ಡೆಲ್ಟಾ ಅಪಾಯಕಾರಿ, ಡೆಲ್ಟಾ ಪ್ಲಸ್‌ ವೈರಸ್‌ ಅಲ್ಲ!

By Kannadaprabha NewsFirst Published Jul 2, 2021, 7:23 AM IST
Highlights

* ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾ ರೂಪಾಂತರಿ ಅತ್ಯಂತ ಸಾಂಕ್ರಾಮಿಕ ಮತ್ತು ಅಪಾಯಕಾರಿ

* ಡೆಲ್ಟಾ ಅಪಾಯಕಾರಿ, ಡೆಲ್ಟಾ ಪ್ಲಸ್‌ ವೈರಸ್‌ ಅಲ್ಲ

* ಆ ರೀತಿ ಪರಿಗಣಿಸುವ ಹಂತದಲ್ಲಿಲ್ಲ: ಡಬ್ಲ್ಯುಎಚ್‌ಒ

ಜಿನೆವಾ/ನವದೆಹಲಿ(ಜು.07): ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾರೂಪಾಂತರಿ ಅತ್ಯಂತ ಸಾಂಕ್ರಾಮಿಕ ಮತ್ತು ಅಪಾಯಕಾರಿ. ಆದರೆ ಅದರಿಂದಲೇ ಸೃಷ್ಟಿಯಾಗಿರುವ ಡೆಲ್ಟಾಪ್ಲಸ್‌ ತಳಿ ಇನ್ನೂ ಅಪಾಯಕಾರಿ ಎಂದು ಪರಿಗಣಿಸುವ ಹಂತಕ್ಕೆ ತಲುಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಡೆಲ್ಟಾಪ್ಲಸ್‌ನಿಂದಾಗಿ ಭಾರತದಲ್ಲಿ ಮೂರನೇ ಅಲೆ ಹರಡಬಹುದು ಎಂಬ ಆತಂಕಗಳ ನಡುವೆಯೇ ಹೊರಬಿದ್ದಿರುವ ಈ ಹೇಳಿಕೆ ಸ್ವಲ್ಪ ಸಮಾಧಾನ ತರುವಂತಿದೆ.

"

ಕೋವಿಡ್‌ ಸಂಬಂಧಿ ಜಾಗತಿಕ ವಿದ್ಯಮಾನಗಳ ಕುರಿತ ತನ್ನ ವಾರಾಂತ್ಯದ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ‘ಮುಂದಿನ ದಿನಗಳಲ್ಲಿ ಡೆಲ್ಟಾರೂಪಾಂತರಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಹರಡಿದ ವೈರಸ್‌ ಆಗಿ ಕಾಣಿಸಿಕೊಳ್ಳಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.

‘2021ರ ಜೂ.29ರವರೆಗೆ 96 ದೇಶಗಳು ತಮ್ಮಲ್ಲಿ ಡೆಲ್ಟಾರೂಪಾಂತರಿ ತಳಿ ಪತ್ತೆಯಾಗಿದೆ ಎಂದಿವೆ. ಆದರೆ ಹಲವಾರು ದೇಶಗಳಲ್ಲಿ ಜಿನೋಮ್‌ ಸೀಕ್ವೆನ್ಸ್‌ ಅಧ್ಯಯನದ ತಂತ್ರಜ್ಞಾನವೇ ಇಲ್ಲದಿರುವ ಕಾರಣ, ಡೆಲ್ಟಾವೈರಸ್‌ ಈಗಾಗಲೇ ಇನ್ನಷ್ಟುದೇಶಗಳಿಗೆ ಹಬ್ಬಿರುವ ಸಾಧ್ಯತೆ ಇದೆ. ಜೊತೆಗೆ ಡೆಲ್ಟಾವೈರಸ್‌ಗಿರುವ ಹರಡುವ ತೀವ್ರತೆ ನೋಡಿದಾಗ ಇಂಥ ಸಾಧ್ಯತೆ ಅತ್ಯಂತ ದಟ್ಟವಾಗಿದೆ. ಹೀಗಾಗಿ ಮುಂದಿನ ಕೆಲ ತಿಂಗಳಲ್ಲಿ ಡೆಲ್ಟಾರೂಪಾಂತರಿ ವೈರಸ್‌ ಈಗಾಗಲೇ ವಿಶ್ವದಾದ್ಯಂತ ಇರುವ ಮಾದರಿಯನ್ನು ಹಿಂದಿಕ್ಕಿ, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹರಡಿದ ವೈರಸ್‌ ಆಗಿ ಗುರುತಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ’ ಎಂದು ಡಬ್ಲ್ಯುಎಚ್‌ಒ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ನಡುವೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಡಬ್ಲ್ಯುಎಚ್‌ಒದ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌, ಡೆಲ್ಟಾಪ್ಲಸ್‌ ಅನ್ನು ಅಪಾಯಕಾರಿ ರೂಪಾಂತರಿ ಎಂದು ಇನ್ನೂ ವಿಶ್ವ ಆರೋಗ್ಯ ಸಂಸ್ಥೆ ಪರಿಗಣಿಸಿಲ್ಲ. ಕಾರಣ, ಹಾಗೆ ಪರಿಗಣಿಸಲು ಬೇಕಾದಷ್ಟುಪ್ರಮಾಣದಲ್ಲಿ ಇನ್ನೂ ಸೋಂಕು ಹರಡಿಲ್ಲ ಎಂದು ಹೇಳಿದ್ದಾರೆ.

ಏನು ಕ್ರಮ?:

ಈ ನಡುವೆ ಡೆಲ್ಟಾಹಾವಳಿಯಿಂದ ಪಾರಾಗಲು, ಕೊರೋನಾ ನಿಗ್ರಹಕ್ಕೆ ಆರಂಭದ ದಿನಗಳಿಂದಲೂ ಪಾಲಿಸಿಕೊಂಡು ಬಂದ ಮಾಸ್ಕ್‌, ಸಾಮಾಜಿಕ ಅಂತರ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಲಸಿಕೆ ಪಡೆದುಕೊಳ್ಳುವುದು ಮುಂತಾದ ಕ್ರಮಗಳನ್ನೇ ಮುಂದುವರೆಸಬೇಕಾಗುತ್ತದೆ. ಡೆಲ್ಟಾವೈರಸ್‌ ಅನ್ನು ಅತ್ಯಂತ ಅಪಾಯಕಾರಿ ರೂಪಾಂತರಿ ಎಂದು ಪರಿಗಣಿಸಿರುವ ಕಾರಣ, ನಾವು ಕೋವಿಡ್‌ ಮಾರ್ಗಸೂಚಿಗಳನ್ನು ಇನ್ನಷ್ಟುಹೆಚ್ಚಿನ ಅವಧಿಗೆ ಪಾಲಿಸಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

click me!