* ಜಗದ ಕಣ್ಣು ಮುಚ್ಚಿಸಲು ರಿವರ್ಸ್ ಎಂಜಿನಿಯರಿಂಗ್ ವೈರಸ್ ಬಳಕೆ ಈ ಮೂಲಕ ವೈರಸ್ ಮೊದಲೇ ಇತ್ತು ಎಂಬ ಕಟ್ಟುಕಥೆ ಹೆಣೆದಿದ್ದ ಚೀನಾ
* ಚೀನಾದಲ್ಲೇ ವೈರಸ್ ಸೃಷ್ಟಿಯಾಗಿದ್ದಕ್ಕೆ ಹೊಸ ಸಾಕ್ಷ್ಯ
* ಬಾವಲಿಗಳ ವೈರಸ್ ಸಂಗ್ರಹಿಸಿ, ಕೃತಕ ಪ್ರೊಟಿನ್ ಸೇರಿಸಿ ಕೊರೋನಾಗೆ ಜನ್ಮ ಬ್ರಿಟನ್, ನಾರ್ವೆ ತಜ್ಞ ರ ಸ್ಫೋಟಕ ವರದಿ
ಲಂಡನ್(ಮೇ.31): ಕೊರೋನಾ ವೈರಸ್‌ನ ಮೂಲವನ್ನು ಹುಡುಕುವ ಮತ್ತೊಂದು ಸಮಗ್ರ ಯತ್ನ ಆರಂಭವಾಗಬೇಕು ಎಂಬ ಜಾಗತಿಕ ಬೇಡಿಕೆ ಹೆಚ್ಚುತ್ತಿರುವಾಗಲೇ, ‘ಕೊರೋನಾ ವೈರಸ್ ಹುಟ್ಟಿದ್ದು ಚೀನಾದ ವುಹಾನ್ ಪ್ರಯೋಗಾಲಯದಿಂದ. ಅದರಲ್ಲಿ ಅನುಮಾನವೇ ಬೇಡ. ಗೇನ್ ಆಫ್ ಫಂಕ್ಷನ್ ಯೋಜನೆ ಮೂಲಕ ಅತ್ಯಂತ ದುರ್ಬಲವಾ ಗಿದ್ದ ವೈರಸ್‌ಗೆ, ಕೃತಕವಾಗಿ ಮಾರಕ ಅಂಶಗಳನ್ನು ಸೇರಿಸಲಾಗಿದೆ. ಅದನ್ನು ಜಾಗತಿಕ ಪಿಡುಗಿನ ವೈರಸ್ ಆಗಿ ಬದಲಾಯಿಸಲಾಗಿದೆ’ ಎಂದು ಇಬ್ಬರು ಸಂಶೋಧಕರು ಹೇಳಿದ್ದಾರೆ.
ಜೊತೆಗೆ, ‘ಪಿಡುಗು ಹಬ್ಬಿದ ಮೇಲೆ ಅದೇ ವೈರಸ್ ಬಳಸಿಕೊಂಡು ರಿವರ್ಸ್ ಎಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಹೊಸ ವೈರಸ್ ಸೃಷ್ಟಿಸಲಾಗಿದೆ. ಈ ಮೂಲಕ ಕೊರೋನಾಗೆ ಪ್ರಾಕೃತಿಕ ಪೂರ್ವಜರು ಇದ್ದರು ಎಂಬಕಥೆಯನ್ನು ಚೀನಾ ವಿಜ್ಞಾನಿಗಳು ಹೆಣೆದಿದ್ದಾರೆ. ವಾಸ್ತವವಾಗಿ ಕೊರೋನಾ ವೈರಸ್‌ಗೆ ಪ್ರಾಕೃತಿಕ ಪೂರ್ವಜರೇ ಇಲ್ಲ’ ಎಂದು ಬ್ರಿಟನ್‌ನ ಆ್ಯಂಗಸ್ ಡಾಲ್ಜೆಲಿಶ್, ನಾರ್ವೆಯ ಡಾ. ಬಿರ್ಗೆರ್ ಸೊರೇನ್ ಸೇನ್ ಸಿದ್ಧಪಡಿಸಿರುವ ಸ್ಫೋಟಕ ವರದಿ ಹೇಳಿದೆ.
ವರದಿ ಹೇಳಿದ್ದೇನು?:
ವುಹಾನ್ ಪ್ರಯೋಗಾಲಯದ ಕೆಲ ಸಂಶೋಧಕರು ಅಮೆರಿಕದ ಕೆಲ ವಿವಿಗಳ ಸಹಯೋಗದಲ್ಲಿ ‘ಗೇನ್ ಆಫ್ ಫಂಕ್ಷನ್’ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು. ಇದು ಯಾವುದೇ ವೈರಸ್ ಅನ್ನು ಕೃತಕವಾಗಿ ಬದಲಾಯಿಸುವ ಮೂಲಕ ಅದನ್ನು ಹೆಚ್ಚು ಅಪಾಯಕಾರಿಯನ್ನಾಗಿ ಮಾಡುವ ಯೋಜನೆಯಾಗಿತ್ತು. ಆದರೆ ಇದನ್ನು ಅಮೆರಿಕ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ನಿಷೇಧಿಸಿದ್ದರು. ಆದರೆ ಈ ಯೋಜನೆಯಲ್ಲಿ ಭಾಗಿಯಾಗಿದ್ದ ಕೆಲ ಸಂಶೋಧಕರು, ಚೀನಾದ ಗುಹೆಗಳಲ್ಲಿ ಸಿಗುವ ಬಾವಲಿಗಳಲ್ಲಿನ ಅಷ್ಟೇನು ಅಪಾಯಕಾರಿಯಲ್ಲದ ಕೊರೋನಾ ವೈರಸ್ ಅನ್ನು ಪ್ರಯೋಗಾಲಯದಲ್ಲಿ ಸಂಗ್ರಹಿಸಿದರು.
ಅದರಲ್ಲಿನ ಪ್ರೊಟಿನ್‌ಗಳಿಗೆ ತಾವು ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ ಪ್ರೊಟಿನ್‌ಗಳನ್ನು ಜೋಡಿಸಿದರು. ಈ ಮೂಲಕ ಅದು ಮತ್ತಷ್ಟು ಅಪಾಯಕಾರಿಯಾಗುವಂತೆ ಮಾಡಿದರು ಎಂದು ಇಬ್ಬರು ಸಂಶೋಧಕರು ತಮ್ಮ 22 ಪುಟಗಳ ವರದಿಯಲ್ಲಿ ಆರೋಪಿಸಿದ್ದಾರೆ. ಜಗದ ಕಣ್ಣಿಗೆ ಮಂಕುಬೂದಿ: ಇದೀಗ ಇಡೀ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್ ಗೆ ಯಾವುದೇ ಪ್ರಾಕೃತಿಕ ಪೂರ್ವಜರು ಇಲ್ಲ. ಇದು ಗೊತ್ತಾದರೆ, ತಮ್ಮ ಮೇಲೆ ಸಂಶಯ ಬರಬಹುದು ಎಂಬುದು ಚೀನಾ ವಿಜ್ಞಾನಿಗಳಿಗೆ ಗೊತ್ತಿತ್ತು. ಹೀಗಾಗಿಯೇ ತಾವು ಕೃತಕವಾಗಿ ಮಾರ್ಪಡಿಸಿದ ಕೊರೋನಾ ವೈರಸ್ ಇಡೀ ಜಗತ್ತಿಗೆ ಹಬ್ಬಿದ ಬಳಿಕ ಅದೇ ವೈರಸ್ ಅನ್ನು ಬಳಸಿಕೊಂಡು ರಿವರ್ಸ್ ಎಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಹೊಸ ತಳಿಯ ವೈರಸ್ ಸೃಷ್ಟಿಸಿದರು. ಈ ಮೂಲಕ ಗೇನ್ ಆಫ್ ಫಂಕ್ಷನ್ ಯೋಜನೆಯಡಿ ಸೃಷ್ಟಿಯಾದ ಮಾರ್ಪಾಡಾದ ವೈರಸ್‌ಗೆ ‘ಪ್ರಾಕೃತಿಕ ಪೂರ್ವಜರು’ ಇದ್ದಾರೆ ಎಂದು ತೋರಿಸುವ ಯತ್ನ ಮಾಡಿದರು ಎಂದು ವರದಿಯಲ್ಲಿ ಹೇಳಲಾಗಿದೆ.
ವಂಚನೆ ಪತ್ತೆ ಹೇಗೆ?: ಕೊರೋನಾ ವೈರಸ್‌ನ ಮಾದರಿಯ ಜಾಡುಹಿಡಿದ ವಿಜ್ಞಾನಿಗಳಿಗೆ ಅಚ್ಚರಿಯೊಂದು ಕಂಡಿತ್ತು. ವೈರಸ್‌ನ ಪೊ್ರೀಟಿನ್‌ಗಳಲ್ಲಿದ್ದ 4 ಅಮಿನೋ ಆ್ಯಸಿಡ್ ಪಾಸಿಟಿವ್ ಚಾರ್ಜ್ ಆಗಿದ್ದವು. ಇದು ಮಾನವನ ದೇಹದಲ್ಲಿ ನೆಗೆಟಿವ್ ಚಾರ್ಜ್ ಆಗಿರುವ ಭಾಗಗಳನ್ನು ಬಿಗಿಯಾಗಿ ಹಿಡಿದಿಡಬಲ್ಲ ಸಾಮರ್ಥ್ಯ ಹೊಂದಿದ್ದವು. ಪ್ರಾಕೃತಿಕವಾಗಿ ಉದ್ಭವವಾಗುವ ಜೀವಿಗಳಲ್ಲಿ ಈ ಅಮಿನೋ ಆ್ಯಸಿಡ್‌ಗಳು ಒಂದರ ಪಕ್ಕ ಒಂದರಂತೆ 3 ಇರುವುದು ಬಲು ಅಪರೂಪ. ಅದರಲ್ಲೂ 4 ಅಮಿನೋ ಆ್ಯಸಿಡ್ ಒಟ್ಟಿಗೆ ಇರುವುದು ಅತ್ಯಂತ ಅಪರೂಪವೇ ಸರಿ. ಭೌತ ವಿಜ್ಞಾನದ ಅನ್ವಯ 4 ಅಮಿನೋ ಆ್ಯಸಿಡ್ ಒಟ್ಟಿಗೆ ಇರುವುದು ಸಾಧ್ಯವೇ ಇಲ್ಲ. ಹೀಗಿರುವಾಗ ಕೊರೋನಾ ವೈರಸ್‌ನಲ್ಲಿ ಅದು ಹೀಗೆ ಇದೆ ಎಂದಾದಲ್ಲಿ ನೀವು ಅದನ್ನು ಕೃತಕವಾಗಿ ಉತ್ಪಾದಿಸಿರಬೇಕು. ಹೀಗಾಗಿಯೇ ಈ ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಇದಕ್ಕೆ ಪೂರಕವೆಂಬಂತೆ ಇಂಥ ಸಾಧ್ಯತೆ ಬಗ್ಗೆ ಮಾತನಾಡಲು ಮುಂದಾಗಿದ್ದ ಹಲವು ಚೀನಾ ವಿಜ್ಞಾನಿಗಳು ದಿಢೀರನೆ ನಾಪತ್ತೆಯಾದರು ಎಂದು ವರದಿಯಲ್ಲಿ ಹೇಳಲಾಗಿದೆ
ವರದಿಯಲ್ಲಿ ಏನಿದೆ?
* ಯಾವುದೇ ವೈರಸ್ ಅನ್ನು ಕೃತಕವಾಗಿ ಬದಲಿಸುವ ಸಂಶೋಧನೆ ನಡೆಸಿದ್ದ ಚೀನಾದ ವುಹಾನ್ ಲ್ಯಾಬ್
* ಸಂಶೋಧನೆಯಲ್ಲಿ ಚೀನಾ ಜತೆಗೆ ಅಮೆರಿಕದ ಕೆಲ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಕೂಡ ಭಾಗಿ
* ‘ಗೇನ್ ಆಫ್ ಫಂಕ್ಷನ್’ ಎಂಬ ಈ ಯೋಜನೆಗೆ ತಡೆಯೊಡ್ಡಿದ್ದ ಅಮೆರಿಕ ಮಾಜಿ ಅಧ್ಯಕ್ಷ ಒಬಾಮಾ
* ಆದರೂ ಕೆಲ ಸಂಶೋಧಕರಿಂದ ಚೀನಾ ಗುಹೆ ಗಳಲ್ಲಿನ ಬಾವಲಿಯಲ್ಲಿನ ಕೊರೋನಾ ಸಂಗ್ರಹ
* ಪ್ರಯೋಗಾಲಯದಲ್ಲಿ ಅದಕ್ಕೆ ಕೃತಕವಾಗಿ ಸೃಷ್ಟಿಸಿದ ಪೊ್ರೀಟಿನ್ ಜೋಡಿಸಿದ ವಿಜ್ಞಾನಿಗಳು
* ಇದರಿಂದ ಕೊರೋನಾ ವೈರಸ್ ಮತ್ತಷ್ಟು ಅಪಾಯ ಕಾರಿ. ಬಳಿಕ ಸೋರಿಕೆ. ಜಗತ್ತಿಗೇ ಕಂಟಕ
ಗೊತ್ತಾಗಿದ್ದು ಹೇಗೆ?
* ಚೀನಾದಲ್ಲಿ ವೈರಸ್ ಸೃಷ್ಟಿಯಾಗಿದ್ದು ಅಮಿನೋ ಆ್ಯಸಿಡ್ ಸಂಶೋಧನೆಯಿಂದ ಪತ್ತೆ
* ಜೀವಿಗಳಲ್ಲಿ ಅಮಿನೋ ಆ್ಯಸಿಡ್ ಒಂದರ ಪಕ್ಕ ಒಂದರಂತೆ 3 ಇರುವುದು ಅಪರೂಪ
* ಭೌತ ವಿಜ್ಞಾನದ ಅನ್ವಯ 4 ಅಮಿನೋ ಆ್ಯಸಿಡ್ ಒಟ್ಟಿಗೇ ಇರುವುದು ಸಾಧ್ಯವಿಲ್ಲ
* ಆದರೆ ಕೊರೋನಾ ವೈರಾಣುವಿನಲ್ಲಿ 4 ಅಮಿನೋ ಆ್ಯಸಿಡ್ ಒಟ್ಟಿಗೇ ಇದ್ದವು
* ಹೀಗಾಗಿ ಆ ವೈರಾಣು ಚೀನಾ ಲ್ಯಾಬ್‌ನಲ್ಲಿ ಸೃಷ್ಟಿಯಾಗಿದೆ ಎಂಬುದಕ್ಕೆ ಅನುಮಾನ ಬೇಡ
* ಬ್ರಿಟನ್, ನಾರ್ವೆಯ ಇಬ್ಬರು ವಿಜ್ಞಾನಿಗಳ 22 ಪುಟಗಳ ವರದಿಯಲ್ಲಿ ವಾದ