
ವಾಷಿಂಗ್ಟನ್: ಸುಳ್ಳು ಸುದ್ದಿಗಳ ಪ್ರಸಾರ ಮಾಡಿದ್ದಾರೆಂದು ಕಾರಣ ನೀಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಎನ್‌ಎನ್, ಎಂಎಸ್ ನೌ ಮತ್ತು ಪೊಲಿಟಿಕೊ ಮಾಧ್ಯಮ ಸಂಸ್ಥೆಗಳಿಗೆ ಶ್ವೇತಭವನಕ್ಕೆ ನಿಷೇಧ ಹೇರಿದ್ದಾರೆ. ಆದರೆ ಇದರ ವಿರುದ್ಧ ಈ 3 ಮಾಧ್ಯಮ ಸಂಸ್ಥೆಗಳು ಕೋರ್ಟ್‌ನಲ್ಲಿ ದಾವೆ ಹೂಡುವುದಕ್ಕೆ ನಿರ್ಧರಿಸಿವೆ. ಟ್ರಂಪ್ ನಿರ್ಬಂಧ ಹಿನ್ನೆಲೆಯಲ್ಲಿ 3 ಸುದ್ದಿ ವಾಹಿನಿಗಳ ವರದಿಗಾರರಿಗೆ ಶ್ವೇತಭವನ ಪ್ರವೇಶ ನಿರಾಕರಿಸಲಾಗಿದೆ. ಇದನ್ನು ಪ್ರಶ್ನಿಸಿರುವ ಈ ಮಾಧ್ಯಮಗಳು, ‘ಪ್ರಶ್ನಿಸದೆ ಬಿಟ್ಟರೆ, ಇದು ಪತ್ರಿಕಾ ಸ್ವಾತಂತ್ರ್ಯ ಮತ್ತು ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾದ ಸ್ವತಂತ್ರ ಪತ್ರಿಕೋದ್ಯಮದಕ್ಕೆ ಬೆದರಿಕೆಯಾಗಿಯಾಗುತ್ತದೆ’ ಎಂದಿವೆ.
ಅಮೆರಿಕದ ಮೂರು ಪ್ರಮುಖ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಸುಪ್ರೀಂ ಸಂವಿಧಾನದ 'ಮೊದಲ ತಿದ್ದುಪಡಿ'ಯಡಿ ಬೃಹತ್ ಕಾನೂನು ಸಮರ ಸಾರಿವೆ. ತಮ್ಮ ವಿರುದ್ಧ ವರದಿ ಮಾಡುತ್ತಿವೆ ಎಂಬ ಕಾರಣಕ್ಕೆ ಪ್ರವೇಶ ನಿರ್ಬಂಧಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ಪ್ರಶ್ನಿಸಿ ಸಿಎನ್‌ಎನ್ (CNN), ಎಂಎಸ್ ನೌ (MS NOW) ಹಾಗೂ ಪೊಲಿಟಿಕೊ (Politico) ಸಂಸ್ಥೆಗಳು ವಾಷಿಂಗ್ಟನ್ ಡಿಸಿ ಜಿಲ್ಲಾ ನ್ಯಾಯಾಲಯದಲ್ಲಿ ಜಂಟಿಯಾಗಿ ಫೆಡರಲ್ ದಾವೆ ಹೂಡಿವೆ.
ಶುಕ್ರವಾರದಂದು ಈ ನಿರ್ಧಾರವನ್ನು ಪ್ರಕಟಿಸಿದ್ದ ಟ್ರಂಪ್, ನಮ್ಮ ಪರವಾಗಿ ಇಲ್ಲದ ಅಥವಾ ತಪ್ಪು ಕಥೆಗಳನ್ನು ಬರೆಯುವ ಮಾಧ್ಯಮ ಪ್ರತಿನಿಧಿಗಳನ್ನು ಜನರ ಆಸ್ತಿಯಾದ ಶ್ವೇತಭವನದೊಳಗೆ ಬಿಡಲು ನಾನು ಬದ್ಧನಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ, ಶನಿವಾರದಂದು ಶ್ವೇತಭವನದ ವರದಿಗಾರಿಕೆಗೆ ಆಗಮಿಸಿದ್ದ ಎಂಎಸ್ ನೌ ಪ್ರತಿನಿಧಿ ಅಕೈಲಾ ಗಾರ್ಡ್ನರ್, ಸಿಎನ್‌ಎನ್‌ನ ಬೆಟ್ಸಿ ಕ್ಲೈನ್ ಮತ್ತು ಪೊಲಿಟಿಕೊದ ಚೆಯೆನ್ನೆ ಹ್ಯಾಸ್ಲೆಟ್ ಅವರನ್ನು ಯುಎಸ್ ಸೀಕ್ರೆಟ್ ಸರ್ವೀಸ್ ಸಿಬ್ಬಂದಿ ತಡೆದು, ಅವರ ಪತ್ರಿಕಾ ಪಾಸ್‌ಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಸುದ್ದಿ ಸಂಸ್ಥೆಗಳ ದೂರದರ್ಶನ ಕ್ಯಾಮೆರಾ ಹಾಗೂ ಲೈವ್ ಉಪಕರಣಗಳನ್ನು ಪ್ರಸಾರ ಕೇಂದ್ರಗಳಲ್ಲಿ ಬಳಸುವುದನ್ನು ತಡೆಯಲಾಯಿತು.
ಅಧ್ಯಕ್ಷರ ಈ ಏಕಪಕ್ಷೀಯ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಬಾಗಿಲು ತಟ್ಟಿರುವ ಮಾಧ್ಯಮಗಳು, ಈ ನಿಷೇಧವು ಸಂವಿಧಾನದ ಮೊದಲ ತಿದ್ದುಪಡಿ ಮತ್ತು ಕಾನೂನಿನ ಸೂಕ್ತ ಪ್ರಕ್ರಿಯೆಯ ಸಿದ್ಧಾಂತಕ್ಕೆ ಎಸಗಿದ ನೇರ ಸವಾಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಜಂಟಿ ಪ್ರಕಟಣೆಯಲ್ಲಿ ಮಾಧ್ಯಮ ಸಂಸ್ಥೆಗಳು, ಯಾವ ಸುದ್ದಿ ಪ್ರಕಟವಾಗಬೇಕು ಅಥವಾ ಯಾವುದು ಪ್ರಸಾರವಾಗಬಾರದು ಎಂಬುದನ್ನು ಸರ್ಕಾರವೇ ನಿರ್ಧರಿಸಲು ಸಾಧ್ಯವಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ಪತ್ರಕರ್ತರ ಮಾನ್ಯತೆ ರದ್ದುಗೊಳಿರುವುದು ಸ್ವತಂತ್ರ ಪತ್ರಿಕೋದ್ಯಮದ ಮೂಲ ಹಕ್ಕನ್ನು ಕಸಿದುಕೊಂಡಂತೆ ಎಂದು ಖಂಡಿಸಿವೆ. ಪ್ರಮುಖ ಮಾಧ್ಯಮಗಳ ನಿಯೋಗದಿಂದ ಸಿಎನ್‌ಎನ್ ಅನ್ನು ಹೊರಗಿಡಲಾಗಿದ್ದು, ಸಂಸದೀಯ ಹಾಗೂ ಅಧ್ಯಕ್ಷೀಯ ಪ್ರವಾಸಗಳ ನೇರ ವರದಿಗಾರಿಕೆಗೂ ಅಡ್ಡಿಪಡಿಸಲಾಗಿದೆ.
ಮಾಧ್ಯಮಗಳ ದಾವೆಗೆ ಸಾಮಾಜಿಕ ಜಾಲತಾಣ 'ಟ್ರೂತ್ ಸೋಷಿಯಲ್'ನಲ್ಲಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಶ್ವೇತಭವನವು ಸ್ವತಂತ್ರ ಪತ್ರಿಕೋದ್ಯಮದ ವಿರುದ್ಧ ದಾಳಿ ಮಾಡುತ್ತಿಲ್ಲ. ಬದಲಾಗಿ, ದೇಶಕ್ಕೆ ಕ್ಯಾನ್ಸರ್‌ನಂತೆ ಹರಡುತ್ತಿರುವ ನಕಲಿ ಸುದ್ದಿಗಳ ವಿರುದ್ಧ ಹೋರಾಡುತ್ತಿದೆ. ಈ ಮಾಧ್ಯಮಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದ್ದು, ಇವುಗಳನ್ನು ತಕ್ಷಣವೇ ಹದ್ದುಬಸ್ತಿನಲ್ಲಿಡಬೇಕಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಮತ್ತೊಂದೆಡೆ, ಈ ಪ್ರಕರಣದ ವಿಚಾರಣೆಯನ್ನು ವಹಿಸಿಕೊಂಡಿರುವ ಫೆಡರಲ್ ನ್ಯಾಯಾಧೀಶ ತಿಮೋತಿ ಜೆ. ಕೆಲ್ಲಿ ಅವರ ಕುರಿತು ಪರೋಕ್ಷವಾಗಿ ಅಸಮಾಧಾನ ಹೊರಹಾಕಿರುವ ಟ್ರಂಪ್, 2018 ರಲ್ಲಿ ಜಿಮ್ ಅಕೋಸ್ಟಾ ಪ್ರಕರಣದಲ್ಲೂ ಇವರೇ ಮಾಧ್ಯಮದ ಪರ ತೀರ್ಪು ನೀಡಿದ್ದರು ಎಂಬುದನ್ನು ಸ್ಮರಿಸಿ, ನ್ಯಾಯಾಲಯದ ನಿರ್ಧಾರ ತಮ್ಮ ವಿರುದ್ಧ ಬಂದರೆ ಮೇಲ್ಮನವಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.
ಮಾಧ್ಯಮಗಳ ಪರವಾಗಿ ಪ್ರಸಿದ್ಧ ಸಂವಿಧಾನ ತಜ್ಞ ಹಾಗೂ ವಕೀಲ ಟೆಡ್ ಬೌಟ್ರಸ್ ವಾದ ಮಂಡಿಸುತ್ತಿದ್ದಾರೆ. ಈ ಹಿಂದೆ ಶ್ವೇತಭವನದ ಪ್ರೆಸ್ ಪಾಸ್ ರದ್ದತಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ನೀಡಿರುವ ಮಹತ್ವದ ತೀರ್ಪುಗಳನ್ನು ಈ ದಾವೆಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
1977ರ 'ಶೆರಿಲ್ ವಿರುದ್ಧ ನೈಟ್' ಪ್ರಕರಣ: 'ದಿ ನೇಷನ್' ಪತ್ರಿಕೆಯ ವರದಿಗಾರ ರಾಬರ್ಟ್ ಶೆರಿಲ್ ಅವರ ಪ್ರೆಸ್ ಪಾಸ್ ರದ್ದುಗೊಳಿಸಿದ್ದಾಗ, ವಾಷಿಂಗ್ಟನ್ ಫೆಡರಲ್ ನ್ಯಾಯಾಲಯವು, "ವರದಿಯ ವಿಷಯ ಅಥವಾ ಸರ್ಕಾರದ ವಿರುದ್ಧದ ದೃಷ್ಟಿಕೋನವನ್ನು ಆಧರಿಸಿ ಪತ್ರಕರ್ತರನ್ನು ಶ್ವೇತಭವನದಿಂದ ಹೊರಗಿಡುವುದು ಮೊದಲ ತಿದ್ದುಪಡಿಯ ಸ್ಪಷ್ಟ ಉಲ್ಲಂಘನೆ" ಎಂದು ತೀರ್ಪು ನೀಡಿತ್ತು.
ಟ್ರಂಪ್ ಮೊದಲ ಅವಧಿಯ ತೀರ್ಪುಗಳು: 2018 ರಲ್ಲಿ ಸಿಎನ್‌ಎನ್‌ನ ಜಿಮ್ ಅಕೋಸ್ಟಾ ಹಾಗೂ 'ಪ್ಲೇಬಾಯ್' ವರದಿಗಾರ ಬ್ರಿಯಾನ್ ಕರೆಮ್ ಅವರ ಪ್ರೆಸ್ ಬ್ಯಾಡ್ಜ್‌ಗಳನ್ನು ನಿಷೇಧಿಸಿದಾಗಲೂ ನ್ಯಾಯಾಲಯವು ಟ್ರಂಪ್ ಆಡಳಿತಕ್ಕೆ ಹಿನ್ನಡೆ ಉಂಟುಮಾಡಿ, ಪತ್ರಕರ್ತರ ಪರವಾಗಿ ಆದೇಶಿಸಿತ್ತು.
ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿರುವ ಮನವಿಯ ಕುರಿತು ವಿಚಾರಣೆಗಳು ಶೀಘ್ರವೇ ಆರಂಭವಾಗಲಿವೆ. "ಶ್ವೇತಭವನ ಅಥವಾ ಸರ್ಕಾರಿ ಕಟ್ಟಡಗಳಿಗೆ ನಮಗೆ ಭೌತಿಕ ಪ್ರವೇಶ ನಿರಾಕರಿಸಿದರೂ, ಅಮೆರಿಕ ಸರ್ಕಾರದ ಕುರಿತು ಸತ್ಯನಿಷ್ಠ ಹಾಗೂ ನಿಷ್ಪಕ್ಷಪಾತ ವರದಿಗಾರಿಕೆಯನ್ನು ಮುಂದುವರಿಸುವ ಸಿಎನ್‌ಎನ್ ಹಾಗೂ ಇತರ ಮಾಧ್ಯಮಗಳ ಧ್ಯೇಯಕ್ಕೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ" ಎಂದು ಸಂಸ್ಥೆಗಳು ಜಂಟಿಯಾಗಿ ಸ್ಪಷ್ಟಪಡಿಸಿವೆ. ಈ ಪ್ರಕರಣವು ಈಗ ಅಮೆರಿಕನ್ ಪ್ರಜಾಪ್ರಭುತ್ವ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಘಟ್ಟವನ್ನು ತಲುಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ