Israel Strict Divorce Law: 8 ಸಾವಿರ ವರ್ಷ ಇಸ್ರೇಲ್ ದೇಶವನ್ನು ತೊರೆಯುವಂತಿಲ್ಲ ಎಂದ ಕೋರ್ಟ್!

ಆಸೀಸ್‌ ವ್ಯಕ್ತಿ ವಿರುದ್ಧ ವಿಚ್ಛೇದನ ಪ್ರಕರಣ ದಾಖಲಿಸಿದ ಇಸ್ರೇಲ್ ಮಹಿಳೆ
9999 ಡಿಸೆಂಬರ್ 31ರವರೆಗೂ ದೇಶವನ್ನು ತೊರೆಯುವಂತಿಲ್ಲ ಎಂದು ಆದೇಶ ನೀಡಿದ ಕೋರ್ಟ್
ರಜಾ ದಿನ ಅಥವಾ ಅನ್ಯ ಕೆಲಸದ ನಿಮಿತ್ತವೂ ದೇಶವನ್ನು ಬಿಡುವಂತಿಲ್ಲ


ಟೆಲ್ ಅವೀವ್ (ಡಿ.25): ಇದನ್ನು ಇಸ್ರೇಲ್  (Israel) ದೇಶದ ವಿಲಕ್ಷಣ ಕಾನೂನು (Law) ಎನ್ನಬೇಕೋ ಅಥವಾ ಕಠಿಣ ಕಾನೂನು ಎನ್ನಬೇಕೋ ಅನ್ನೋದನ್ನು ಸುದ್ದಿಯನ್ನು ಓದಿದ ಬಳಿಕ ತೀರ್ಮಾನ ಮಾಡಿ. ಯಾಕೆಂದರೆ, ವಿಚ್ಛೇದನ ಪ್ರಕರಣವೊಂದರಲ್ಲಿ ಇಸ್ರೇಲ್ ನ ಕೋರ್ಟ್ ಅಸ್ಟ್ರೇಲಿಯಾದ (Australia) ವ್ಯಕ್ತಿಗೆ 31 ಡಿಸೆಂಬರ್ 9999ರ ವರೆಗೆ ಇಸ್ರೇಲ್ ದೇಶವನ್ನು ತೊರೆಯದೇ ಇರುವಂತೆ ಆದೇಶ ಹೊರಡಿಸಿದೆ. ಅಂದರೆ, ಅಂದಾಜು ಇನ್ನೂ 8 ಸಾವಿರ ವರ್ಷಗಳ ಕಾಲ ಆಸೀಸ್ ವ್ಯಕ್ತಿ ಇಸ್ರೇಲ್ ನಲ್ಲಿಯೇ ಜೀವನ ಸಾಗಿಸಬೇಕಿದೆ..!!

44 ವರ್ಷದ ಆಸೀಸ್ ಪ್ರಜೆ ನೋಮ್ ಹಪ್ಪರ್ಟ್ (Noam Huppert) ಈ ವಿಲಕ್ಷಣ ಹಾಗೂ ಕಠಿಣ ಶಿಕ್ಷೆಗೆ ತುತ್ತಾದ ವ್ಯಕ್ತಿ. ಒಂದೋ 9999 ಡಿಸೆಂಬರ್ 31ರವರೆಗೆ ಇಸ್ರೇಲ್ ನಲ್ಲಿ ಇರಬೇಕು ಅದಾಗದೇ ಇದ್ದಲ್ಲಿ ಭವಿಷ್ಯದಲ್ಲಿ ಮಕ್ಕಳ ಬೆಳವಣಿಗೆ ಹಾಗೂ ಅವರ ಅಗತ್ಯಗಳಿಗಾಗಿ 18.19 ಕೋಟಿ ರೂಪಾಯಿ (3.34 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್) ನೀಡಬೇಕು ಎಂದು ಕೋರ್ಟ್ ಹೇಳಿದೆ. ಹಣ ಕಟ್ಟಲು ಸಾಧ್ಯವಾಗದೇ ಇದ್ದಲ್ಲಿ ಇನ್ನೂ 8 ಸಾವಿರ ವರ್ಷಗಳ ಕಾಲ ಇಸ್ರೇಲ್ ನಲ್ಲಿಯೇ ಉಳಿದುಕೊಳ್ಳಬೇಕಿದೆ.

ಆಸೀಸ್ ಪ್ರಜೆಯಾಗಿರುವ ಹಪ್ಪರ್ಟ್ ತನ್ನ ಮಕ್ಕಳಿಗೆ ಹತ್ತಿರವಾಗುವ ನಿಟ್ಟಿನಲ್ಲಿ 2012ರಲ್ಲಿ ತನ್ನ ಮಾಜಿ ಪತ್ನಿಯ ದೇಶವಾಗಿದ್ದ ಇಸ್ರೇಲ್ ಗೆ ತೆರಳಿದ್ದರು. ಈ ವೇಳೆ ಆಕೆ, ಇಸ್ರೇಲ್ ನ್ಯಾಯಾಲಯದಲ್ಲಿ (Israeli court) ಹಪ್ಪರ್ಟ್ ವಿರುದ್ಧ ವಿಚ್ಛೇದನ (Divorce Law) ಮೊಕದ್ದಮೆಯನ್ನು ಹೂಡಿದ್ದಳು. ಬಹಳಷ್ಟು ವಿಚಾರಣೆಯ ಬಳಿಕ 2013ರಲ್ಲಿ ಇಸ್ರೇಲ್ ಕೋರ್ಟ್ ಹಪ್ಪರ್ಟ್ ಗೆ "ಸ್ಟೇ ಆಫ್ ಎಕ್ಸಿಟ್" (stay-of-exit)ಆದೇಶವನ್ನು ಹೊರಡಿಸಿದ್ದು, 9999ರ ಡಿಸೆಂಬರ್ 31ರವರೆಗೆ ದೇಶ ಬಿಡುವಂತಿಲ್ಲ ಎಂದು ಹೇಳಲಾಗಿದೆ. ಇನ್ನು ಮಕ್ಕಳಿಗೆ 18 ವರ್ಷ ತುಂಬುವರೆಗೆ ಅವರ ಭವಿಷ್ಯದ ಸಾಲ 5 ಸಾವಿರ ಇಸ್ರೇಲಿ ಶೆಕೆಲ್ (Israeli shekel) ಆಗಿರಲಿದೆ. ಇದರ ಒಟ್ಟಾರೆ ಅರ್ಥವೇನೆಂದರೆ, ರಜೆ, ಅನ್ಯ ಕೆಲಸ ಯಾವುದೇ ಕಾರಣವಿದ್ದರೂ ಹಪ್ಪರ್ಟ್ ಮಾತ್ರ ಇಸ್ರೇಲ್ ದೇಶವನ್ನು ತೊರೆಯುವಂತಿಲ್ಲ.

Divorced Celebrities Of 2021: ಈ ವರ್ಷ ವಿಚ್ಛೇದನ ಪಡೆದುಕೊಂಡ ತಾರೆಯರ ಪಟ್ಟಿ ಇಲ್ಲಿದೆ..
"2013ರಿಂದ ನಾನು ಇಸ್ರೇಲ್ ನಲ್ಲಿಯೇ ಲಾಕ್ ಆಗಿದ್ದೇನೆ. ಇಸ್ರೇಲ್ ನ ಮಹಿಳೆಯರನ್ನು ಮದುವೆಯಾಗಿರುವ ಕಾರಣಕ್ಕೆ ಇಸ್ರೇಲ್ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷೆ ಪಡೆಯುತ್ತಿರುವ ವಿದೇಶಿ ವ್ಯಕ್ತಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ' ಎಂದು ಹಪ್ಪರ್ಟ್ ಹೇಳಿದ್ದಾರೆ. ಔಷಧ ಕಂಪನಿಯೊಂದಕ್ಕೆ ರಸಾಯನಶಾಸ್ತ್ರ ವಿಶ್ಲೇಷಕರಾಗಿ (Analytical Chemist) ಕೆಲಸ ಮಾಡುತ್ತಿರುವ ಹಪ್ಪರ್ಟ್ ತಮ್ಮ ಕಥೆಯನ್ನು ವಿಶ್ವದ ಇತರ ಜನರಿಗೂ ತಿಳಿಸುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದಾರೆ. ಬಹುಶಃ ಜೀವಕ್ಕೆ ಅಪಾಯಕಾರಿಯಾಗಿರುವ ನನ್ನ ಅನುಭವ ಆಸ್ಟ್ರೇಲಿಯಾದ ಅಥವಾ ವಿಶ್ವದ ಇತರ ವ್ಯಕ್ತಿಗಳಿಗೆ ಸಹಾಯವಾಗಬಹುದು ಎಂದು ಹಪ್ಪರ್ಟ್ ಹೇಳುತ್ತಾರೆ.

triple talaq to ill wife: ಎಂಥಾ ಗಂಡ.... ಡಾಕ್ಟರ್‌ ಬಳಿ ಕರೆದುಕೊಂಡು ಹೋಗು ಎಂದಿದ್ದಕ್ಕೆ ತಲಾಖ್‌
ಚೈಲ್ಡ್ ಸಪೋರ್ಟ್ ಪೇಮೆಂಟ್ ಸಿಗುವವರೆಗೂ ತನ್ನ ಮಗುವಿನ ತಂದೆಗೆ ಮಹಿಳೆಯೊಬ್ಬಳು ಪ್ರಯಾಣ ನಿರ್ಬಂಧವನ್ನು ಹೇರಬಹುದು. ಅಂಥದ್ದೊಂದು ವಿಚ್ಛೇದನ ಕಾನೂನು ಇಸ್ರೇಲ್ ನಲ್ಲಿದೆ ಎಂದು ನೋ ಎಕ್ಸಿಟ್ ಆರ್ಡರ್ (No Exit Order) ಎನ್ನುವ ಸಾಕ್ಷ್ಯ ಚಿತ್ರದ ನಿರ್ದೇಶದ ಸೋರಿನ್ ಲುಕಾ (Sorin Luca) ಹೇಳಿದ್ದಾರೆ. ಒಮ್ಮೆ ಯಾವುದಾದರೂ ವ್ಯಕ್ತಿಯ ಮೇಲೆ ಸ್ಟೇ ಆಫ್ ಎಕ್ಸಿಟ್ ಜಾರಿಯಾದರೆ, ಆತನಲ್ಲಿ ಹಣ ಕಟ್ಟುವ ಸಾಮರ್ಥ್ಯ ಇದೆಯೋ ಇಲ್ಲವೋ, ಆತನ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಕನಿಷ್ಠ ತನಿಖೆಯನ್ನೂ ಮಾಡದೇ 21 ದಿನಗಳ ಜೈಲು ಶಿಕ್ಷೆ ನೀಡಲಾಗುತ್ತದೆ ಅಥವಾ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶೇಕಡಾ 100 ಅಥವಾ ಅದಕ್ಕೂ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ ಎಂದು ಹೇಳಿದ್ದಾರೆ. ಈ ಕುರಿತಾಗಿ ಬ್ರಿಟಿಷ್ ಪತ್ರಕರ್ತೆ ಮರಿಯಾನ್ನೆ ಅಜಿಝಿ ಹೋರಾಟ ನಡೆಸುತ್ತಿದ್ದು, ಎಷ್ಟು ಮಂದಿ ಪುರುಷರು ಈ ಕಾನೂನಿ ಅಡಿಯಲ್ಲಿ ಶಿಕ್ಷೆಗೆ ಒಳಪಟ್ಟಿದ್ದಾರೆ ಎಂದು ಅಂದಾಜು ಮಾಡುವುದು ಕಷ್ಟ ಎಂದಿದ್ದಾರೆ.

click me!