ಮೊದಲ ಬಾರಿ ಚೀನಾದಲ್ಲಿ ವೈರಸ್‌ಗೆ ಒಂದೂ ಸಾವಿಲ್ಲ!

By Kannadaprabha NewsFirst Published Apr 8, 2020, 10:01 AM IST
Highlights

ಮೊದಲ ಬಾರಿ ಚೀನಾದಲ್ಲಿ ವೈರಸ್‌ಗೆ ಒಂದೂ ಸಾವಿಲ್ಲ| ಜನವರಿ ಬಳಿಕ ಸಾವಿಲ್ಲದ ಪ್ರಥಮ ದಿನ

ಬೀಜಿಂಗ್‌(ಏ.08): ಇಡೀ ಜಗತ್ತಿಗೆ ಕೊರೋನಾ ಹಬ್ಬಿಸಿದ ಆರೋಪ ಹೊತ್ತಿರುವ ಮತ್ತು ತನ್ನ ದೇಶದಲ್ಲಿ ಅದೇ ಸೋಂಕಿನ ವಿರುದ್ಧ ಕಂಡುಕೇಳರಿಯದ ರೀತಿ ಹೋರಾಟ ನಡೆಸುತ್ತಿರುವ ಚೀನಾಕ್ಕೆ ಸೋಮವಾರ ದೊಡ್ಡ ಯಶಸ್ಸು ಸಿಕ್ಕಿದೆ. ಸೋಮವಾರ ದೇಶದ ಯಾವುದೇ ಭಾಗದಿಂದಲೂ ಕೊರೋನಾ ಸೋಂಕಿಗೆ ಯಾವುದೇ ವ್ಯಕ್ತಿ ಬಲಿಯಾದ ಮಾಹಿತಿ ಬಂದಿಲ್ಲ ಎಂದು ಚೀನಾ ಸರ್ಕಾರ ಘೋಷಿಸಿದೆ.

ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಮಾಹಿತಿಯನ್ನು ಕಳೆದ ಜನವರಿಯಿಂದ ನಿತ್ಯ ಪ್ರಕಟಿಸುತ್ತಿದ್ದ ಚೀನಾ ಸರ್ಕಾರ, ಇದೇ ಮೊದಲ ಬಾರಿಗೆ ಏ.6 ರಂದು ದೇಶದಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ ಎಂದು ಘೋಷಿಸಿದೆ. ಇದು ಕೊರೋನಾ ನಿಗ್ರಹದಲ್ಲಿ ಚೀನಾ ಕೈಗೊಂಡ ಅಭೂತಪೂರ್ವ ನಿಯಂತ್ರಣಾ ಕ್ರಮಗಳಿಗೆ ಸಿಕ್ಕಿದ ಜಯದ ಮೊದಲ ಸುಳಿವು ಎನ್ನಲಾಗಿದೆ.

"

ಆ ದೇಶದಲ್ಲಿ ಈವರೆಗೆ 81740 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 3331 ಜನ ಸಾವನ್ನಪ್ಪಿದ್ದಾರೆ. 1242 ಜನರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 77167 ಜನರ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ.

ಈ ನಡುವೆ ಸ್ಥಳೀಯವಾಗಿ ಸೋಂಕು ಹರಡಿದ ಯಾವುದೇ ಹೊಸ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೆ ವಿದೇಶದಿಂದ ಬಂದ 32 ಜನರಲ್ಲಿ ಸೋಮವಾರ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 30 ಜನರಲ್ಲಿ ಯಾವುದೇ ರೋಗಲಕ್ಷಣ ಇಲ್ಲದೆಯೇ ಸೋಂಕು ತಗುಲಿರುವ ಪ್ರಕರಣಗಳಾಗಿವೆ ಎಂದು ಸರ್ಕಾರ ತಿಳಿಸಿದೆ. ಈವರೆಗೆ ಈ ರೀತಿಯಲ್ಲಿ ರೋಗ ಲಕ್ಷಣ ಇಲ್ಲದೆಯೇ ಸೋಂಕಿಗೆ ತುತ್ತಾಗಿರುವ 1033 ಪ್ರಕರಣಗಳು ಚೀನಾದಲ್ಲಿ ಬೆಳಕಿಗೆ ಬಂದಿವೆ.

click me!