* ಭಾರತೀಯರ ತೆರವಿಗೆ ತಾಲಿಬಾನಿಗಳದ್ದೇ ರಕ್ಷಣೆ!
* ರಾಯಭಾರ ಕಚೇರಿಯಿಂದ ಏರ್‌ಪೋರ್ಟ್‌ಗೆ ತೆರಳಲು ರಕ್ಷಣೆ
* ಸೋಮವಾರ ಕಾಬೂಲ್‌ನಲ್ಲಿ ನಡೆದ ಅಚ್ಚರಿಯ ಬೆಳವಣಿಗೆ
ನವದೆಹಲಿ(ಆ.19): ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯ ರಾಯಭಾರ ಸಿಬ್ಬಂದಿಯನ್ನು ತೆರವುಗೊಳಿಸಲು ಸ್ವತಃ ತಾಲಿಬಾನ್ ಉಗ್ರರೇ ನೆರವು ನೀಡಿದ್ದರು ಎಂಬ ಕುತೂಹಲಕರ ಸಂಗತಿಯೊಂದು ಬೆಳಕಿಗೆ ಬಂದಿದೆ.
ಹೌದು, ಭಾರತೀಯ ರಾಯಭಾರಿಗಳು, ಅಧಿಕಾರಿಗಳು ಸೇರಿದಂತೆ 150 ಜನರನ್ನು ಕರೆತರಲು ಭಾರತೀಯ ವಾಯುಪಡೆಯ ವಿಮಾನ ಮಂಗಳವಾರ ಕಾಬೂಲ್‌ಗೆ ತೆರಳಿತ್ತು. ಆದರೆ ಕಾಬೂಲ್‌ನ ಎಲ್ಲಾ ಪ್ರದೇಶಗಳಲ್ಲೂ ತಾಲಿಬಾನಿಗಳು ಪಹರೆ ಕಾಯುತ್ತಿದ್ದ ಕಾರಣ, ರಾಯಭಾರ ಕಚೇರಿಯಲ್ಲಿದ್ದ ಸುಮಾರು 150 ಜನರಿಗೆ ಅಲ್ಲಿಂದ ಏರ್‌ಪೋರ್ಟ್‌ಗೆ ತೆರಳುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ತಾಲಿಬಾನಿ ಮುಖಂಡರ ಸಂಪರ್ಕ ಬೆಳೆಸಿದ ಭಾರತೀಯ ಅಧಿಕಾರಿಗಳು, ಏರ್‌ಪೋರ್ಟ್‌ಗೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ 2 ಬಾರಿ ಇಂಥ ಅನುಮತಿ ನಿರಾಕರಿಸಲಾಗಿತ್ತು.
undefined
ಹೀಗಾಗಿ ಮಂಗಳವಾರ ಸಂಜೆ ಹಲವು ಗಂಟೆಗಳ ಕಾಲ 150 ಭಾರತೀಯರು ಆತಂಕದಲ್ಲೇ ಕಾಲಕಳೆಯುವಂತಾಗಿತ್ತು. ಕೊನೆಗೆ ಮೂರನೇ ಬಾರಿಗೆ ಬೇರೆ ಬೇರೆ ಮೂಲಗಳ ಮೂಲಕ ಸಂಪರ್ಕ ಬೆಳೆಸಿದ ಬಳಿಕ ಭಾರತೀಯರಿಗೆ ಕಟ್ಟಡದಿಂದ ಹೊರಗೆ ಬರಲು ಉಗ್ರರು ಅನುಮತಿ ನೀಡಿದರು. ಅಷ್ಟುಮಾತ್ರವಲ್ಲ ಸ್ವತಃ ತಾವೇ ಭಾರತೀಯ ರಾಯಭಾರ ಕಚೇರಿ ಮುಂದೆ ಶಸ್ತ್ರಾಸ್ತ್ರಗಳೊಂದಿಗೆ ನಿಂತು ಭಾರತೀಯ ತಂಡಕ್ಕೆ ರಕ್ಷಣೆ ನೀಡಿದರು. ಜೊತೆಗೆ ನಗುತ್ತಲೇ ಭಾರತೀಯರನ್ನು ಬೀಳ್ಕೊಟ್ಟು, ವಿಮಾನ ನಿಲ್ದಾಣದವರೆಗೂ ಬಂದು ರಕ್ಷಣೆ ನೀಡಿದ್ದಾರೆ.
5 ಕಿ.ಮೀಗೆ 5 ತಾಸು:
ರಾಯಭಾರ ಕಚೇರಿಯಿಂದ ವಿಮಾನ ನಿಲ್ದಾಣಕ್ಕೆ 5 ಕಿ.ಮೀ.ದೂರ ಇದ್ದು, ಇಷ್ಟುದೂರ ಕ್ರಮಿಸಲು ಭಾರತೀಯರಿದ್ದ ವಾಹನಕ್ಕೆ 5 ತಾಸು ಬೇಕಾಗಿದೆ. ಕಾರಣ, ರಸ್ತೆಯುದ್ದಕ್ಕೂ ಸಾವಿರಾರು ಜನರು ಏರ್‌ಪೋರ್ಟ್‌ನತ್ತ ಧಾವಿಸುತ್ತಿದ್ದ ಕಾರಣ ಹೆಜ್ಜೆಹೆಜ್ಜೆಗೂ ನಿಂತು ನಿಂತೇ ಸಾಗಬೇಕಾದ ಕಾರಣ, ಪ್ರಯಾಸದಿಂದ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಏರ್‌ಪೋರ್ಟ್ ತಲುಪಿದ ಬಳಿಕ ಅಲ್ಲಿ ಅಮೆರಿಕದ ಭದ್ರತೆಯಲ್ಲಿ ಒಳಸೇರಿ, ಅಲ್ಲಿಂದ ವಿಮಾನ ಏರಿದ ತಂಡ ಮಂಗಳವಾರ ಮಧ್ಯಾಹ್ನ ಭಾರತಕ್ಕೆ ಬಂದಿಳಿದಿದೆ.