ಚೀನಾದಲ್ಲೂ ಇದೆ ಘೋರ ಜಾತಿ ಪದ್ಧತಿ, ಎಕ್ಸ್‌ನಲ್ಲಿ ಡ್ರ್ಯಾಗನ್‌ ರಾಷ್ಟ್ರದ ಹುಳುಕು ಬಿಟ್ಟಿಟ್ಟ ಭಾರತದ ನೆಟ್ಟಿಗರು!

Published : Jun 19, 2026, 01:37 PM IST
China In Real

ಸಾರಾಂಶ

ಚೀನಾದಲ್ಲಿ ಜನ್ಮಾಧಾರಿತ ಜಾತಿ ಪದ್ಧತಿ ಇದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಅಲ್ಲಿನ 'ಹುಕೋವ್' ಎಂಬ ನೋಂದಣಿ ವ್ಯವಸ್ಥೆಯು ಜನರನ್ನು ಗ್ರಾಮೀಣ ಮತ್ತು ನಗರ ನಿವಾಸಿಗಳೆಂದು ವಿಭಜಿಸಿ, ಶಿಕ್ಷಣ ಮತ್ತು ಆರೋಗ್ಯದಂತಹ ಅವಕಾಶಗಳಲ್ಲಿ ತಾರತಮ್ಯ ಉಂಟುಮಾಡುತ್ತಿದೆ. 

ನವದೆಹಲಿ (ಜೂ.19): ವಿಶ್ವದ ಮ್ಯಾನುಫ್ಯಾಕ್ಚರಿಂಗ್ ಹೌಸ್ (ಉತ್ಪಾದನಾ ಕೇಂದ್ರ) ಹಾಗೂ ಕಮ್ಯುನಿಸ್ಟ್ ಪಕ್ಷದಿಂದ ಆಳಲ್ಪಡುವ ಸೋಷಿಯಲಿಸ್ಟ್ (ಸಮಾಜವಾದಿ) ರಾಷ್ಟ್ರವಾಗಿರುವ ಚೀನಾದಲ್ಲಿ ಜನ್ಮಜಾತ ಆಧಾರಿತ ಜಾತಿ ಪದ್ಧತಿ ಜಾರಿಯಲ್ಲಿದೆ ಎಂಬ ಗಂಭೀರ ಆರೋಪವೊಂದು ಇಂಟರ್ನೆಟ್‌ನಲ್ಲಿ ಕೇಳಿಬರುತ್ತಿದೆ. ಈ ಪದ್ಧತಿಯು ಅಲ್ಲಿನ ಜನರ ಶಿಕ್ಷಣ, ಆರೋಗ್ಯ ಮತ್ತು ಬದುಕಿನ ಅವಕಾಶಗಳನ್ನು ನಿರ್ಧರಿಸುತ್ತಿದೆ ಎಂದು ಭಾರತದ ನೆಟ್ಟಿಗರು ಚೀನಾದ ವ್ಯವಸ್ಥೆಯ ಚಿತ್ರಣವನ್ನು ನೀಡಿದ್ದಾರೆ. ಹಾಗಾದರೆ ಚೀನಾದಲ್ಲಿ ನಿಜವಾಗಿಯೂ ಜಾತಿ ಪದ್ಧತಿ ಇದೆಯೇ? ಇದರ ಅಸಲಿ ವಾಸ್ತವ ಇಲ್ಲಿದೆ ನೋಡಿ.

ಚೀನಾ ದೇಶವು ಅಧಿಕೃತವಾಗಿ ಸಮಾಜವಾದಿ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಚೀನಾದ ಸುಂದರ ವಿಡಿಯೋಗಳು, ಅಲ್ಲಿನ ಬಹತ್‌ ಕಟ್ಟಡಗಳು ಹಾಗೂ ವ್ಯವಸ್ಥೆಗಳನ್ನು ಪುಂಖಾನುಪುಂಖವಾಗಿ ವೈರಲ್‌ ಮಾಡಲಾಗಿತ್ತು. ಆದರೆ, ಅಲ್ಲಿರುವ ಕೆಲ ಭಾರತೀಯರು ನಿಜವಾದ ಚೀನಾವನ್ನು ಜಗತ್ತಿಗೆ ತೋರಿಸಿದ್ದು ಮಾತ್ರವಲ್ಲದೆ, ಭಾರತದಂತೆ ಚೀನಾದಲ್ಲೂ ಕೂಡ ಹುಟ್ಟಿನಿಂದಲೇ ಜಾತಿ ಪದ್ದತಿ ಅನ್ನೋದು ಇದೆ ಎಂದು ಹೇಳಿದ್ದಾರೆ.

ಭಾರತದ ಎಕ್ಸ್‌ ಯೂಸರ್‌ಗಳು ಚೀನಾದ ಸಾಮಾಜಿಕ ರಚನೆಯನ್ನು ಭಾರತದ ಜಾತಿ ಪದ್ಧತಿಗೆ ಹೋಲಿಸಿ ಪೋಸ್ಟ್‌ಗಳನ್ನು ಹಾಕಲಾರಂಭಿಸಿದ ಮೇಲೆ ಈ ಚರ್ಚೆ ಮತ್ತಷ್ಟು ತೀವ್ರವಾಗಿದೆ. ಒಬ್ಬ ವ್ಯಕ್ತಿಯ ಪ್ರಗತಿಯು ಅವನು ಯಾವ ಜಾತಿಯಲ್ಲಿ ಹುಟ್ಟುತ್ತಾನೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಿದ್ದು, ಇದಕ್ಕೆ ಅವರು ಚೀನಾದ ‘ಹುಕೋವ್’ (Hukou) ಹೌಸ್‌ಹೋಲ್ಡ್ ರಿಜಿಸ್ಟ್ರೇಷನ್ ಸಿಸ್ಟಮ್ ಅನ್ನು ಉದಾಹರಣೆಯಾಗಿ ನೀಡಿದ್ದಾರೆ. ಈ ವ್ಯವಸ್ಥೆಯು ಶಿಕ್ಷಣ, ಆರೋಗ್ಯ, ಕಲ್ಯಾಣ ಯೋಜನೆಗಳು ಹಾಗೂ ಆರ್ಥಿಕ ಬೆಳವಣಿಗೆಯ ಮೇಲೆ ತಾರತಮ್ಯದ ಪ್ರಭಾವ ಬೀರುತ್ತದೆ ಎಂದು ನೇರವಾಗಿ ಆರೋಪಿಸಿದ್ದಾರೆ.

"ಚೀನಾದಲ್ಲಿ ಅತ್ಯಂತ ಕ್ರೂರವಾದ ಜಾತಿ ಪದ್ಧತಿ ಇರುವಂತೆ ತೋರುತ್ತಿದೆ. ಚೀನಾ ತನ್ನ ಜನರಲ್ಲಿ ಸಮಾನತೆ ತರಬೇಕು," ಎಂದು ಮೋಹ್ನಿಶ್ ಎಂಬ ಬಳಕೆದಾರರು ಎಕ್ಸ್‌ನಲ್ಲಿ ಬರೆದಿದ್ದಾರೆ. ಮತ್ತೊಬ್ಬ ಯೂಸರ್‌, "ಚೀನಾದಲ್ಲಿ ಭಾರತದಂತದ್ದೇ ಜಾತಿ ಪದ್ಧತಿ ಇದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅಲ್ಲಿನ ಕೋಟ್ಯಂತರ ರೈತರು ಮೂಲಭೂತ ಸೌಕರ್ಯಗಳಿಗಾಗಿ ಒದ್ದಾಡುತ್ತಿದ್ದು, ಅವರೇ ಆ ದೇಶದ ಅತ್ಯಂತ ಕೆಳಜಾತಿಯಾಗಿದ್ದಾರೆ. ಹುಟ್ಟಿನಿಂದಲೇ ಅವರಿಗೆ ಸಮಾನ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ," ಎಂದು ಪೋಸ್ಟ್ ಮಾಡಿದ್ದಾರೆ.

ಆದರೆ, ಕೆಲವರು ಈ ಹೋಲಿಕೆಯನ್ನು ವಿರೋಧಿಸಿದ್ದು, ಹುಕೋವ್ ವ್ಯವಸ್ಥೆಯನ್ನು ಭಾರತದ ಜಾತಿ ಪದ್ಧತಿಗೆ ಹೋಲಿಸುವುದು ತಪ್ಪು, ಅದು ಕೇವಲ ಆಡಳಿತಾತ್ಮಕ ಮತ್ತು ಆರ್ಥಿಕ ವರ್ಗೀಕರಣವೇ ಹೊರತು ಸಾಮಾಜಿಕ ರಚನೆಯಲ್ಲ ಎಂದು ವಾದಿಸಿದ್ದಾರೆ. ಭಾರತೀಯರು ತಮ್ಮದೇ ಆದ 'ನಾಲ್ಕು ಸ್ತರಗಳ ಪ್ರಾಚೀನ ಸಾಮಾಜಿಕ ವ್ಯವಸ್ಥೆ'ಯ ಕಣ್ಣುಗಳ ಮೂಲಕ ಚೀನಾವನ್ನು ನೋಡುತ್ತಿದ್ದಾರೆ ಎಂದೂ ಹೇಳಿದ್ದಾರೆ.

ಪ್ರಾಚೀನ ಚೀನಾದ ‘ನಾಲ್ಕು ವೃತ್ತಿ ಆಧಾರಿತ’ ಶ್ರೇಣಿ ವ್ಯವಸ್ಥೆ (Shi-Nong-Gong-Shang)

ಭಾರತೀಯರು ಚೀನಾದ ಜಾತಿ ಪದ್ಧತಿ ಬಗ್ಗೆ ಮಾತನಾಡುವಾಗ ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಒಂದನೆಯದು ಪ್ರಾಚೀನ ಚೀನಾದಲ್ಲಿದ್ದ ಸಾಮಾಜಿಕ ಶ್ರೇಣಿ ವ್ಯವಸ್ಥೆ 'ಶಿ-ನಾಂಗ್-ಗಾಂಗ್-ಶಾಂಗ್' (Shi-Nong-Gong-Shang) ಮತ್ತು ಎರಡನೆಯದು ಇಂದಿಗೂ ಚಾಲ್ತಿಯಲ್ಲಿರುವ ಆಧುನಿಕ 'ಹುಕೋವ್' ವ್ಯವಸ್ಥೆ. ಕಮ್ಯುನಿಸ್ಟ್ ಪಕ್ಷದ ಉಗಮಕ್ಕೂ ಮುನ್ನ ಚೀನಾದ ಸಮಾಜವು ಈ ನಾಲ್ಕು ವೃತ್ತಿ ಆಧಾರಿತ ಗುಂಪುಗಳಾಗಿ ವರ್ಗೀಕರಣಗೊಂಡಿತ್ತು:

  • ಶಿ (Shi): ವಿದ್ವಾಂಸರು ಮತ್ತು ಅಧಿಕಾರಿಗಳು (ಸಮಾಜದಲ್ಲಿ ಅತ್ಯುನ್ನತ ಸ್ಥಾನ)
  • ನಾಂಗ್ (Nong): ರೈತರು (ರಾಷ್ಟ್ರದ ಉಳಿವಿಗಾಗಿ ಕೃಷಿ ಅತ್ಯಗತ್ಯ ಎಂದು ಎರಡನೇ ಸ್ಥಾನ)
  • ಗಾಂಗ್ (Gong): ಕುಶಲಕರ್ಮಿಗಳು ಮತ್ತು ಶ್ರಮಿಕರು (ಮೂರನೇ ಸ್ಥಾನ)
  • ಶಾಂಗ್ (Shang): ವರ್ತಕರು ಮತ್ತು ವ್ಯಾಪಾರಿಗಳು (ಲಾಭ ಗಳಿಸುವವರನ್ನು ಕನ್ಫ್ಯೂಶಿಯನ್ ಚಿಂತಕರು ಶಂಕೆಯಿಂದ ನೋಡುತ್ತಿದ್ದರಿಂದ ಕೊನೆಯ ಸ್ಥಾನ)

ಇದು ಇತಿಹಾಸಕಾರರ ಪ್ರಕಾರ, 'ಹಾನ್ ರಾಜವಂಶ'ದ ಅವಧಿಯಲ್ಲಿ (ಕ್ರಿ.ಶ 111) ಅಧಿಕೃತಗೊಂಡಿತು. ಆದರೆ ಇತಿಹಾಸಕಾರರು ಇದನ್ನು ಭಾರತದ ಜಾತಿ ಪದ್ಧತಿಗೆ ಹೋಲಿಸಬಾರದು ಎನ್ನುತ್ತಾರೆ. ಇದು ಕೇವಲ ವೃತ್ತಿ ಆಧಾರಿತ ವರ್ಗೀಕರಣವಾಗಿತ್ತೇ ಹೊರತು ಕಟ್ಟುನಿಟ್ಟಾದ ವಂಶಪಾರಂಪರ್ಯ ಪದ್ಧತಿಯಾಗಿರಲಿಲ್ಲ. ಒಬ್ಬ ವ್ಯಾಪಾರಿಯ ಮಗ ಕೂಡ ಓದಿ, ಸಾಮ್ರಾಜ್ಯಶಾಹಿ ಪರೀಕ್ಷೆಗಳನ್ನು ಪಾಸು ಮಾಡಿ ಉನ್ನತ ಅಧಿಕಾರಿಯಾಗಬಹುದಾಗಿತ್ತು. ಆದ್ದರಿಂದ ಇದು ಭಾರತದ ಪ್ರಾಚೀನ 'ವರ್ಣ ವ್ಯವಸ್ಥೆ'ಗೆ ಹತ್ತಿರವಾಗಿದೆಯೇ ಹೊರತು ಕಟ್ಟುನಿಟ್ಟಾದ ಜಾತಿ ಪದ್ಧತಿಯಲ್ಲ ಎಂದಿದ್ದಾರೆ.

ಕಮ್ಯುನಿಸ್ಟ್ ಯುಗದ ‘ಹುಕೋವ್’ ವ್ಯವಸ್ಥೆ (ಇಂದಿಗೂ ಜಾರಿಯಲ್ಲಿದೆ)

ವೃತ್ತಿ ಆಧಾರಿತ ಹಳೆಯ ವ್ಯವಸ್ಥೆ ಬದಲಾಗಿದ್ದರೂ, ಚೀನಾದಲ್ಲಿ 1950 ರ ದಶಕದಲ್ಲಿ ಜಾರಿಗೆ ತಂದ 'ಹುಕೋವ್' (Hukou) ಹೌಸ್‌ಹೋಲ್ಡ್ ರಿಜಿಸ್ಟ್ರೇಷನ್ ವ್ಯವಸ್ಥೆಯು ಜನರನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ ಮತ್ತು ಹುಟ್ಟಿನ ಆಧಾರದಲ್ಲೇ ಸೌಲಭ್ಯಗಳನ್ನು ನೀಡುತ್ತದೆ. ಇದನ್ನು ಚೀನಾದ ಒಳಗಿನ ‘ಆಂತರಿಕ ಪಾಸ್‌ಪೋರ್ಟ್’ ಎಂದೇ ಕರೆಯಬಹುದು. ಇದು ಒಬ್ಬ ನಾಗರಿಕ ಗ್ರಾಮೀಣ ನಿವಾಸಿಯೇ ಅಥವಾ ನಗರ ನಿವಾಸಿಯೇ ಎಂಬುದನ್ನು ನೋಂದಣಿ ಆಧಾರದ ಮೇಲೆ ನಿರ್ಧರಿಸುತ್ತದೆ. ಇದರ ಆಧಾರದ ಮೇಲೆಯೇ ಅವರಿಗೆ ಶಿಕ್ಷಣ, ಆರೋಗ್ಯ, ವಸತಿ ಮತ್ತು ಸಾಮಾಜಿಕ ಭದ್ರತೆಗಳು ಸಿಗುತ್ತವೆ.

ಲೇಖಕ ಅರವಿಂದನ್ ನೀಲಕಂಠನ್ ತಮ್ಮ 'ಎ ಸೋಷಿಯಲ್ ಧಾರ್ಮಿಕ್ ಹಿಸ್ಟರಿ ಆಫ್ ಇಂಡಿಯಾ' ಪುಸ್ತಕದಲ್ಲಿ, ಮಾವೋ ಝೆಡಾಂಗ್ ಸರ್ಕಾರವು ಈ ಹುಕೋವ್ ವ್ಯವಸ್ಥೆಯನ್ನು ಅತ್ಯಂತ ಕ್ರೂರ ಮತ್ತು ಕಟ್ಟುನಿಟ್ಟಾದ ಸಾಮಾಜಿಕ ಶ್ರೇಣೀಕರಣವಾಗಿ ಬದಲಾಯಿಸಿತು ಎಂದು ವಾದಿಸಿದ್ದಾರೆ. "ಹುಕೋವ್ ವ್ಯವಸ್ಥೆಯು ಒಬ್ಬ ವ್ಯಕ್ತಿಗೆ ಹುಟ್ಟಿನಿಂದಲೇ ಅವನ ಸ್ಥಾನ, ಪಾತ್ರ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ನಿರ್ಧರಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಿತು," ಎಂದು ಅವರು ಬರೆದಿದ್ದಾರೆ.

1959 ರಿಂದ ಈ ಹುಕೋವ್ ಸ್ಥಾನಮಾನವು ವಂಶಪಾರಂಪರ್ಯವಾಯಿತು. ಅಂದರೆ ಗ್ರಾಮೀಣ ಭಾಗದ ರೈತರ ಮಕ್ಕಳು ನಗರಗಳಿಗೆ ವಲಸೆ ಹೋಗಿ ನೆಲೆಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಯಿತು. ಮಾನವಶಾಸ್ತ್ರಜ್ಞರಾದ ಸುಲಾಮಿತ್ ಪಾಟರ್ ಮತ್ತು ಜಾಕ್ ಪಾಟರ್ ಕೂಡ ಇದನ್ನು "ಜಾತಿಯಂತಹ ತಡೆಗೋಡೆ" (Caste-like barrier) ಎಂದು ಕರೆದಿದ್ದಾರೆ.

ವಿದ್ವಾಂಸರು ಇದನ್ನು ‘ನಗರ ಜಾತಿ ಪದ್ಧತಿ’ ಎಂದು ಕರೆಯುವುದೇಕೆ?

ಚೀನಾವನ್ನು ಜಾತಿ ಪದ್ಧತಿಗೆ ಹೋಲಿಸುವುದು ಕೇವಲ ಭಾರತೀಯರಷ್ಟೇ ಅಲ್ಲ. ಹಾಂಕಾಂಗ್‌ನ ಚೀನೀ ವಿಶ್ವವಿದ್ಯಾಲಯದ ಡೀನ್ ಒಬ್ಬರು ಬರೆದ ಪ್ರಬಂಧಕ್ಕೆ "ದಿ ಚೈನೀಸ್ ಅರ್ಬನ್ ಕ್ಯಾಸ್ಟ್ ಸಿಸ್ಟಮ್ ಇನ್ ಟ್ರಾನ್ಸಿಶನ್" (The Chinese Urban Caste System in Transition) ಎಂದೇ ಹೆಸರಿಟ್ಟಿದ್ದಾರೆ!

ಅವರ ಪ್ರಕಾರ, ಸೋವಿಯತ್ ಮಾದರಿಯ ಕೈಗಾರಿಕೀಕರಣವನ್ನು ವೇಗಗೊಳಿಸಲು ಚೀನಾ ಈ ವ್ಯವಸ್ಥೆಯನ್ನು ತಂದಿತ್ತು. ಗ್ರಾಮೀಣ ಭಾಗದ ಕೃಷಿ ಲಾಭವನ್ನು ನಗರಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಯಿತು. ಪರಿಣಾಮವಾಗಿ, ನಗರದ ನಿವಾಸಿಗಳಿಗೆ ಗ್ಯಾರಂಟಿ ಉದ್ಯೋಗ, ಸಬ್ಸಿಡಿ ವಸತಿ, ಆರೋಗ್ಯ ಮತ್ತು ಪೆನ್ಷನ್ ಸಿಕ್ಕರೆ, ಗ್ರಾಮೀಣ ನಿವಾಸಿಗಳು ಇವೆಲ್ಲದರಿಂದ ವಂಚಿತರಾದರು. ಇದು ಚೀನಾದಲ್ಲಿ ಎರಡು ರೀತಿಯ ನಾಗರಿಕತ್ವವನ್ನು ಸೃಷ್ಟಿಸಿತು.

ಅಮೆರಿಕ ಮೂಲದ ‘ಡಿಪ್ಲೊಮ್ಯಾಟಿಕ್ ಕೊರಿಯರ್’ ಪತ್ರಿಕೆಯ ಪ್ರಕಾರ, ಗ್ರಾಮೀಣ ಹುಕೋವ್ ಹೊಂದಿರುವವರು ನಗರಕ್ಕೆ ಬಂದರೂ ಅವರಿಗೆ ಕಡಿಮೆ ಸಂಬಳದ, ಅತ್ಯಂತ ಅಪಾಯಕಾರಿ ಕೆಲಸಗಳನ್ನೇ ನೀಡಲಾಗುತ್ತದೆ. ಇದು ಕೇವಲ ಆರ್ಥಿಕ ಅಸಮಾನತೆಯನ್ನಷ್ಟೇ ಅಲ್ಲದೆ ಸಾಮಾಜಿಕ ತಾರತಮ್ಯಕ್ಕೂ ಕಾರಣವಾಗಿದೆ. ಚೀನಾ ತನ್ನನ್ನು ತಾನೇ "ಎರಡು ಪ್ರತ್ಯೇಕ ರಾಷ್ಟ್ರಗಳಾಗಿ" ವಿಭಜಿಸಿಕೊಂಡಿದೆ ಎಂದು ಈ ಪತ್ರಿಕೆ ವಿಶ್ಲೇಷಿಸಿದೆ.

ಚೀನಾದಲ್ಲಿ ನಿಜವಾಗಿಯೂ ಜಾತಿ ಪದ್ಧತಿ ಇದೆಯೇ?

ಯುರೋಪಿಯನ್ ವಲಸಿಗರು ಭಾರತದ ವೃತ್ತಿ ಆಧಾರಿತ ವ್ಯವಸ್ಥೆಯನ್ನು ನೋಡಲು 'ಕ್ಯಾಸ್ಟ್' (Caste) ಎಂಬ ಪದವನ್ನು ಬಳಸಿದರು. ಹೌದು, 'ಕ್ಯಾಸ್ಟ್' ಎಂಬ ಪದವು ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಪದವಾದ 'ಕ್ಯಾಸ್ಟಾ' (Casta) ದಿಂದ ಬಂದಿದೆ, ಇದರರ್ಥ "ತಳಿ, ಜನಾಂಗ ಅಥವಾ ವಂಶಾವಳಿ". ಇದರ ಮೂಲ ಲ್ಯಾಟಿನ್ ಪದ 'ಕ್ಯಾಸ್ಟಸ್' (Castus) ಎಂದರೆ "ಪವಿತ್ರ ಅಥವಾ ದೋಷಮುಕ್ತ". ಅಂದರೆ ಇಂತಹ ಶ್ರೇಣಿ ವ್ಯವಸ್ಥೆಗಳು ಯುರೋಪಿನಲ್ಲೂ ಇದ್ದವು. ಹಾಗಾದರೆ ಚೀನಾದಲ್ಲಿ ಜಾತಿ ಪದ್ಧತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ನಾವು 'ಜಾತಿ' ಎಂಬುದನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ:

ಹೌದು: 'ಜಾತಿ' ಎಂದರೆ ಹುಟ್ಟಿನ ಆಧಾರದ ಮೇಲೆ ಅವಕಾಶಗಳು, ಶಿಕ್ಷಣ, ಆರೋಗ್ಯ ಮತ್ತು ಸಂಪನ್ಮೂಲಗಳನ್ನು ತಾರತಮ್ಯದಿಂದ ಹಂಚುವ ವ್ಯವಸ್ಥೆ ಎಂದು ನಾವು ಪರಿಗಣಿಸಿದರೆ, ಚೀನಾದ 'ಹುಕೋವ್' ವ್ಯವಸ್ಥೆಯಲ್ಲಿ ಜಾತಿಯ ಪ್ರಮುಖ ಲಕ್ಷಣಗಳು ಕಾಣಿಸುತ್ತವೆ.

ಇಲ್ಲ: ಆದರೆ, 'ಜಾತಿ' ಎಂದರೆ ಕೇವಲ ಹುಟ್ಟಿನ ಸೌಲಭ್ಯವಷ್ಟೇ ಅಲ್ಲದೆ, ಸ್ವಜಾತಿ ವಿವಾಹ (Endogamy), ಧಾರ್ಮಿಕ ಆಚರಣೆಗಳು, ಶುದ್ಧ ಮತ್ತು ಅಶುದ್ಧತೆಯ ಕಲ್ಪನೆಗಳು (Purity and Pollution) ಹಾಗೂ ಆಳವಾದ ಸಾಂಸ್ಕೃತಿಕ ಗುರುತುಗಳನ್ನು ಒಳಗೊಂಡ ಸಾಮಾಜಿಕ ಸಂಸ್ಥೆ ಎಂದು ಪರಿಗಣಿಸಿದರೆ ಚೀನಾದ ಹುಕೋವ್ ವ್ಯವಸ್ಥೆ ಅದಕ್ಕೆ ಖಂಡಿತ ಹೊಂದಿಕೆಯಾಗುವುದಿಲ್ಲ.

ಆದರೆ, ಈ ಹುಕೋವ್ ವ್ಯವಸ್ಥೆಯು ಆಧುನಿಕ ಚೀನಾದಲ್ಲಿ ಅತ್ಯಂತ ದೊಡ್ಡ ಸಾಮಾಜಿಕ ಕಂದಕವನ್ನು ಸೃಷ್ಟಿಸಿದೆ ಎಂಬುದಂತೂ ನಿರಾಕರಿಸಲಾಗದ ಸತ್ಯ. ಅದನ್ನು 'ಜಾತಿ ಪದ್ಧತಿ' ಎಂದು ಕರೆಯಬೇಕೇ ಅಥವಾ 'ಆಡಳಿತಾತ್ಮಕ ವರ್ಗೀಕರಣ' ಎನ್ನಬೇಕೇ ಎಂಬುದು ಇಂದಿಗೂ ಜಾಗತಿಕ ಚರ್ಚೆಯ ವಿಷಯವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

World's Most Expensive Trophies: ಕೈಗೆ ಮೆತ್ತಿಕೊಳ್ಳುವಷ್ಟು ಚಿನ್ನ, ಇದು ವಿಶ್ವದ ಅತ್ಯಂತ ದುಬಾರಿ ಟ್ರೋಫಿಗಳು.
ಹೋರ್ಮುಜ್‌ನಲ್ಲಿ ಕೊನೆಗೂ ಹಡಗು ಓಡಾಟ ಶುರು, ಕರ್ನಾಟಕದ ರಸ್ತೆಗಳಿಗೆ ಡಾಂಬರು ಕೊರತೆ ನಿವಾರಣೆ ನಿರೀಕ್ಷೆ