ಟ್ರಂಪ್ ಅವರನ್ನು ಮರು ಸ್ಥಾಪನೆ ಮಾಡಲಾಗುವುದು ಎಂದು 24 ಗಂಟೆಗಳ ಕಾಲ ನಡೆದ ಪೋಲ್ ಬಳಿಕ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಜನರ ಧ್ವನಿಯೇ ದೇವರ ಧ್ವನಿ ಎಂದು ಲ್ಯಾಟಿನ್ ಭಾಷೆಯಲ್ಲೂ ಮಸ್ಕ್ ಟ್ವೀಟ್ ಮಾಡಿದ್ದರು.
ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಸ್ವಾಧೀನಪಡಿಸಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕಂಪನಿಯಲ್ಲೂ ಸಹ ನಾನಾ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ, ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ಸಹ ಮರುಸ್ಥಾಪನೆಯಾಗಿದೆ. ಈ ಸಂಬಂಧ ಟ್ವಿಟ್ಟರ್‌ನಲ್ಲಿ ಎಲಾನ್ ಮಸ್ಕ್ ಪೋಲ್ ನಡೆಸಿದ್ದು, ಶೇ. 51 ಕ್ಕೂ ಅಧಿಕ ಮಂದಿ ಟ್ವಿಟ್ಟರ್‌ಗೆ ಟ್ರಂಪ್ ವಾಪಸ್ ಬರಬೇಕೆಂದು ಮತ ಹಾಕಿದ ಕಾರಣ ಅಮೆರಿಕ ಮಾಜಿ ಅಧ್ಯಕ್ಷರ ಅಕೌಂಟ್ ಅನ್ನು ಮರು ಸ್ಥಾಪಿಸಲಾಗಿದೆ. ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಲು ಟ್ರಂಪ್ ಘೋಷಿಸಿದ ದಿನಗಳ ಬಳಿಕ ಟ್ವಿಟ್ಟರ್ ಖಾತೆ ಮರು ಸ್ಥಾಪನೆಯಾಗಿದೆ. ಜನವರಿ 2021 ರಲ್ಲಿ ಅವರ ಅಕೌಂಟ್ ಅನ್ನು ಬ್ಯಾನ್ ಮಾಡಲಾಗಿತ್ತು.
ಜನರು ಮಾತನಾಡಿದ್ದು, ಟ್ರಂಪ್ ಅವರನ್ನು ಮರು ಸ್ಥಾಪನೆ ಮಾಡಲಾಗುವುದು ಎಂದು 24 ಗಂಟೆಗಳ ಕಾಲ ನಡೆದ ಪೋಲ್ ಬಳಿಕ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಜನರ ಧ್ವನಿಯೇ ದೇವರ ಧ್ವನಿ ಎಂದು ಲ್ಯಾಟಿನ್ ಭಾಷೆಯಲ್ಲೂ ಮಸ್ಕ್ ಟ್ವೀಟ್ ಮಾಡಿದ್ದರು. ಟ್ವಿಟ್ಟರ್‌ನ ದೈನಂದಿನ 237 ಮಿಲಿಯನ್ ಬಳಕೆದಾರರ ಪೈಕಿ 15 ಮಿಲಿಯನ್‌ಗೂ ಹೆಚ್ಚು ಜನರು ಮತ ಹಾಕಿದ್ದು, ಈ ಪೈಕಿ ಶೇ. 51.8 ರಷ್ಟು ಜನರು ಟ್ರಂಪ್ ಖಾತೆ ಮರು ಸ್ಥಾಪನೆ ಮಾಡುವ ಪರವಾಗಿ ಮತ ಹಾಕಿದ್ದರೆ, ವಿರುದ್ಧವಾಗಿ ಶೇ. 48.2 ಜನರು ಮತ ಹಾಕಿದ್ದರು.
ಇದನ್ನು ಓದಿ: ಅಮೆರಿಕದಲ್ಲಿ ಹಿಂದೂ ಹತ್ಯಾಕಾಂಡ ಸ್ಮಾರಕ, ಟ್ರಂಪ್ ಘೋಷಣೆಗೆ ಭಾರತದಲ್ಲಿ ವಿಪಕ್ಷಗಳು ಕೆಂಡ!
The people have spoken.
Trump will be reinstated.
Vox Populi, Vox Dei. https://t.co/jmkhFuyfkv
ಟ್ರಂಪ್ ಅವರ ಟ್ವಿಟ್ಟರ್ ಖಾತೆ ಅಮಾನತಾದಾಗ 88 ಮಿಲಿಯನ್‌ಗೂ ಹೆಚ್ಚು ಫಾಲೋವರ್‌ಗಳಿದ್ದರು. ಈ ವೇಳೆ ಅವರು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ವಾಗ್ವಾದ, ತಮ್ಮ ನೀತಿಗಳ ಬಗ್ಗೆ ಟ್ವೀಟ್ ಮಾಡುತ್ತಿದ್ದರು. ಈಗ ಅವರ ಖಾತೆ ಮರುಸ್ಥಾಪನೆಯಾದ ಬಳಿಕ ಹಲವರು ಟ್ವೀಟ್ ಮೂಲಕ ಸ್ವಾಗತಿಸಿದ್ದಾರೆ. ವೆಲ್‌ಕಮ್ ಬ್ಯಾಕ್ ಎಂದು ರಿಪಬ್ಲಿಕ್ ಪಕ್ಷದ ಪಾಲ್ ಗೋಸರ್ ಟ್ವೀಟ್ ಮಾಡಿದ್ದರು. ಆದರೆ, ಅವರ ಖಾತೆ ಮರು ಸ್ಥಾಪನೆಯಾದ ಬಳಿಕ ಈವರೆಗೆ ಡೊನಾಲ್ಡ್ ಟ್ರಂಪ್ ಇನ್ನೂ ಯಾವುದೇ ಟ್ವೀಟ್ ಮಾಡಿಲ್ಲ.
ಟ್ವಿಟ್ಟರ್ ಸ್ವಾಧೀನಪಡಿಸಿಕೊಳ್ಳುವ ಮುನ್ನವೂ ಎಲಾನ್ ಮಸ್ಕ್ ಹಲವು ಪೋಲ್‌ಗಳನ್ನು ನಡೆಸಿದ್ದರು. ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾದ ತನ್ನ ಷೇರುಗಳನ್ನು ಮಾರಾಟ ಮಾಡಬೇಕಾ ಎಂದೂ ಟ್ವೀಟಿಗರನ್ನು ಕೇಳಿದ್ದರು. ನಂತರ, 100 ಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.
ಇದನ್ನೂ ಓದಿ: ವೈಟ್ ಹೌಸ್ ದಾಖಲೆ ಕದ್ದ ಆರೋಪ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವಾಸದ ಮೇಲೆ ಎಫ್‌ಬಿಐ ದಾಳಿ!
ಟ್ವಿಟ್ಟರ್‌ಗೆ ವಾಪಸ್ ಬರಲ್ಲ ಎಂದಿದ್ದ ಟ್ರಂಪ್
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟ್ವಿಟ್ಟರ್‌ನಿಂದ ಬ್ಯಾನ್ ಮಾಡಿದ ಬಳಿಕ ಅವರು ತನ್ನ ಸ್ವಂತ ಟ್ರೂಥ್ ಸೋಷಿಯಲ್‌ನಲ್ಲೇ ಇರುತ್ತೇನೆ. ಟ್ವಿಟ್ಟರ್‌ಗೆ ವಾಪಸ್ ಬರಲ್ಲ ಎಂದು ಹೇಳಿದ್ದರು. ಇನ್ನು, ಶನಿವಾರ ಎಲಾನ್ ಮಸ್ಕ್ ಅವರ ಪೋಲ್ ಅನ್ನು ಸ್ವಾಗತಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದರೂ, ಟ್ವಿಟ್ಟರ್‌ಗೆ ವಾಪಸ್ ಬರುವ ಬಗ್ಗೆ ಆಸಕ್ತಿ ತೋರಿಲ್ಲ.
ಎಲಾನ್ ಮಸ್ಕ್ ಪೋಲ್ ಮಾಡಿದ್ದು, ಇದು ಅತ್ಯಂತ ಅಗಾಧವಾಗಿದೆ. ಆದರೆ, ನನ್ನ ಬಳಿ ಟ್ರೂಥ್ ಸೋಷಿಯಲ್ ಎಂಬುದು ಇದೆ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಟ್ವಿಟ್ಟರ್‌ಗೆ ವಾಪಸ್ ಬರುವ ಬಗ್ಗೆ ಕೇಳಿದ್ದಕ್ಕೆ, ‘’ನಾನು ಅದನ್ನು ಎದುರು ನೋಡುವುದಿಲ್ಲ. ಏಕೆಂದರೆ ಅದಕ್ಕೆ ಯಾವುದೇ ಕಾರಣವಿಲ್ಲ’’ ಎಂದೂ ಅವರು ಹೇಳಿದ್ದಾರೆ.
ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್‌ನ ಸಿಇಒ ಸಹ ಆಗಿರುವ ಎಲಾನ್ ಮಸ್ಕ್ ಕಳೆದ ತಿಂಗಳು ಟ್ವಿಟ್ಟರ್ ಅನ್ನು 44 ಬಿಲಿಯನ್ ಡಾಲರ್‌ಗೆ ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ, ನಂತರ ಅರ್ಧದಷ್ಟು ಸಿಬ್ಬಂದಿಯನ್ನು ತೆಗೆದುಹಾಕಿದ್ದಾರೆ.
ಇದನ್ನೂ ಓದಿ: ಎಫ್‌ಬಿಐ ತನ್ನ ನಿವಾಸದ ಮೇಲೆ ರೇಡ್ ಮಾಡಿದೆ: ಡೊನಾಲ್ಡ್ ಟ್ರಂಪ್ ಟೀಕೆ