Published Feb 15, 2021, 8:09 AM IST
Highlights

ವಾಗ್ದಂಡನೆಯಿಂದ ಟ್ರಂಪ್‌ ಪಾರು| ಬಹುಮತ ಗಳಿಸಲು ಡೆಮಾಕ್ರೆಟಿಕ್‌ ಸದಸ್ಯರು ವಿಫಲ| ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಟ್ರಂಪ್‌ ಹಾದಿ ಸುಗಮ| ಅಮೆರಿಕ ಸಂಸತ್‌ ಭವನದಲ್ಲಿ ಹಿಂಸೆಗೆ ಕುಮ್ಮಕ್ಕು ಕೇಸಲ್ಲಿ ಬಚಾವ್‌

ವಾಷಿಂಗ್ಟನ್‌(ಫೆ.15): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಹಿನ್ನೆಲೆಯಲ್ಲಿ ಸಂಸತ್‌ ಭವನ ಕ್ಯಾಪಿಟಲ್‌ನಲ್ಲಿ ಹಿಂಸಾಚಾರ ನಡೆಸಲು ಬೆಂಬಲಿಗರಿಗೆ ಕರೆ ನೀಡಿದ ಆರೋಪದ ಮೇರೆಗೆ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ವಾಗ್ದಂಡನೆಗೆ ಗುರಿಪಡಿಸುವ ಯತ್ನ ವಿಫಲವಾಗಿದೆ.

ಟ್ರಂಪ್‌ ವಿರುದ್ಧದ ವಾಗ್ದಂಡನೆ ನಿಲುವಳಿ ಅಮೆರಿಕ ಸಂಸತ್ತಿನ ಕೆಳಮನೆ ‘ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌’ನಲ್ಲಿ ಜನವರಿಯಲ್ಲಿ ಅಂಗೀಕಾರವಾಗಿತ್ತು. ಇದನ್ನು ಶನಿವಾರ ಸಂಸತ್ತಿನ ಮೇಲ್ಮನೆಯಾಗಿರುವ ಸೆನೆಟ್‌ನಲ್ಲಿ ಮಂಡಿಸಲಾಯಿತು. ಟ್ರಂಪ್‌ರನ್ನು ವಾಗ್ದಂಡನೆಗೆ ಗುರಿಪಡಿಸಲು 100 ಸದಸ್ಯ ಬಲದ ಸೆನೆಟ್‌ನಲ್ಲಿ 3ನೇ 2ರಷ್ಟುಬಹುಮತದೊಂದಿಗೆ ನಿಲುವಳಿ ಪಾಸ್‌ ಆಗಬೇಕಿತ್ತು. ಇದಕ್ಕೆ 67 ಮತಗಳ ಅಗತ್ಯವಿತ್ತು. ಡೆಮಾಕ್ರೆಟಿಕ್‌ ಪಕ್ಷದ 50 ಹಾಗೂ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ 7 ಸದಸ್ಯರಷ್ಟೇ (ಒಟ್ಟು 57) ನಿಲುವಳಿ ಪರವಾಗಿ ಮತ ಚಲಾವಣೆ ಮಾಡಿದರು. ಅಗತ್ಯವಿರುವಷ್ಟುಮತಗಳು ದೊರೆಯದ ಹಿನ್ನೆಲೆಯಲ್ಲಿ ಟ್ರಂಪ್‌ ಅವರಿಗೆ ಸೆನೆಟ್‌ ಕ್ಲೀನ್‌ಚಿಟ್‌ ನೀಡಿತು. ಇದರಿಂದಾಗಿ ಡೆಮಾಕ್ರೆಟಿಕ್‌ ಪಕ್ಷದ ಸದಸ್ಯರು ಮುಖಭಂಗ ಅನುಭವಿಸಿದರು.

ಸೆನೆಟ್‌ನಲ್ಲಿ ವಾಗ್ದಂಡನೆ ನಿಲುವಳಿ ಅಂಗೀಕಾರವಾಗಿದ್ದರೆ, ಟ್ರಂಪ್‌ ಅವರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸದಂತೆ ತಡೆಯೊಡ್ಡುವ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಈಗ ನಿಲುವಳಿಗೆ ಸೋಲಾಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಟ್ರಂಪ್‌ ಅವರಿಗೆ ಹಾದಿ ಸುಗಮವಾಗಿದೆ.

ಅಮೆರಿಕ ಇತಿಹಾಸದಲ್ಲೇ ಎರಡು ಬಾರಿ ವಾಗ್ದಂಡನೆ ಪ್ರಕ್ರಿಯೆಗೆ ಗುರಿಯಾಗುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರಾಗಿದ್ದಾರೆ. ಅಲ್ಲದೆ ಅಧಿಕಾರದಿಂದ ಕೆಳಗಿಳಿದ ಬಳಿಕವೂ ಆ ಪ್ರಕ್ರಿಯೆ ಎದುರಿಸಿದ ಮೊದಲಿಗರೂ ಆಗಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿದ್ದ ಜೋ ಬೈಡೆನ್‌ ಅವರಿಗೆ ಕಳಂಕ ಮೆತ್ತಲು ಉಕ್ರೇನ್‌ ಮೇಲೆ ಒತ್ತಡ ಹೇರಿದ ಆರೋಪ ಸಂಬಂಧ 2020ರಲ್ಲಿ ಟ್ರಂಪ್‌ ವಿರುದ್ಧ ವಾಗ್ದಂಡನೆ ನಿಲುವಳಿ ಮಂಡನೆಯಾಗಿತ್ತು. ಆದರೆ 2020ರ ಫೆ.5ರಂದು ಅದಕ್ಕೆ ಸೆನೆಟ್‌ನಲ್ಲಿ ಸೋಲಾಗಿತ್ತು.

click me!