
ನವದೆಹಲಿ(ಜ.26): ದಕ್ಷಿಣ ಏಷ್ಯಾದ ತನ್ನ ಮಿತ್ರ ದೇಶಗಳಿಗೆ ಭಾರತ ಸರ್ಕಾರ ಆದ್ಯತೆಯ ಮೇಲೆ ಕೊರೋನಾ ಲಸಿಕೆ ವಿತರಣೆ ಆರಂಭಿಸಿದ ಬೆನ್ನಲ್ಲೇ, ಚೀನಾ ತನ್ನ ಕುಟಿಲಬುದ್ಧಿ ಪ್ರದರ್ಶಿಸಲು ಆರಂಭಿಸಿದೆ. ಚೀನಾ ಸರ್ಕಾರದ ಮುಖವಾಣಿಯಾಗಿರುವ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ಲಸಿಕೆ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯವನ್ನೇ ಪ್ರಶ್ನಿಸುವ, ಚೀನಾದಲ್ಲಿನ ಭಾರತೀಯರು, ಚೀನಾ ಲಸಿಕೆ ಬಗ್ಗೆ ವಿಶ್ವಾಸಾರ್ಹತೆ ವ್ಯಕ್ತಪಡಿಸಿರುವ ಮಾಹಿತಿಯ ಸರಣಿ ಲೇಖನಗಳನ್ನು ಪ್ರಕಟಿಸಿದೆ.
ಇತ್ತೀಚಿಗೆ ಸೀರಂ ಇನ್‌ಸ್ಟಿಟ್ಯೂಟ್‌ಗೆ ಬೆಂಕಿ ಬಿದ್ದ ಪ್ರಕರಣ ಉಲ್ಲೇಖಿಸಿ, ಕಂಪನಿಗೆ ಗುಣಮಟ್ಟದ ಲಸಿಕೆ ಉತ್ಪಾದನೆಯ ಸಾಮರ್ಥ್ಯ ಇರುವುದನ್ನು ಪ್ರಶ್ನಿಸಿದೆ. ಇನ್ನೊಂದು ಲೇಖನದಲ್ಲಿ ದಕ್ಷಿಣ ಏಷ್ಯಾ ದೇಶಗಳಿಗೆ ಭಾರತ ಲಸಿಕೆಯನ್ನು ನೆರವಿನ ರೂಪದಲ್ಲಿ ನೀಡಿದೆಯೇ ಹೊರತು, ಆ ದೇಶಗಳು ಹಣಕೊಟ್ಟು ಖರೀದಿಸಿಲ್ಲ ಎಂದು ವ್ಯಂಗ್ಯವಾಡಲಾಗಿದೆ. ಮತ್ತೊಂದು ಲೇಖನದಲ್ಲಿ ಚೀನಾದಲ್ಲಿನ ಭಾರತೀಯ ರೆಸ್ಟೋರೆಂಟ್ ಉದ್ಯೋಗಿಗಳು, ಚೀನಾ ಉತ್ಪಾದಿತ ಲಸಿಕೆಯನ್ನೇ ಪಡೆಯುವ ಭರವಸೆ ನೀಡಿರುವ ಬಗ್ಗೆ ಮತ್ತು ಭಾರತದ ಆರೋಗ್ಯ ಕಾರ್ಯಕರ್ತರು ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ಭಾರತ ಇದುವರೆಗೆ ಶ್ರೀಲಂಕಾ, ಆಷ್ಘಾನಿಸ್ತಾನ, ಪಾಕಿಸ್ತಾನ ಹೊರತುಪಡಿಸಿ ದಕ್ಷಿಣ ಏಷ್ಯಾದ ಉಳಿದೆಲ್ಲಾ ದೇಶಗಳಿಗೆ ಉಚಿತ ಲಸಿಕೆ ಪೂರೈಸಿದೆ. ಇನ್ನು ಲಂಕಾ ಮತ್ತು ಆಷ್ಘಾನಿಸ್ತಾನಕ್ಕೂ ಇದೇ ವಾರದಲ್ಲಿ ರವಾನಿಸುವ ಸಾಧ್ಯತೆ ಇದೆ.
ಆದರೆ ಮತ್ತೊಂದೆಡೆ ಚೀನಾದ ಆಪ್ತ ಮಿತ್ರ ದೇಶಗಳೇ, ಆ ದೇಶದ ಲಸಿಕೆ ನಿರಾಕರಿಸಿ, ಭಾರತ ಉತ್ಪಾದಿಸಿರುವ ಲಸಿಕೆ ಖರೀದಿಗೆ ಒಲವು ತೋರಿವೆ. ಇದು ಚೀನಾ ಸರ್ಕಾರದ ಬೇಗುದಿಗೆ ಕಾರಣವಾಗಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ